ವಚನ ಸಾಹಿತ್ಯ ಅಧ್ಯಯನದಿಂದ ಬದುಕು ಉತ್ತಮ

MDG UPANYASA
Published on

ಮುಂಡರಗಿ: ಶರಣರ ವಚನ ಸಾಹಿತ್ಯವನ್ನು ನಿರಂತರ ಅಧ್ಯಯನ ಮಾಡುವ ಮೂಲಕ ಉತ್ತಮ ಜೀವನ ನಮ್ಮದಾಗಿಸಿಕೊಳ್ಳಬೇಕು. ಶರಣರ ಜೀವನ ಚರಿತ್ರೆ, ತತ್ವ, ವಿಚಾರ, ಚಿಂತನೆಗಳನ್ನು ಅರಿತು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಸಿ.ಎಸ್. ಅರಸನಾಳ ಹೇಳಿದರು.

ಪಟ್ಟಣದ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಕಸಾಪ, ಶಸಾಪ, ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಏರ್ಪಾಟಾಗಿದ್ದ ಶರಣ ಚಿಂತನ ಮಾಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಡೆ, ನುಡಿ, ನೋಟ ಚೆನ್ನಾಗಿರಲು ವಚನ ಸಾಹಿತ್ಯ ಬದುಕಿಗೆ ಅತ್ಯಗತ್ಯ. ವಚನ ಸಾಹಿತ್ಯ ಹೇಳುವುದರಿಂದ, ಕೇಳುವುದರಿಂದ, ಆಚರಣೆಯಿಂದ ಮನಸು ಪರಿಶುದ್ಧವಾಗುತ್ತದೆ. ಶರಣರು ಸಾಮಾಜಿಕ ಕಳಕಳಿ, ಅನುಭಾವ, ಆಧ್ಯಾತ್ಮಿಕ ಚಿಂತನೆ ಹೊಂದಿದ್ದರು. ಅವರ ಬದುಕು ನಮಗೆ ಸನ್ಮಾರ್ಗ ಕಲ್ಪಿಸಿಕೊಡುತ್ತದೆ ಎಂದರು.

ಶಿಕ್ಷಕಿ ದೀಪಶ್ರೀ ಕಣವಿ ಮಾತನಾಡಿ, ಶರಣ ಮೋಳಿಗೆ ಮಾರಯ್ಯ ಬಸವಣ್ಣನವರ ತತ್ವ ಕಾಯಕ ಇವುಗಳಿಗೆ ಮಾರುಹೋಗಿ ಕಾಶ್ಮೀರದಿಂದ ತನ್ನ ಪತ್ನಿಯೊಂದಿಗೆ ರಾಜ ಆಸ್ಥಾನ ತೊರೆದು ಕಲ್ಯಾಣಕ್ಕೆ ಬಂದು ಕಾಯಕ, ದಾಸೋಹ ವೃತ್ತಿಯಾಗಿಸಿಕೊಂಡು ಜೀವನ ಸಾಗಿಸಿದರು. ಶರಣರನ್ನು ಕೇವಲ ಪೂಜಾ ಮೂರ್ತಿಗೆ ಸೀಮಿತ ಮಾಡಲಾಗುತ್ತಿದೆ. ಅವರನ್ನು ಜ್ಞಾನಮೂರ್ತಿಯನ್ನಾಗಿ ಮಾಡಿಕೊಳ್ಳಬೇಕು. ಶರಣ ಸಂಸ್ಕೃತಿಗೆ ಗೌರವ ನೀಡಬೇಕು. ಗೌರವ ತರುವ ಕೆಲಸ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕು ಘಟಕದ ಅಧ್ಯಕ್ಷ ಡಾ.ಸಂತೋಷ ಹಿರೇಮಠ ಮಾತನಾಡಿದರು. ತಾಲೂಕು ಶಸಾಪ ಗೌರವಾಧ್ಯಕ್ಷ ಪೊ›.ಆರ್.ಎಲ್. ಪೋಲೀಸಪಾಟೀಲ, ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಹಾಗೂ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net