

‘ಸ್ಪರ್ಶ’ವು ನಿಷಿದ್ಧವಾದಾಗ, ‘ಉಸಿರಾಟ’ವೇ ಪ್ರತಿ ಜೀವಿಗೆ ಅಪಾಯ ತಂದೊಡ್ಡುವ ಸನ್ನಿವೇಶ ಉದ್ಭವಿಸಿದಾಗ ಇಡೀ ಮನುಕುಲ ಅಪಾಯದ ಅಂಚಿನಲ್ಲಿ ಜೀವಿಸುವಂತಾಗುತ್ತದೆ. ಕರೊನಾ ಕಾಲದಲ್ಲಿ ಬದುಕುವುದು ಕರೊನಾ-ಪೂರ್ವ ಕಾಲದಲ್ಲಿ ಜೀವಿಸಿದಂತಲ್ಲ. ಸೋಂಕಿತರ ಪ್ರಮಾಣ ಒಂದೇ ಸಮನೆ ಏರಿಕೆಯಾಗುತ್ತಿರುವಾಗ ‘ಕರೊನೋತ್ತರ’ ಎಂಬ ಪರಿಕಲ್ಪನೆಗೆ ನಾವು ಹೊಂದಿಕೊಳ್ಳುವುದು ಅಗತ್ಯವೆಂದು ತೋರುತ್ತದೆ. ಲಸಿಕೆ ಕಂಡು ಹಿಡಿದು ವೈರಸ್ಗೆ ಪೂರ್ಣವಿರಾಮ ಹಾಕುವವರೆಗೆ ಅದು ‘ಕರೊನಾ ಜೊತೆಗಿನ ಜೀವನವಾಗುತ್ತದೆ (ಎಲ್ಎಸಿ)’. ಎಲ್ಎಸಿಗೆ ‘ಪಾಸ್’ ಬಟನ್ ಯಾವುದೇ ರೀತಿಯಲ್ಲಿ ಉತ್ತರವಲ್ಲ. ನಾವು ‘ರೀ ಸೆಟ್’ ಬಟನ್ ಒತ್ತಬೇಕಾಗಿದೆ. ಅದು ಕಷ್ಟವಾಗಲಾರದು.
ಕರೊನಾ ವೈರಸ್ ತಮ್ಮ ಜೀವನವನ್ನು ವಿವಿಧ ಮಗ್ಗುಲುಗಳಲ್ಲಿ ಬದಲಾಯಿಸಿದೆ ಎಂದು ಪ್ಯೂ ಸಂಶೋಧನಾ ಕೇಂದ್ರ ಕರೊನೋತ್ತರ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 91ರಷ್ಟು ಅಮೆರಿಕನ್ನರು ಅಭಿಪ್ರಾಯಪಟ್ಟಿದ್ದಾರೆ. ವೈರಸ್ ಅಂತ್ಯವಾಗಲಿ ಎಂದು ಶೇ.86ರಷ್ಟು ಮಂದಿ ಪ್ರಾರ್ಥಿಸಿದ್ದಾರೆ. ಹೊರಗಡೆ ಹೋಟೆಲ್ಗಳಲ್ಲಿ ತಿನ್ನದಿರಲು ಶೇ.77 ಜನರು ನಿರ್ಧರಿಸಿದ್ದಾರೆ. 2020 ಅಧ್ಯಕ್ಷೀಯ ಚುನಾವಣೆಯ ವರ್ಷವಾಗಿದ್ದು ಮತದಾನ ಮಾಡಲು ಸರದಿ ಸಾಲಿನಲ್ಲಿ ನಿಲ್ಲಲು 66 ಪ್ರತಿಶತ ಜನರು ಆಸಕ್ತಿ ಹೊಂದಿಲ್ಲ. ಇದು ಮಾನವ ದೇಹದಲ್ಲೇ ಆಶ್ರಯ ಪಡೆದ ಕಣ್ಣಿಗೆ ಕಾಣದ ಸೂಕ್ಷಾ್ಮಣು ಜೀವಿ ಜಗತ್ತಿನಾದ್ಯಂತ ಬೀರಿರುವ ಪರಿಣಾಮವಾಗಿದೆ.
ದೇಶದಲ್ಲಿ ಕೇವಲ 500 ಕರೊನಾ ಸೋಂಕಿತರಿದ್ದಾಗ ಮಾರ್ಚ್ 25ರಿಂದ 130 ಕೋಟಿ ಜನರು ಲಾಕ್ಡೌನ್ ಆಗಿ ಮನೆಯೊಳಗೇ ಇದ್ದರು. ಆದರೆ ಮೇ 17ರಂದು ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದಾಗ ಜನರು ಸ್ವಾತಂತ್ರ್ಯಕ್ಕಾಗಿ ಹಪಾಹಪಿಸುತ್ತಿದ್ದಾರೆ. ಹೀಗಾಗಿ ಲಾಕ್ಡೌನ್ 4.0, ಲಾಕ್ಡೌನ್ ಒಂದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ದೀರ್ಘ ಕಾಲ ಬಂಧಿ ಯಾಗಿರುವುದಕ್ಕಿಂತ ವೈರಸ್ ಅನ್ನು ನಿಭಾಯಿಸಲು ನಾವು ಸಮರ್ಥರು ಎಂಬ ಭಾವನೆಯೇ ಸ್ವಾತಂತ್ರ್ಯದ ಈ ತಹತಹಿಕೆಗೆ ಕಾರಣವಾಗಿರಬಹುದು. ಕರೊನಾ ವಿರುದ್ಧದ ಹೋರಾಟ ಬಹಳ ದೀರ್ಘವಾದುದು ಎಂದು ತಜ್ಞರು ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. ಲಸಿಕೆ ಬರುವಂತಿದ್ದರೂ ಅದು ತಕ್ಷಣಕ್ಕಂತೂ ರೂಪುಗೊಳ್ಳಲಾರದು. ಆದ್ದರಿಂದ ಮರುಹೊಂದಾಣಿಕೆ ಮಾಡಿಕೊಂಡು ಕರೊನಾ ವೈರಸ್ ನಿಭಾಯಿಸುವ ಕುರಿತ ಈ ಆತ್ಮವಿಶ್ವಾಸವು ಜನರ ಜೀವನಕ್ಕೆ ಮಾರ್ಗದರ್ಶಿಯಾಗಬೇಕು. ಲಾಕ್ಡೌನ್ 4.0 ಕೊನೆಗೊಂಡು ದೇಶ ಹೊಸ ಮಾರ್ಗಸೂಚಿಗಳೊಂದಿಗೆ ಲಾಕ್ಡೌನ್ 5.0ಗೆ ಕಾಲಿಟ್ಟಿದೆ. ಏನೇ ಇರಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಲಯಗಳಲ್ಲಿನ ನಿಯಮಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಸಾಮಾಜಿಕ ಜೀವನ: ಸಾಮಾಜಿಕ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಬೇರೆಯವರ ಸಾಂಗತ್ಯದಲ್ಲಿ ಇರುವುದರಿಂದ ಪಡೆಯುವ ಅನುಕೂಲವನ್ನು ಈಗ ಬಿಟ್ಟುಕೊಡಬೇಕಾಗುತ್ತದೆ. ಪರಸ್ಪರರ ಮೇಲಿನ ಅವಲಂಬನೆಗೂ ಆರೋಗ್ಯಕ್ಕೂ ಅಂತರ್ ಸಂಬಂಧವಿದೆ ಎಂಬುದನ್ನು ಕರೊನಾ ವೈರಸ್ ದಾಂಗುಡಿ ತೋರಿಸಿಕೊಟ್ಟಿದೆ. ಅದರಿಂದ ಪಾಠ ಕಲಿತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಯಲ್ಲೇ ನಾವು ಅರ್ಥಪೂರ್ಣವಾಗಿ ಸಂಪರ್ಕ ಹೊಂದಿರಬೇಕು ಮತ್ತು ಪರಸ್ಪರರಿಗೆ ಸಾಧ್ಯವಾದಷ್ಟು ನೆರವಾಗಬೇಕು. ಕರೊನೋತ್ತರದಲ್ಲಿ ಮನೆಗಳೇ ಶಾಲೆಗಳ ಸ್ಥಾನ ನಿರ್ವಹಿಸುತ್ತಿವೆ. ಸೆಮಿನಾರ್ಗಳು ವೆಬಿನಾರ್ಗಳಾಗುತ್ತಿವೆ. ದೈಹಿಕ ಸ್ವರೂಪದ ಸಭೆಗಳೇ ಇಲ್ಲ. ಎಲ್ಲರಿಗೂ ಆಧುನಿಕ ಮಾಹಿತಿ ತಂತ್ರಜ್ಞಾನದ ಸೌಕರ್ಯ ಸಿಗುತ್ತಿಲ್ಲ ಎಂಬ ಕೊರತೆಯ ನಡುವೆಯೂ ಒಂದು ಆರೋಗ್ಯಕರ ಡಿಜಿಟಲ್ ಜೀವನ ರೂಪುಗೊಳ್ಳುತ್ತಿದೆ. ಹೊಸ ಹವ್ಯಾಸಗಳು ಕರೊನಾದೊಂದಿಗೆ ಜೀವಿಸುವುದಕ್ಕೆ ಮಹತ್ವದ್ದಾಗುತ್ತದೆ. ‘ದಿ ಪ್ಲೇಗ್’ ಕೃತಿಯಲ್ಲಿ ಆಲ್ಬರ್ಟ್ ಕಾಮೂ ಹೇಳಿದಂತೆ ‘ಪ್ರತಿಯೊಬ್ಬರೂ ಬೇಸರಗೊಳ್ಳುತ್ತಾರೆ ಹಾಗೂ ಹೊಸ ಹವ್ಯಾಸ ಬೆಳೆಸಿಕೊಳ್ಳಲು ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ ಎನ್ನುವುದು ಸತ್ಯ’. ಹೊಸ ಜೀವನ ನಿಯಮಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು ಹಾಗೂ ನಿಯಮಿತವಾಗಿ ಕೈ ತೊಳೆದುಕೊಳ್ಳುವುದು ವೈರಸ್ ಹರಡುವುದನ್ನು ತಡೆಯಲು ಮಿತವ್ಯಯದ ಕ್ರಮಗಳಾಗಿವೆ.
ಆರ್ಥಿಕ ಚೇತರಿಕೆ ಮುಖ್ಯ ಸವಾಲು: ಆರ್ಥಿಕತೆಗೆ ಚೇತರಿಕೆ ನೀಡುವಾಗ ಜನರ ಜೀವನವನ್ನು ರಕ್ಷಿಸುವುದು ಒಂದು ಮಹತ್ವದ ಸವಾಲಾಗಿದೆ. ಕಳೆದ ಶತಮಾನದ ಮಹಾ ಕುಸಿತ ಮುಗಿದ ನಂತರದಲ್ಲಿ ಜಾಗತಿಕ ಆರ್ಥಿಕತೆ ಇದೇ ಮೊದಲ ಬಾರಿ ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ. ಉತ್ಪಾದನೆ ಚಟುವಟಿಕೆಗಳನ್ನು ಹಠಾತ್ತನೆ ಪುನಾರಂಭಿಸುವುದಕ್ಕಿಂತ ಹಂತ ಹಂತವಾಗಿ ಮಾಡುವುದು ಉತ್ತಮ. ವೈರಸ್ ಹಾವಳಿ ದೇಶದ ಆರೋಗ್ಯ ವ್ಯವಸ್ಥೆಯ ಕೊರತೆಯನ್ನು ಮನದಟ್ಟು ಮಾಡಿಕೊಟ್ಟಿದ್ದು, ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕೆಂಬುದರ ಮಹತ್ವದ ಮೇಲೆ ಬೆಳಕು ಚೆಲ್ಲಿದೆ. ವಲಸೆ ಕಾರ್ವಿುಕರ ಪರಿಸ್ಥಿತಿ ದಯನೀಯವಾಗಿದೆ. ಲಕ್ಷಾಂತರ ವಲಸೆ ಕಾರ್ವಿುಕರು ಅನಿಶ್ಚಯತೆ ನಡುವೆ ಊರುಗಳಿಗೆ ಮರಳುತ್ತಿದ್ದಾರೆ. ಈಗ ಇರುವಂಥ ವಲಸೆ ಕಾರ್ವಿುಕರನ್ನು ಅಲ್ಲಲ್ಲೇ ಉಳಿಸಿಕೊಳ್ಳಲು ಹಾಗೂ ಊರಿಗೆ ಮರಳಿದವರನ್ನು ವಾಪಸ್ ಕರೆಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.
ರಾಜಕೀಯ ಸಹಕಾರ: ಮಾರಕ ಕರೊನಾ ವೈರಸ್ ದಾಳಿಯು ಭಾರತದ ಸಹಕಾರಾತ್ಮ ಒಕ್ಕೂಟ ವ್ಯವಸ್ಥೆಯ ಒಳಿತನ್ನು ಪ್ರದರ್ಶಿಸಲು ಒಳ್ಳೆಯ ಅವಕಾಶವಾಗಿ ಪರಿಣಮಿಸಿದೆ. ಕೇಂದ್ರ ಮತ್ತು ರಾಜ್ಯಗಳ ನಾಯಕರು ಪರಸ್ಪರರ ಅಭಿಪ್ರಾಯಗಳನ್ನು ಮನ್ನಿಸಿ ಅಗತ್ಯಕ್ಕೆ ತಕ್ಕಂತೆ ಮುನ್ನಡೆದರು. ಈ ಚೈತನ್ಯವು ಮುಂದೆ ಆರ್ಥಿಕತೆಯ ಪುನಶ್ಚೇತನಕ್ಕೆ ಹಾಗೂ ಜನರ ಸುರಕ್ಷತೆಯನ್ನು ಖಾತರಿಪಡಿಸುವ ದಿಸೆಯಲ್ಲಿ ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಬೇಕು. ಇಂಥ ಬಿಕ್ಕಟ್ಟುಗಳನ್ನು ನಿಭಾಯಿಸಲು ಹಾಗೂ ಇನ್ನಷ್ಟು ಉತ್ತಮ ಫಲಿತಾಂಶ ಸಿಗುವಂತಾಗಲು ಆಡಳಿತದ ಮೂರನೇ ಹಂತ ಹಾಗೂ ಸ್ಥಳೀಯ ಸಮುದಾಯಗಳನ್ನು ಕೂಡ ಸಬಲೀಕರಿಸುವುದು ಅಗತ್ಯ.
ಜಾಗತಿಕ ಕಳಕಳಿ: ಕೊವಿಡ್-19ಗೆ ಜಾಗತಿಕ ಪ್ರತಿಸ್ಪಂದನೆ ಆದರ್ಶಪ್ರಾಯವಾಗಿರಲಿಲ್ಲ ಎಂದು ಇತಿಹಾಸಕಾರ ಹಾಗೂ ಲೇಖಕ ಯುವಲ್ ನೋಹ್ ಹರಾರಿ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಂದು ದೇಶವು ವೈರಸ್ ವಿರುದ್ಧ ತಮ್ಮ ತಮ್ಮದೇ ಆದ ಹೋರಾಟ ನಡೆಸುತ್ತಿದ್ದಾಗ ಅತ್ಯವಶ್ಯವಾಗಿದ್ದ ಜಾಗತಿಕ ಸಾಮೂಹಿಕ ಒಗ್ಗಟ್ಟಿನ ಪ್ರತಿಕ್ರಿಯೆಯ ಗೈರು ಎದ್ದು ಕಾಣುತ್ತಿತ್ತು. ಸಂಪನ್ಮೂಲ ಕೊರತೆಯಿರುವ ದೇಶಗಳು ಇದರಿಂದ ತುಂಬ ಬಾಧಿತವಾದವು. ಈ ಸಮಸ್ಯೆಯನ್ನು ನೀಗಿಕೊಂಡು ಭವಿಷ್ಯದಲ್ಲಿ ಇಂಥ ಆಘಾತಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ.
ಅಸಮಾನತೆ: ಕರೊನಾ ವೈರಸ್ ಮಹಾಮಾರಿಯ ಹಾವಳಿಯು ತಂತ್ರಜ್ಞಾನ ಲಭ್ಯತೆ, ಆದಾಯ ಮಟ್ಟಗಳು, ಜೀವನೋಪಾಯ ಮೊದಲಾದ ಕ್ಷೇತ್ರಗಳಲ್ಲಿನ ಅಗಾಧ ಅಸಮಾನತೆಗಳನ್ನು ಎತ್ತಿ ತೋರಿಸುವಲ್ಲಿ ನೆರವಾಗಿದೆ. ಅಸಮಾನತೆಯಿಂದಾಗಿ ಜಗತ್ತಿನಾದ್ಯಂತ ವಿವಿಧ ಜನಸಮುದಾಯಗಳು ವೈರಸ್ನಿಂದ ನಾನಾ ಬಗೆಯ ನೋವನ್ನು ಅನುಭವಿಸಬೇಕಾಗಿದೆ. ಇವೆಲ್ಲದರಿಂದ ಸೂಕ್ತ ಪಾಠ ಕಲಿಯುವುದು ಅತ್ಯಗತ್ಯ. ಒಟ್ಟಿನಲ್ಲಿ ಹೇಳಬೇಕೆಂದರೆ ಕರೊನಾ ವೈರಸ್ ಒಂದು ಶಾಕ್ ಟ್ರೀಟ್ವೆುಂಟ್. ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಜಾಗತಿಕ ಧೋರಣೆಗಳಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದನ್ನು ನೆನಪಿಸಿದ ಆಘಾತವಾಗಿದೆ. ಅದು ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸಬೇಕೆಂಬ ಮಹಾ ಪಾಠ ಕಲಿಸಿದೆ.
(ಲೇಖಕರು ಭಾರತದ ಉಪ ರಾಷ್ಟ್ರಪತಿ)