ಸ್ಪಷ್ಟ ಗುರಿಯಿದ್ದರೆ ಬದುಕು ಹಸನು

16 KRN-1
ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಚಟುವಟಿಕೆಗಳ ಕಾರ್ಯಕ್ರಮವನ್ನು ಡಿ.ರವಿಶಂಕರ್ ಉದ್ಘಾಟಿಸಿದರು. ಎಚ್.ವಿಶ್ವನಾಥ್, ಎಚ್.ಪಿ.ಪ್ರಶಾಂತ್ ಜೈನ್ ಮತ್ತಿತರರು ಇದ್ದರು.
Published on

ಕೆ.ಆರ್.ನಗರ : ವಿದ್ಯಾರ್ಥಿಗಳು ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ಎಚ್ಚರಿಕೆಯಿಂದ ಅಭ್ಯಾಸ ಮಾಡಿ ಯಶಸ್ಸಿನತ್ತ ಮುನ್ನಡೆದರೆ ಮಾತ್ರ ಸಾಧನೆ ಸುಲಭ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾವೇರಿ ಸಾಂಸ್ಕೃತಿಕ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತುಂಗಕ್ಕೇರಿ ವೈಯಕ್ತಿಕ ಬದುಕು ರೂಪಿಸಿಕೊಳ್ಳುವುದರ ಜತೆಗೆ ಸಮಾಜ ಮತ್ತು ದೇಶದ ಏಳಿಗೆಗೆ ತಮ್ಮದೇಯಾದ ಕೊಡುಗೆ ನೀಡಬೇಕು. ಈ ಮೂಲಕ ಬಲಿಷ್ಠ ಭಾರತದ ನಿರ್ಮಾಣಕ್ಕೆ ಕೈಜೋಡಿಸಿ ಇತರರಿಗೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನ ಪಡೆದು ಸ್ಪಷ್ಟ ಗುರಿ ತಲುಪಲು ದೃಢ ಸಂಕಲ್ಪ ಮಾಡಿಕೊಂಡು ಮುನ್ನಡೆದರೆ ಸಾಧನೆ ಮಾಡಲು ಸಾಧ್ಯ. ಎತ್ತರದ ಸ್ಥಾನಕ್ಕೆ ತಲುಪಲು ದೊಡ್ಡ ಕನಸು ಕಂಡು ಅದನ್ನು ನನಸಾಗಿಸಿಕೊಳ್ಳಲು ನಿಗದಿತ ಯೋಜನೆ ಹಾಕಿಕೊಂಡು ಏಕಾಗ್ರತೆಯಿಂದ ನಡೆದರೆ ಬದುಕು ಹಸನಾಗಲಿದೆ. ಆಟ ತುಂಟಾಟದೊಂದಿಗೆ ಶೈಕ್ಷಣಿಕ ಪ್ರಗತಿ ಸಾಧಿಸಿ ಎಂದು ಮಾರ್ಗದರ್ಶನ ಮಾಡಿದರು.

ಆಧುನಿಕ ಪ್ರಪಂಚದಲ್ಲಿ ಜಗತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಾವು ಅದಕ್ಕೆ ತಕ್ಕನಾಗಿ ಸಮಯಾವಕಾಶ ಮಾಡಿಕೊಂಡು ಎಲ್ಲ ಅವಕಾಶಗಳ ಸದ್ಬಳಕೆಯೊಂದಿಗೆ ಜ್ಞಾನವನ್ನು ವೃದ್ಧಿಸಿಕೊಂಡು ಸಾಧನೆಯ ಶಿಖರ ಏರಬೇಕೆಂದು ಸಲಹೆ ನೀಡಿದರು. ಕಾಲೇಜಿನ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕ್ಯಾಂಟೀನ್ ಆರಂಬಿಸಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು.

ಮೈಸೂರು ಮಹಾರಾಣಿ ಕಲಾ ಕಾಲೇಜಿನ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆ ಮತ್ತು ಇತರ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ನೈಪುಣ್ಯತೆ ಗಳಿಸಿ ಅದರಿಂದ ಭವಿಷ್ಯ ರೂಪಿಸಿಕೊಳ್ಳುವ ಏಣಿ ಮಾಡಿಕೊಳ್ಳಬೇಕೆಂದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು, ಶಾಲಾ ಮತ್ತು ಕಾಲೇಜುಗಳಿಗೆ ಭವ್ಯ ಕಟ್ಟಡಗಳು ಮುಖ್ಯವಲ್ಲ. ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಕಲಿಸುವ ಶಿಕ್ಷಕರ ಜತೆಗೆ ಬೋಧಕ ವೃಂದವೂ ಅತ್ಯಂತ ಪ್ರಮುಖ. ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಾಗ ಉಪನ್ಯಾಸಕರು ಪಠ್ಯದ ಜತೆಗೆ ಪಠ್ಯೇತರ ಮತ್ತು ಸಾಮಾನ್ಯ ಜ್ಞಾನದ ಬಗ್ಗೆಯೂ ಕಲಿಸಿ ಅವರನ್ನು ಸರ್ವ ಸಂಪನ್ನರಾಗಿ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗದರ್ಶಕರಾಗಬೇಕೆಂದು ಸಲಹೆ ನೀಡಿದರು.

ಇತಿಹಾಸ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸಿ ಅವರು ಸರ್ವಾಂತರಯಾಮಿಯಾಗುವಂತೆ ಮಾಡಬೇಕು. ರಾಜ್ಯಶಾಸ್ತ್ರ ಉಪನ್ಯಾಸಕರು ಕೂಡ ರಾಜಕೀಯ ನೀತಿ ಮತ್ತು ರಾಜಕಾರಣದಿಂದ ಜನರಿಗಾಗುವ ಅನುಕೂಲ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಾಗುವ ಕನಸು ಬಿತ್ತಬೇಕೆಂದು ಸಲಹೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಜತೆಗೆ ಇತರ ವಿಚಾರಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನ ಮಾಡಿ ಮಾನಸಿಕ ವಿಕಸನ ಮಾಡಿಕೊಂಡು ಕಲಿತ ಕಾಲೇಜು, ಉಪನ್ಯಾಸಕರು ಹಾಗೂ ಪಾಲಕರಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ಡಾ.ಬಿ.ಎಸ್.ಜಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್.ಪಿ.ಪ್ರಶಾಂತ್ ಜೈನ್, ಸದಸ್ಯರಾದ ಎಚ್.ಎಸ್.ವೇಣುಗೋಪಾಲ್, ನಟರಾಜು, ರಾಜಯ್ಯ, ಬೆಟ್ಟನಾಯಕ, ತಿಮ್ಮಯ್ಯ, ರಾಜೇಶ್, ಎಸ್.ಪ್ರಸಾದ್, ಜಯರಾಮೇಗೌಡ, ಶಂಕರ್, ರಾಮೇಗೌಡ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರೊ.ದೀಕ್ಷಿತ್, ಐಕ್ಯೂಎಸಿ ಘಟಕ ಸಂಚಾಲಕ ಡಾ.ಜಿ.ಬಿ.ತಿಪ್ಪೇಸ್ವಾಮಿ ಮತ್ತು ಪತ್ರಾಂಕಿತ ವ್ಯವಸ್ಥಾಪಕ ಎಂ.ರಘು, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್ ಜಬೀರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net