

ಎತ್ತರಕ್ಕೆ ಏರಬೇಕು ಎಂಬುದು ಮಾನವನ ಸಹಜ ಸ್ವಭಾವಗಳಲ್ಲಿ ಒಂದು. ಈ ಬಯಕೆಯು ಅನೇಕ ಸಾಧನೆ-ಅನ್ವೇಷಣೆಗಳಿಗೂ ಕಾರಣವಾಗಿದ್ದನ್ನು ಮನುಕುಲದ ಇತಿಹಾಸ ದಾಖಲಿಸಿದೆ. ಹೀಗೆಂದೇ, ವಿಮಾನ, ಹೆಲಿಕಾಪ್ಟರ್ ಇವನ್ನೆಲ್ಲ ಕಂಡಾಗ ನಮ್ಮ ಮನದಲ್ಲೂ ಆಗಸದೆತ್ತರಕ್ಕೆ ಏರುವ ಉತ್ಸಾಹ ಮೂಡುತ್ತದೆ. ಚೆಂದದ ಹಕ್ಕಿ ಸ್ವಚ್ಛಂದವಾಗಿ ಹಾರಾಡುವುದನ್ನು ಕಂಡಾಗ ಆನಂದದ ಜೊತೆಗೆ ನಾವೂ ಹಕ್ಕಿಯಂತೆ ಹಾರುವ ಹಾಗೆ ಇದ್ದಿದ್ದರೆ ಎಂದು ಮನ ಹೇಳುತ್ತದೆ. ಆಗಸದ ಮೇಲಿನಿಂದ ಕಾಣುವ ನೋಟ ಭೂಮಿಯಲ್ಲಿ ಗೋಚರಿಸುವುದಕ್ಕಿಂತ ಭಿನ್ನ. ಹಾಗೇ, ಭೂಮಿಯನ್ನು ಹೊರತುಪಡಿಸಿ ಆಗಸದಲ್ಲಿ ಜೀವಿಗಳು ವಾಸ ಮಾಡಬಹುದೇ? ಅನ್ಯಗ್ರಹಗಳಲ್ಲಿ ಜೀವಸಂಕುಲ ಇದೆಯೇ? ಅಲ್ಲಿನ ವಾತಾವರಣ ಹೇಗಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರಕಲು ಸಹ ಗಗನಯಾನ ಮತ್ತು ಅಧ್ಯಯನ ಬೇಕು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗೆ ಭಾರತದ ಶುಭಾಂಶು ಶುಕ್ಲಾ ಹಾಗೂ ಇತರ ಮೂವರು ಗಗನಯಾನಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್ಎಸ್) ನಲ್ಲಿ ಪ್ರಯೋಗನಿರತರಾಗಿ ವಾಪಸ್ ಭುವಿಯತ್ತ ಪಯಣ ಬೆಳೆಸಲು ತಯಾರಿ ಮಾಡುತ್ತ ಇರಬೇಕಿತ್ತು. ಆದರೆ ಪ್ರಯಾಣವೇ ಹಾಗೆ. ಕೆಲವೊಮ್ಮೆ ನಾವು ಅಂದುಕೊಂಡ ಹಾಗೆ ದಾರಿ ಸಾಗುವುದಿಲ್ಲ. ಇಂಥ ದಿನ ಎಲ್ಲಿಗೋ ಹೋಗಬೇಕು ಎಂದು ಎಷ್ಟೆಲ್ಲ ತಯಾರಿ ಮಾಡಿರುತ್ತೇವೆ. ಅಷ್ಟರಲ್ಲಿ ಏನೋ ಒಂದು ತೊಂದರೆ, ಅಡೆತಡೆ. ಇವರಿಗೆ ಆಗಿದ್ದೂ ಅದೇ. ಆಕ್ಸಿಯಂ ಮಿಷನ್ ಅನ್ವಯ ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಐಎಸ್ಎಸ್ಗೆ ತೆರಳಬೇಕಿತ್ತು. 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಶುಕ್ಲಾ. ಹಾಗೇ ಐಎಸ್ಎಸ್ಗೆ ತೆರಳಿದ ಪ್ರಥಮ ಭಾರತೀಯ ಎಂಬುದು ಕೂಡ ಅವರ ಹೆಗ್ಗಳಿಕೆ ಆಗುವ ಹಂತದಲ್ಲಿದೆ. ಮೊದಲಿನ ಯೋಜನೆ ಪ್ರಕಾರ, ಮೇ 29ರಂದು ಆಕ್ಸಿಯಂ ಮಿಷನ್ ಚಾಲನೆ ಪಡೆಯಬೇಕಿತ್ತಾದರೂ, ತಾಂತ್ರಿಕ ತೊಂದರೆ ಕಾರಣಕ್ಕೆ ಮುಂದಕ್ಕೆ ಹೋಗುತ್ತಿದೆ. ಅಂತೂ ಜೂನ್ 22ಕ್ಕೆ ಯಾನ ಎಂದು ನಿರ್ಧರಿಸಲಾಗಿತ್ತಾದರೂ, ಮತ್ತೆ ಮುಂದೂಡಿಕೆಯಾಗಿದೆ.
ಅಮೆರಿಕದ ನಾಸಾ ಹಾಗೂ ರಷ್ಯಾದ ರೋಸ್ಕೊಮ್ಸ್ ಸಂಸ್ಥೆಗಳು ಸ್ಪೇಸ್ ಎಕ್ಸ್ ನೌಕೆಯ ಸ್ಥಿತಿಗತಿ ಮೇಲೆ ನಿಗಾ ಇರಿಸಿವೆ. ಅಮೆರಿಕದ ಸ್ಪೇಸ್ ಎಕ್ಸ್ ಎಂಬ ಸಂಸ್ಥೆ ನಾಲ್ಕನೇ ಬಾರಿಗೆ ಐಎಸ್ಎಸ್ನತ್ತ ತನ್ನ ಗಗನ ನೌಕೆಯನ್ನು ಕಳಿಸಲು ಪ್ಲಾನ್ ಮಾಡಿಕೊಂಡು ಸಕಲ ರೀತಿಯಲ್ಲಿ ಸಜ್ಜಾಗಿತ್ತು. ಸುರಕ್ಷತಾ ಪ್ರಕ್ರಿಯೆ ಪ್ರಕಾರ ರಾಕೆಟ್ ಪರಿಶೀಲನೆ ನಡೆಸಿದಾಗ ಲಿಕ್ವಿಡ್ ಆಕ್ಸಿಜನ್ ಸೋರಿಕೆ ಇರುವುದು ಪತ್ತೆಯಾಯಿತು. ಆ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಯಾನವನ್ನು ಮುಂದೂಡಿದೆ. ಯಾನದ ದಿನಾಂಕವನ್ನು ನಂತರ ತಿಳಿಸಲಾಗುವುದೆಂದು ನಾಸಾ ಹೇಳಿದೆ. ಇದೇನೇ ಇರಲಿ, ಈ ಯೋಜನೆ ಯಶಸ್ವಿಯಾಗಲೆಂದು ಆಶಿಸೋಣ.
ಉತ್ತರ ಪ್ರದೇಶದ ಲಖನೌ ಮೂಲದ ಶುಭಾಂಶು ಶುಕ್ಲಾ ಅವರು ಈ ಯೋಜನೆಯ ಭಾಗವಾಗಿದ್ದಾರೆ. ಇಸ್ರೋದ ಗಗನಯಾನ ಯೋಜನೆಯ ಇನ್ನೊಬ್ಬ ಯಾನಿ ಪ್ರಶಾಂತ್ ನಾಯರ್ ಅವರು ಸ್ಪೇಸ್ ಎಕ್ಸ್ ಯೋಜನೆಯಲ್ಲಿ ಬ್ಯಾಕಪ್ ಕ್ರೂ ಆಗಿರುವುದು ವಿಶೇಷ. ಬಾಹ್ಯಾಕಾಶ ರಂಗದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ಒಪ್ಪಂದವನ್ನು 2023ರಲ್ಲಿ ಮಾಡಿಕೊಳ್ಳಲಾಗಿದೆ. ಇದರನ್ವಯ, ಶುಕ್ಲಾ ಆವರನ್ನು ಈ ಯೋಜನೆಯಡಿ ಆಗಸಕ್ಕೆ ಕಳುಹಿಸಲು ಆಕ್ಸಿಯಂಗೆ ಇಸ್ರೋ ಸುಮಾರು 500 ಕೋಟಿ ರೂ. ಗಳನ್ನು ಪಾವತಿಸಿದೆ. ಬಲು ಕಠಿಣ ತರಬೇತಿಯನ್ನು ಶುಕ್ಲಾ ಅವರಿಗೆ ಈಗಾಗಲೇ ನೀಡಲಾಗಿದೆ. ಟೆಕ್ಸಾಸ್ನ ಹೂಸ್ಟನ್ನ ಜಾನ್ಸನ್ ಸ್ಪೇಸ್ ಸೆಂಟರ್ನಲ್ಲಿ 2024ರ ಆಗಸ್ಟ್ನಿಂದ ತರಬೇತಿ ನಡೆದಿದೆ. ಕ್ಲಾಸ್ ರೂಮ್ ತರಬೇತಿ ಹಾಗೂ ಸಿಮ್ಯುಲೇಟರ್ ಅಭ್ಯಾಸ ನಡೆದಿದೆ. ಸ್ಪೇಸ್ ಸ್ಟೇಷನ್ ಮಾಡ್ಯೂಲ್ನಲ್ಲಿ ರಿಹರ್ಸಲ್ ಕೂಡ ಆಗಿದೆ. ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ಆಗಿದೆ.
ಆಕ್ಸಿಯಂ ಮಿಷನ್ ವಿವಿಧ ಸಂಶೋಧನೆ-ಅಧ್ಯಯನಗಳಿಗೂ ಮಡಿಲಾಗಿದೆ. ಸುಮಾರು 60 ವೈಜ್ಞಾನಿಕ ಅಧ್ಯಯನ ಹಾಗೂ ಚಟುವಟಿಕೆಗಳನ್ನು ಈ ತಂಡ ನಡೆಸಲಿದೆ. ಅಮೆರಿಕ, ಭಾರತ, ಪೋಲೆಂಡ್, ಹಂಗರಿ, ನೈಜೀರಿಯಾ, ಯುಎಇ ಮುಂತಾದ ದೇಶಗಳು ಇದರಲ್ಲಿ ಭಾಗವಹಿಸುತ್ತಿವೆ. ಅಧ್ಯಯನಗಳ ಉದ್ದೇಶದಿಂದ ಇಸ್ರೋ ಅನೇಕ ಪೇಲೋಡ್ಗಳನ್ನು ಈ ಮಿಷನ್ ಮೂಲಕ ಕಳಿಸಲಿದೆ. ಕಡಿಮೆ ಗುರುತ್ವದಲ್ಲಿ ಕಂಪ್ಯೂಟರ್ ಬಳಕೆಯಿಂದ ಮಾನವನ ದೈಹಿಕ ಹಾಗೂ ಬುದ್ಧಿಶಕ್ತಿ ಮೇಲೆ ಆಗುವ ಪರಿಣಾಮಗಳು, ಆರು ವಿವಿಧ ಬೆಳೆಗಳ ಬೀಜದ ಮೇಲೆ ಉಪಗ್ರಹದಿಂದ ಆಗುವ ಪರಿಣಾಮಗಳು- ಮುಂತಾದವು ಇದರಲ್ಲಿ ಸೇರಿವೆ.
ಕಮಾಂಡರ್ ಪೆಗ್ಗಿ ವಿಟ್ಸನ್, ಮಿಷನ್ ಸ್ಪೆಷಲಿಸ್ಟ್ ಸ್ಟಾವೋಜ್ ವಿಸಿನಿವಿಕಿ ಹಾಗೂ ಮಿಷನ್ ಸ್ಪೆಷಲಿಸ್ಟ್ ಟಿಬೋರ್ ಕಾಪು ಅವರು ಈ ಮಿಷನ್ನಲ್ಲಿ ಇರುವ ಇತರ ಮೂವರು ಗಗನಯಾನಿಗಳು. ಈಗ ಇರುವ ಪ್ರಶ್ನೆ ಎಂದರೆ- ಈ ಗಗನಯಾನ ಯಾವಾಗ ಚಾಲನೆ ಪಡೆಯುತ್ತದೆ ಎಂಬುದು. ಬಹುಶಃ ನೂರಕ್ಕೆ ನೂರು ಸುರಕ್ಷತೆ ಖಚಿತವಾದ ಮೇಲಷ್ಟೇ ನೆಗೆತಕ್ಕೆ ಅನುಮತಿ ಸಿಗಬಹುದು.
ಹಾಗೆ ಇತಿಹಾಸದತ್ತ ಇಣುಕಿದರೆ, ಭಾರತದ ಪ್ರಥಮ ಗಗನಯಾನಿ ಎಂಬ ಹೆಗ್ಗಳಿಕೆ ರಾಕೇಶ್ ಶರ್ಮಾ ಅವರಿಗೆ ಸಲ್ಲುತ್ತದೆ. ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದ ಅವರು, ಇಸ್ರೋ ಮತ್ತು ಸೋವಿಯತ್ ಇಂಟರ್ಕಾಸ್ಮೋಸ್ ಯೋಜನೆಯ ಭಾಗವಾಗಿ, ಸೂಯೆಜ್ ಟಿ-11 ಉಪಗ್ರಹದಲ್ಲಿ 1984ರ ಏಪ್ರಿಲ್ 3ರಂದು ಬಾಹ್ಯಾಕಾಶಯಾನ ಕೈಗೊಂಡರು. ಅವರು ಒಟ್ಟು 7 ದಿನ 21 ತಾಸು 40 ನಿಮಿಷಗಳ ಕಾಲ ಆಗಸದಲ್ಲಿದ್ದರು. ಈ ಮಿಷನ್ ಅನ್ನು ಯಶಸ್ವಿಯಾಗಿ ಪೂರೈಸಿದ ರಾಕೇಶ್ ಶರ್ಮಾ ಹಾಗೂ ಸೋವಿಯತ್ನ ಮೆಲಿಶೆವ್ ಹಾಗೂ ಸ್ಟ್ರೆಕಲೋವ್ ಅವರಿಗೆ ಭಾರತ ಸರ್ಕಾರವು ಅಶೋಕ ಚಕ್ರ ಪುರಸ್ಕಾರ ನೀಡಿ ಗೌರವಿಸಿತು.
ಆಗಸ ರಂಗದಲ್ಲಿ ಅನೇಕ ಸಾಹಸಗಳನ್ನು, ಮೊದಲುಗಳನ್ನು ಮೆರೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾನವಸಹಿತ ಗಗನಯಾನ ಯೋಜನೆಯತ್ತ ಈಗ ಚಿತ್ತ ನೆಟ್ಟಿದೆ. ಇದು ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಚಂದ್ರಯಾನದ ಬಳಿಕ ಇಸ್ರೋದ ಮತ್ತೊಂದು ಸಾಹಸಕ್ಕೆ ಸಾಕ್ಷಿಯಾಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರ ಆಗಸ್ಟ್ 15ರಂದು ಸ್ವಾತಂತ್ರೊ್ಯೕತ್ಸವ ಸಂದರ್ಭದಲ್ಲಿ ಕೆಂಪುಕೋಟೆ ಮೇಲಿನಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡುವಾಗ ಗಗನಯಾನ ಯೋಜನೆಯನ್ನು ಪ್ರಕಟಿಸಿದರು. 2018ರ ಡಿಸೆಂಬರ್ 18ರಂದು ಕೇಂದ್ರ ಸಚಿವ ಸಂಪುಟವು ಈ ಯೋಜನೆಗೆ ಅನುಮೋದನೆ ನೀಡಿತು. 2022ರ ಹೊತ್ತಿಗೆ ಗಗನಯಾನ ಉಡಾವಣೆಯ ಉದ್ದೇಶ ಹೊಂದಲಾಗಿತ್ತು. ಈ ಯೋಜನೆಯು ಮಾನವರಹಿತ ಮತ್ತು ಮಾನವಸಹಿತ ಎಂದು ಸರಣಿ ಉಡಾವಣೆಗಳನ್ನು ಒಳಗೊಂಡಿದೆ. ಕರೊನಾ ಮತ್ತಿತರ ಕಾರಣಗಳಿಂದ ಯೋಜನೆ ಅನುಷ್ಠಾನ ವಿಳಂಬಗೊಂಡಿದ್ದು, 2027ರ ಮೊದಲ ತ್ರೖೆಮಾಸಿಕದಲ್ಲಿ ಮಾನವಸಹಿತ ಗಗನಯಾನ ಸಾಕಾರವಾಗಬಹುದು ಎಂದು ಅಂದಾಜಿಸಲಾಗಿದೆ. ಶುಭಾಂಶು ಶುಕ್ಲಾ, ಪ್ರಶಾಂತ್ ನಾಯರ್, ಅಜಿತ್ ಕೃಷ್ಣನ್ ಹಾಗೂ ಅಂಗದ್ ಪ್ರತಾಪ್- ಈ ನಾಲ್ವರನ್ನು ಗಗನಯಾನ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ತರಬೇತಿ ನೀಡಲಾಗಿದೆ.
ಸುಮಾರು 10 ಸಾವಿರ ಜನರು ನಾಲ್ಕೈದು ವರ್ಷಗಳಿಂದ ಗಗನಯಾನ ಯೋಜನೆಯ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ತಿಳಿಸಿದ್ದರು. ಈ ಯೋಜನೆಯಲ್ಲಿ ಮಾನವರಹಿತ ಉಡಾವಣೆಯ ಭಾಗವಾಗಿ ವ್ಯೋಮಮಿತ್ರ ಎಂಬ ರೋಬಾಟನ್ನು ಕಳಿಸಲಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಇದು ಉಡಾವಣೆಯಾಗುವ ನಿರೀಕ್ಷೆ ಇದೆ. ‘ಆಕ್ಸಿಯಂ ಮಿಷನ್ನಲ್ಲಿ ಶುಭಾಂಶು ಶುಕ್ಲಾ ಅವರು ಭಾಗವಹಿಸುತ್ತಿರುವುದರಿಂದಾಗಿ, ಭಾರತದ ಗಗನಯಾನ ಯೋಜನೆಗೆ ಅಮೂಲ್ಯ ಅನುಭವ ದೊರೆಯಲಿದೆ’ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ಭಾರತ ಈಗಾಗಲೇ ಗಗನಯಾನಿಯನ್ನು ಕಳಿಸಿದ್ದರೂ ತನ್ನದೇ ಮಿಷನ್ ಮೂಲಕ ಮಾನವನನ್ನು ಆಗಸಕ್ಕೆ ಕಳುಹಿಸುತ್ತಿರುವುದು ಅವಕಾಶವೂ ಹೌದು ದೊಡ್ಡ ಸವಾಲೂ ಹೌದು. ಇಸ್ರೋ ಪ್ರಯತ್ನದ ಜೊತೆ ಭಾರತೀಯರ ಹಾರೈಕೆ ಕೂಡ ಇರುವುದರಿಂದ ಯಶಸ್ಸಿನ ಭರವಸೆ ಇರಿಸಬಹುದು.
ಬಾಹ್ಯಾಕಾಶ ಯಾನ ಪ್ರಸಂಗ ಬಂದಾಗೆಲ್ಲ ಕಲ್ಪನಾ ಚಾವ್ಲಾ ಎಂಬ ಹೆಣ್ಣುಮಗಳ ನೆನಪಾಗದೆ ಇರದು. ಗಗನಯಾನ ಕೈಗೊಂಡ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆ ಅವರದು. ಚಿಕ್ಕಂದಿನಿಂದಲೂ ಆಕೆಗೆ ಏರೋಸ್ಪೇಸ್ ಇಂಜಿನಿಯರಿಂಗ್ ಆಸಕ್ತಿಯ ವಿಷಯವಾಗಿತ್ತು. ಅದಕ್ಕೆ ತಕ್ಕಂತೆ ಈ ರಂಗವನ್ನೇ ಆರಿಸಿಕೊಂಡರು. ಅಮೆರಿಕದ ನಾಸಾದ ಕೋಲಂಬಿಯಾ ಯೋಜನೆಯ ಭಾಗವಾಗಿ ಎರಡನೇ ಬಾರಿಗೆ ಆಗಸಕ್ಕೆ ತೆರಳಲು ಕಲ್ಪನಾ ಚಾವ್ಲಾ ಆಯ್ಕೆಯಾಗಿದ್ದರು. ಬೇರೆ ಬೇರೆ ಕಾರಣಕ್ಕೆ ಒಟ್ಟು 13 ಬಾರಿ ಇದರ ಯಾನವನ್ನು ಮುಂದೂಡಲಾಗಿತ್ತು. ಅಂತೂ 2003ರ ಜನವರಿ 16ರಂದು ಯಾನ ಸಾಕಾರವಾಯಿತು. ಗಗನವಾಸವನ್ನು ಯಶಸ್ವಿಯಾಗಿ ಪೂರೈಸಿ ಭೂಮಿಗೆ ಮರಳುತ್ತಿರುವಾಗ ದುರದೃಷ್ಟವಶಾತ್ ಫೆಬ್ರವರಿ 1ರ ಬೆಳಗ್ಗೆ ಟೆಕ್ಸಾಸ್ ಸನಿಹ ಆಗಸದಲ್ಲಿಯೇ ವ್ಯೋಮನೌಕೆ ದುರಂತಕ್ಕೀಡಾಗಿ ಕಲ್ಪನಾ ಚಾವ್ಲಾ ಸೇರಿದಂತೆ ಅದರಲ್ಲಿದ್ದ ಎಲ್ಲ ಏಳು ಮಂದಿ ಗಗನಯಾತ್ರಿಗಳು ದುರ್ಮರಣಕ್ಕೀಡಾದರು. ನಕ್ಷತ್ರಲೋಕದ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆಯಿಡುತ್ತಿದ್ದ, ಇನ್ನಷ್ಟು ಎತ್ತರದ ಸಾಧನೆ ಮಾಡಬಹುದಾಗಿದ್ದ ಹೆಣ್ಣುಮಗಳೊಬ್ಬಳ ಬದುಕು ಹೀಗೆ ಅಕಾಲಿಕವಾಗಿ ಕೊನೆಗೊಂಡಿದ್ದು ಖೇದಕರ.
ಭಾರತ ಮೂಲದ ಬೇರನ್ನು ಹೊಂದಿರುವ ಇನ್ನೊಬ್ಬ ಗಗನಯಾತ್ರಿ ಸುನಿತಾ ವಿಲಿಯಮ್್ಸ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಎಂಟು ದಿನ ಉಳಿಯುವುದಕ್ಕೆಂದು ಸಹ-ಗಗನಯಾನಿಗಳ ಜೊತೆ 2024ರ ಜೂನ್ 5ರಂದು ಪಯಣ ಆರಂಭಿಸಿದ ಅವರು, ವ್ಯೋಮನೌಕೆಯಲ್ಲಿನ ತೊಂದರೆ ಕಾರಣಕ್ಕೆ ಸುದೀರ್ಘ ಒಂಬತ್ತು ತಿಂಗಳ ನಂತರ, ಅಂದರೆ 2025ರ ಮಾರ್ಚ್ 18ರಂದು ಭೂಮಿಗೆ ವಾಪಸಾದರು. ಈ ಅನಿರೀಕ್ಷಿತ ‘ಆಗಸವಾಸ’ವನ್ನು ಎದುರಿಸಲು ಮನೋಬಲ ಎಷ್ಟಿರಬೇಕು! ಏಕೆಂದರೆ, ಶೂನ್ಯ ಅಥವಾ ಕಡಿಮೆ ಗುರುತ್ವದಲ್ಲಿ ಸನ್ನಿವೇಶವೇ ಬೇರೆ.
ಕೊನೇ ಮಾತು: ಯಾವುದೇ ವಿಮಾನ ಹಾರಾಟ ಆರಂಭಿಸುವ ಮುನ್ನ ತಾಂತ್ರಿಕ ಆಯಾಮ, ಇಂಧನ ಸೇರಿದಂತೆ ಸಮಗ್ರ ತಪಾಸಣೆ ನಡೆಯುತ್ತದೆ. ಈಚೆಗೆ ಅಹಮದಾಬಾದ್ನಲ್ಲಿ ದುರಂತಕ್ಕೀಡಾದ ಡ್ರೀಮ್ಲೈನರ್ ವಿಮಾನದಲ್ಲಿ ಏನು ತೊಂದರೆ ಇತ್ತು ಎಂಬುದು ವಿಮಾನದ ಬ್ಲಾ್ಯಕ್ ಬಾಕ್ಸ್ ಪರಿಶೀಲನೆ ಬಳಿಕ ಗೊತ್ತಾಗಬೇಕು. ಆ ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ವಿಮಾನ ಅಪ್ಪಳಿಸಿದ ಜಾಗದಲ್ಲಿ 1000 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಉಂಟಾಗಿತ್ತು. ಅಷ್ಟು ಪ್ರಖರ ಶಾಖಕ್ಕೆ ಎಲ್ಲವೂ ಸುಟ್ಟು ಬೂದಿಯಾಗಬೇಕಾದ್ದೆ. ಅಷ್ಟರ ನಡುವೆಯೂ ಭಗವದ್ಗೀತೆಯ ಪ್ರತಿಯೊಂದು ದೊರಕಿದ್ದು ಅಚ್ಚರಿಯೇ ಸರಿ. ಆ ದುರಂತದಲ್ಲಿ ಮಡಿದವರ ಪೈಕಿ ಎಷ್ಟೋ ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಡಿಎನ್ಎ ಪರೀಕ್ಷೆ ನಡೆಯುತ್ತಿದ್ದು ಬಳಿಕವೇ ಯಾರೆಂದು ಗುರುತು ಸಿಗಬೇಕಿದೆ. ಒಂದೊಮ್ಮೆ ಅಂದು ಆ ವಿಮಾನ ಟೇಕಾಫ್ ಆದ ಮೇಲೆ ಮಾಮೂಲಿನಂತೆ ಮೇಲಕ್ಕೆ ಏರುತ್ತ ಏರುತ್ತ ಹೋಗಿದ್ದಾದರೆ ಈ ದುರಂತ ನಡೆಯುತ್ತಿರಲಿಲ್ಲವೇನೋ. ಸುಮಾರು 800 ಅಡಿಗಳಷ್ಟು ಮೇಲೇರಿದ ವಿಮಾನ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸತೊಡಗಿ ಕ್ಷಣಾರ್ಧದಲ್ಲಿ ಅಪಘಾತಕ್ಕೀಡಾಯಿತು. ಆ ದುರಂತದ ಚಿತ್ರಗಳು ಎಲ್ಲರ ಹೃದಯವನ್ನು ಕಲಕಿದೆ. ಒಬ್ಬೊಬ್ಬರ ಕಥೆಯೂ ಒಂದೊಂದು ತರಹ. ಹೊಸ ಜೀವನ ಕಟ್ಟಿಕೊಳ್ಳಲೆಂದು ಲಂಡನ್ಗೆ ಹೊರಟಿದ್ದ ಡಾ. ಪ್ರತೀಕ್ ಜೋಷಿ ಕುಟುಂಬದ ಬಗ್ಗೆ ಹೇಳಬೇಕು ಎಂದರೆ, ತಂದೆ-ತಾಯಿ ಮತ್ತು ಮೂವರು ಚಿಕ್ಕ ಮಕ್ಕಳು ಒಟ್ಟಿಗೆ ಸಾವಿನ ಮನೆ ಸೇರಿದರು. ಆ ಕುಟುಂಬ ವಿಮಾನದಲ್ಲಿ ಖುಷಿಖುಷಿಯಿಂದ ತೆಗೆದುಕೊಂಡ ಸೆಲ್ಪಿ ಬಹುಕಾಲ ನಮ್ಮನ್ನು ಸಹ ಕಾಡುತ್ತಿರುತ್ತದೆ... ಭೂಮಿ ಮತ್ತು ಆಗಸದ ನಡುವೆ ಬದುಕಿನ ಗತಿಯೇ ವಿಚಿತ್ರ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)