ಯುವ ಮನಸ್ಸುಗಳ ‘ಲೈಫ್​ ಟುಡೇ’ : ಕಾಂತಾ ಕನ್ನಳ್ಳಿ ನಿರ್ದೇಶನದ ಸಿನಿಮಾ ಆ. 6ಕ್ಕೆ ರಿಲೀಸ್

ಲೈಫ್ ಟುಡೇ ಫೋಟೋ
ಲೈಫ್ ಟುಡೇ ಫೋಟೋ
Published on

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಕಾಲದ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾ
  • ಕಿರಣ್ ಆದಿತ್ಯ, ಲೇಖಾ ಚಂದ್ರ ನಟನೆಯ ಸಿನಿಮಾ ಆಗಸ್ಟ್ 6ಕ್ಕೆ ರಿಲೀಸ್
  • ಪಾತ್ರಗಳು ಕಡಿಮೆಯಾದರೂ, ಅವುಗಳು ಬೀರುವ ಪ್ರಭಾವ ದೊಡ್ಡದು ಎಂದ ನಿರ್ದೇಶಕ
ಬೆಂಗಳೂರು: ‘ಇರುವುದೆಲ್ಲವ ಬಿಟ್ಟು’ ಖ್ಯಾತಿಯ ಕಾಂತಾ ಕನ್ನಳ್ಳಿ ಎಂಟು ವರ್ಷಗಳ ಬಳಿಕ ನಿರ್ದೇಶಿಸಿರುವ ಸಿನಿಮಾ ‘ಲೈಫ್​ ಟುಡೇ’. ಆಧುನಿಕ ಕಾಲದ ಸಂಬಂಧಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಕಿರಣ್ ಆದಿತ್ಯ, ಲೇಖಾ ಚಂದ್ರ, ತಬಲಾ ನಾಣಿ, ಅಪೂರ್ವಶ್ರೀ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಮೊದಲು ಆಗಸ್ಟ್ 7ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ಒಂದು ದಿನ ಮೊದಲೇ ಅಂದರೆ, ಆ. 6ಕ್ಕೆ ಸಿನಿಮಾ ತೆರೆಗೆ ತರಲು ತೀರ್ಮಾನಿಸಿದೆ. ನಿರ್ದೇಶಕ ಕಾಂತಾ ಕನ್ನಳ್ಳಿ, ‘ಸಂಬಂಧಗಳನ್ನು ಯಾವ ರೀತಿಯಲ್ಲಿ ಹ್ಯಾಂಡಲ್ ಮಾಡಬೇಕು ಎಂಬುದನ್ನು ಈ ಸಿನಿಮಾದಲ್ಲಿ ತಿಳಿಸಲಾಗಿದೆ. ದೊಡ್ಡವರಾಗಲಿ, ಚಿಕ್ಕವರಾಗಲಿ ಒಬ್ಬ ವ್ಯಕ್ತಿಯ ಜತೆ ಕನಿಷ್ಠ ಐದು ನಿಮಿಷವೂ ಕಾಲ ಕಳೆಯಲು ನಾವು ಹಿಂಜರಿಯುತ್ತಿದ್ದೇವೆ. ಎಷ್ಟೇ ಆಧುನಿಕವಾದರೂ, ಮನುಷ್ಯ ತನ್ನ ಭಾವನೆಗಳನ್ನು ಮತ್ತೊಬ್ಬ ಮನುಷ್ಯನ ಮುಂದೆಯೇ ಹೇಳಿಕೊಳ್ಳಬೇಕೇ ವಿನಾ, ಗೋಡೆಗಳ ಮುಂದೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಇಂತಹ ಗಂಭೀರ ವಿಚಾರಗಳ ಮೇಲೆ ‘ಲೈಫ್​ ಟುಡೇ’ ಸಾಗುತ್ತದೆ. ತಂದೆ-ತಾಯಿಗೆ ಅವರ ಮಕ್ಕಳೇ ಕನಸುಗಳು. ತಮಗೆಷ್ಟೇ ಸಮಸ್ಯೆಗಳು ಉಂಟಾಗಿ, ಕೆಟ್ಟದಾದರೂ ಪರವಾಗಿಲ್ಲ, ಮಕ್ಕಳಿಗೆ ಒಳ್ಳೆಯದಾಗಬೇಕು ಎಂದು ಬಯಸುತ್ತಾರೆ. ಈ ಮಧ್ಯೆ, ಯುವ ಪ್ರೇಮಿಗಳ ನಡುವಿನ ಆ್ಯಕ್ಷನ್-ರಿಯಾಕ್ಷನ್‌ನಲ್ಲಿ ಪಾಲಕರು ಸಂಕಷ್ಟ ಅನುಭವಿಸುತ್ತಾರೆ ಎಂಬುದೇ ಸಿನಿಮಾದ ಪ್ರಮುಖ ಘಟ್ಟ. ಇಲ್ಲಿ ಪಾತ್ರಗಳು ಕಡಿಮೆಯಾದರೂ, ಅವುಗಳು ಬೀರುವ ಪ್ರಭಾವ ದೊಡ್ಡದು. ನಾಯಕ ಕಿರಣ್ ಆದಿತ್ಯ ಬರೆದ ಕಥೆಯನ್ನು ನಾನು ನಿರ್ದೇಶಿಸಿದ್ದೇನೆ. ಹಾಗಾಗಿ, ತಾವೇ ಬರೆದ ಕಥೆಯಲ್ಲಿ ಅವರು ಜೀವಿಸಿದ್ದಾರೆ. ನಟಿ ಲೇಖಾ ಚಂದ್ರ ಅಭಿನಯಕ್ಕೆ ‘ರಾಜ್ಯ ಪ್ರಶಸ್ತಿ’ ಗ್ಯಾರಂಟಿ. ಜತೆಗೆ ಬಹುತೇಕ ಹೊಸ ಹಾಗೂ ಅನುಭವಿ ಕಲಾವಿದರಿಂದ ‘ಲೈಫ್​ ಟುಡೇ’ ಮೆರುಗು ಹೆಚ್ಚಿಸಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net