

ಶಿವಮೊಗ್ಗ: ಜೀವನ ಅನೇಕ ಅನುಭವಗಳನ್ನು ನೀಡಲಿದ್ದು, ಹಣದ ಹಿಂದೆ ಹೋಗದೆಯೇ ಬದುಕಿನ ಅನುಭವಗಳಿಗಾಗಿ ಕಲಿಯಲು ಪ್ರಯತ್ನಿಸಬೇಕು ಎಂದು ಎನ್‌ಇಎಸ್ (ರಾಷ್ಟ್ರೀಯ ಶಿಕ್ಷಣ ಸಮಿತಿ) ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಸಲಹೆ ನೀಡಿದರು.
ಕುವೆಂಪು ರಂಗಮಂದಿರದಲ್ಲಿ ಗುರುವಾರ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ‘ಕಲಾ ಸಂಭ್ರಮ-2023’ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಯ ಭರದಲ್ಲಿ ನಾವೂ ಕಳೆದುಕೊಂಡ ವಿಚಾರಗಳನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.
ನಮ್ಮ ಪೂರ್ವಜರು ಕೇವಲ ಕಾಗದದ ಮೂಲಕ ಅತ್ಯುತ್ತಮ ಸಂಪರ್ಕ ಸಾಧನ ಹೊಂದಿದ್ದರು. ಇಂದಿನ ದಿನಮಾನ ಆಧುನಿಕತೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂಬ ಅಂಧತ್ವದಲ್ಲಿದ್ದಾರೆ. ಆಧುನಿಕತೆಯ ಒಳಗೆ ಸಿಲುಕಿ ಯಾರಿಗೂ ಸಮಯವೇ ಇಲ್ಲ. ಒತ್ತಡ ಬದುಕಿನಲ್ಲಿ ಬೆರೆತು ಹೋಗಿದ್ದು, ಸಂಬಂಧಗಳು ನಾಶವಾಗುತ್ತಿದೆ. ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳಬೇಕಿದೆ. ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ, ಸಂಬಂಧಗಳಿಗೆ, ಸಂಪರ್ಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಪಠ್ಯ ಜ್ಞಾನವನ್ನು ನೀಡಿದರೆ ಪಠ್ಯೇತರ ಚಟುವಟಿಕೆ ಮೌಲ್ಯವನ್ನು ನೀಡುತ್ತದೆ ಎಂದರು.
ಒಳ್ಳೆಯ ಸ್ನೇಹಿತರು ಮತ್ತು ಉತ್ತಮ ಗುರಿ ತಲುಪುವ ಕನಸು ವಿದ್ಯಾರ್ಥಿಗಳಾದ್ದಾಗಬೇಕು. ಸುಲಭವಾಗಿ ಸಿಕ್ಕಿದ್ದು ದೀರ್ಘಕಾಲ ನಮ್ಮ ಬಳಿ ಉಳಿಯುವುದಿಲ್ಲ. ಹೆಚ್ಚು ಕಾಲ ಉಳಿಯುವುದು ಸುಲಭವಾಗಿ ನಮಗೆ ಸಿಗುವುದಿಲ್ಲ ಎಂದು ಕಿವಿಮಾತು ಹೇಳಿದರು.
ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ ಮಾತನಾಡಿ, ಪಾಲಕರು ನಮಗಾಗಿ ಅನೇಕ ಕಷ್ಟಗಳನ್ನು ಅನುಭವಿಸಿರುತ್ತಾರೆ. ಅವರಿಗೆ ಪ್ರೀತಿ ಗೌರವ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಋಣ ತೀರಿಸಲು ಪ್ರಯತ್ನಿಸಿ ಎಂದರು.
ಇದೇ ವೇಳೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.