ನಿಂತು ನೀರು ಕುಡಿಯಬಾರದು, ಕುಳಿತು ನೀರು ಕುಡಿಯಬೇಕು ಅಂತ ಯಾಕೆ ಹೇಳ್ತಾರೆ?

water
Published on

ಬೆಂಗಳೂರು: ನಿಂತುಕೊಂಡು ನೀರು ಕುಡಿಯಬಾರದು, ಕುಳಿತುಕೊಂಡು ನೀರು ಕುಡಿಯಬೇಕು ಅಂತ ಕೆಲವರು ಹೇಳುವುದನ್ನು ನೀವು ಕೇಳಿರಬಹುದು. ಯಾಕೆ ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಮಾಡಿಲ್ಲ ಅಂದ್ರೆ ಇಂದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

ಆಯುರ್ವೇದ ಹೇಳುವುದೇನು?
ಆಯುರ್ವೇದದ ಪ್ರಕಾರ, ನಿಂತು ನೀರು ಕುಡಿಯುವುದರಿಂದ ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀಡುತ್ತದೆ. ನೀರು ಹೆಚ್ಚಿನ ವೇಗದೊಂದಿಗೆ ಹೋಗಿ ಹೊಟ್ಟೆಯೊಳಗೆ ಬೀಳುತ್ತದೆ. ಇದರಿಂದ ಹೊಟ್ಟೆಯೊಳಗಿರುವ ದ್ರವಗಳ ಸಮತೋಲನ ತಪ್ಪಿ, ಅಜೀರ್ಣದ ಸಮಸ್ಯೆ ಉಂಟಾಗಬಹುದು.

ಸಂಧಿವಾತ ರೋಗ
ಅಷ್ಟೇ ಅಲ್ಲ, ನಿಂತು ನೀರು ಕುಡಿದರೆ ಆ ನೀರು ದೇಹದ ಕೀಲು ಭಾಗಗಳಿಗೆ, ಅಂದ್ರೆ ಜಾಯಿಂಟ್‌ಗಳಲ್ಲಿ ಸೇರಿಕೊಳ್ಳುತ್ತದೆ. ಆ ಮೂಲಕ ಆರ್ಥ್ರಿಟಿಸ್‌ಗೆ, ಅಂದ್ರೆ ಸಂಧಿವಾತ ರೋಗಕ್ಕೆ ಕಾರಣವಾಗಬಹುದು. ನೀರನ್ನು ಕುಳಿತು ಕುಡಿದರೆ ಮಾತ್ರ ಮನುಷ್ಯನ ದೇಹಕ್ಕೆ ಅದರಿಂದ ಸಿಗಬೇಕಾದ ಪ್ರಯೋಜನ ಸಿಗುತ್ತದೆ ಎನ್ನುವುದು ಆಯುರ್ವೇದದ ವಾದ.

ಅಲೋಪಥಿ ವೈದ್ಯರ ಅನಿಸಿಕೆ
ಆದರೆ, ನಿಂತಾದರೂ ಕುಡೀರಿ, ಕುಳಿತಾದರೂ ಕುಡೀರಿ, ಅದರಿಂದ ಮನುಷ್ಯನ ದೇಹದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವವರೂ ಇದ್ದಾರೆ. ಮಲಗಿಕೊಂಡು ಮಾತ್ರ ನೀರು ಕುಡಿಯಬಾರದು. ಯಾಕೆಂದರೆ ಅದರಿಂದ ಮನುಷ್ಯನ ಉಸಿರಾಟಕ್ಕೆ ತೊಂದರೆ ಆಗಬಹುದು ಎಂಬುದು ಅಲೋಪಥಿ ವೈದ್ಯರೊಬ್ಬರ ಅಭಿಪ್ರಾಯ.

ನೀರನ್ನು ಹೀರಿಕೊಳ್ಳುವ ವ್ಯವಸ್ಥೆ
ಕುಡಿದ ನೀರು ನಮ್ಮ ಕರುಳಿನ ಗೋಡೆಯ ಮೂಲಕ ಸಣ್ಣ ಕರುಳಿನ ಆರಂಭಿಕ ಭಾಗವನ್ನು ತಲುಪುತ್ತದೆ. ಅಲ್ಲಿ ಆ ನೀರನ್ನು ಹೀರಿಕೊಳ್ಳುವ ವ್ಯವಸ್ಥೆ ಇರುತ್ತದೆ. ಶೇಕಡ 66ರಷ್ಟು ನೀರು ಅಂತರ್‌ಜೀವಕೋಶದ ದ್ರವವಾಗಿ ಮಾರ್ಪಾಡಾಗುತ್ತದೆ. ಶೇಕಡ 25ರಷ್ಟು ನೀರು ಅಂಗಾಂಶಗಳ ಒಳಗಿನ ಜೀವಕೋಶವನ್ನು ತಲುಪುತ್ತದೆ. ಉಳಿದ ಶೇಕಡ 9ರಷ್ಟು ನೀರು ರಕ್ತದೊಳಗೆ ಅಂತರ್ಗತವಾಗುತ್ತದೆ. ಹೀಗೆ ಮನುಷ್ಯನ ದೇಹವನ್ನು ಸೇರಿಕೊಳ್ಳುವ ನೀರು ಹೊರಹೋಗುವುದು ಕಿಡ್ನಿಗಳ ಮೂಲಕ. ಅದೂ ಪೂರ್ಣ ಪ್ರಮಾಣದಲ್ಲಿ ಅಲ್ಲ, ಶುದ್ಧೀಕರಿಸಿದ ನೀರಿನ ಸ್ವಲ್ಪ ಭಾಗವನ್ನು ದೇಹ ಮತ್ತೆ ಹೀರಿಕೊಳ್ಳುತ್ತದೆ.

ಹೆಚ್ಚು ನೀರು ಕುಡಿಯಿರಿ
ದೇಹದ ಚಟುವಟಿಕೆಗೆ ನೀರು ಅತ್ಯಂತ ಅವಶ್ಯಕ. ಪ್ರತಿದಿನ ಸಾಕಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ, ಅಂದ್ರೆ ಡೀಹೈಡ್ರೇಷನ್ ಆಗುವುದು ನಿಶ್ಚಿತ. ಅದರಿಂದ ಮುಂದೆ ಗಂಭೀರ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯುವುದು ಒಳ್ಳೆಯದು. ಇದಲ್ಲದೆ ಆಗಾಗ ಎಳನೀರು, ಮನೆಯಲ್ಲೇ ಮಾಡಿದ ಫ್ರೆಶ್ ಫ್ರುಟ್ ಜ್ಯೂಸ್, ನಿಂಬೆಹಣ್ಣಿನ ನೀರು ಮುಂತಾದವುಗಳನ್ನು ಸೇವಿಸುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net