

ನವದೆಹಲಿ: ಲವ್ ಜಿಹಾದ್ನ ಮುಖ್ಯ ಉದ್ದೇಶವೇ ಭಾರತದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುವುದು. ಹಾಗಾಗಿ ಅದನ್ನು ಲಘುವಾಗಿ ಪರಿಗಣಿಸಲಾಗದು ಎಂದು ಉತ್ತರ ಪ್ರದೇಶದ ಬರೇಲಿಯ ತ್ವರಿತ ನ್ಯಾಯಾಲಯ ಹೇಳಿದ್ದು, ಕಾನೂನುಬಾಹಿರ ಮತಾಂತರಕ್ಕಾಗಿ 25 ವರ್ಷದ ಮುಸ್ಲಿಂ ಯುವಕನಿಗೆ ಜೀವನಪೂರ್ತಿ ಜೈಲಿನಲ್ಲಿರಬೇಕು ಎಂಬ ಶಿಕ್ಷೆ ನೀಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ 42 ಪುಟಗಳ ಆದೇಶ ಪ್ರಕಟಿಸಿದ್ದು, ಲವ್ ಜಿಹಾದ್ನಲ್ಲಿ ಮುಸ್ಲಿಂ ಪುರುಷರು ವ್ಯವಸ್ಥಿತವಾಗಿ ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರ ಮಾಡುತ್ತಾರೆ. ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮತಾಂತರಿಸಲು ಪ್ರೀತಿಸುವಂತೆ ನಟಿಸಿ ಮೋಸದಿಂದ ಮದುವೆಯಾಗುತ್ತಾರೆ. ನಿರ್ದಿಷ್ಟ ಧರ್ಮದ ಕೆಲವು ಅರಾಜಕತಾವಾದಿ ಶಕ್ತಿಗಳು ಜನಸಂಖ್ಯೆಯ ಯುದ್ಧ ಮತ್ತು ಅಂತಾರಾಷ್ಟ್ರೀಯ ಪಿತೂರಿಮಾಡಿ ಭಾರತದ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಲು ಲವ್ ಜಿಹಾದ್ನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ನ್ಯಾಯಾಧೀಶರು 2022ರಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿಯ ವೀಡಿಯೊಗ್ರಾಫಿಕ್ ಸಮೀಕ್ಷೆ ಮತ್ತು ವುಜುಖಾನಾ ಪ್ರದೇಶವನ್ನು ಸೀಲಿಂಗ್ ಮಾಡಲು ಆದೇಶ ನೀಡಿದ್ದರು.
ಲವ್ ಜಿಹಾದ್ ಮೂಲಕ ಅಕ್ರಮ ಮತಾಂತರಗಳನ್ನು ಬೇರೆ ಯಾವುದೋ ದೊಡ್ಡ ಉದ್ದೇಶ ಪೂರೈಸಲು ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಲವ್ ಜಿಹಾದ್ ಮೂಲಕ ಮಾಡಲಾಗುವ ಅಕ್ರಮ ಮತಾಂತರಗಳಿಗೆ ಕಡಿವಾಣ ಹಾಕದಿದ್ದರೆ, ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಲವ್ ಜಿಹಾದ್ ಪ್ರಕ್ರಿಯೆಗೆ ಭಾರೀ ಪ್ರಮಾಣದ ಹಣಕಾಸು ನೆರವು ಬರುತ್ತಿದ್ದು, ವಿದೇಶಿ ನಿಧಿಯೂ ಒಳಗೊಂಡಿರುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.
2023ರಲ್ಲಿ 22 ವರ್ಷದ ಮಹಿಳೆಯೊಬ್ಬರು ಆರೋಪಿ ಮೊಹಮ್ಮದ್ ಆಲಿಮ್ ಅಹ್ಮದ್ ವಿರುದ್ಧ ದೂರು ನೀಡಿದ್ದರು. ಆತನನ್ನು ಭೇಟಿಯಾದಾಗ ತನ್ನನ್ನು ಆನಂದ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದ. ಇಬ್ಬರು 2022ರಲ್ಲಿ ಬರೇಲಿಯ ಕೋಚಿಂಗ್ ಕ್ಲಾಸ್ವೊಂದರಲ್ಲಿ ಭೇಟಿಯಾಗಿದ್ದರು. 2022ರ ಮಾರ್ಚ್ 13ರಂದು ದೇಗುಲದಲ್ಲಿ ವಿವಾಹವಾಗಿದ್ದರು. ನಂತರ ಆತನ ನಿಜವಾದ ಗುರುತು ತಿಳಿದುಬಂತು ಎಂದು ಮಹಿಳೆ ಆರೋಪಿಸಿದ್ದಾರೆ. ಅಲಿಮ್ ಮೇಲೆ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ನೋವುಂಟು ಮಾಡುವುದು ಸೇರಿ ಹಲವು ಅಪರಾಧಗಳ ಆರೋಪ ಹೊರಿಸಲಾಗಿತ್ತು. ಆತನ ತಂದೆ ಕೂಡ ಕ್ರಿಮಿನಲ್ ಬೆದರಿಕೆಯ ಆರೋಪಕ್ಕೆ ಗುರಿಯಾಗಿ ಎರಡು ವರ್ಷಗಳ ಜೈಲು ಶಿಕ್ಷೆ ಎದುರಿಸಿದ್ದಾರೆ. ವಾರಂಟ್ ಹೊರಡಿಸಿದ ನಂತರ ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಹಾಜರಾದ ಮಹಿಳೆ, ತನ್ನ ಹೇಳಿಕೆಯನ್ನು ಬದಲಾಯಿಸಿದಳು. ಬಲಪಂಥೀಯ ಗುಂಪುಗಳು ತನ್ನ ಪೋಷಕರ ಮೇಲೆ ಒತ್ತಡ ಹೇರಿದ್ದರಿಂದ ಎಫ್ಐಆರ್ ದಾಖಲಿಸಿದ್ದೇನೆ ಎಂದಳು. ಆದರೆ ಆಕೆಯ ಹೇಳಿಕೆಯನ್ನು ಸ್ವೀಕರಿಸಲು ನಿರಾಕರಿಸಿದ ನ್ಯಾಯಾಲಯ, ಇಲ್ಲಿ ಆರೋಪಿಯ ಪ್ರಭಾವ ಬೀರಿದ್ದಾನೆ ಎಂದು ಹೇಳಿತು.