ಬಾಲಕಿಯ ಕೊಂದು ಅತ್ಯಾಚಾರ ಎಸಗಿದ್ದ ಅಪರಾಧಿಗೆ ಆಜೀವ ಜೈಲು

Court
Published on

ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿಗೆ ಪುಸಲಾಯಿಸಿ ಕರೆದೊಯ್ದು ಕೊಲೆ ಮಾಡಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಆಜೀವ ಜೈಲು ಶಿಕ್ಷೆ ವಿಧಿಸಿ ಕೋಟ್ ತೀರ್ಪು ನೀಡಿದೆ.

ವೀರಭದ್ರನಗರದ ಅನಿಲ್ ಬಾಲಗರ್ ಅಲಿಯಾಸ್ ಅನಿಲ್ ಅಪರಾಧಿ. ಎ್ಟಿಎಸ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಅವರು, ವಾದ-ಪ್ರತಿವಾದ ಆಲಿಸಿ ಅನಿಲ್‌ಗೆ ಜೀವಂತ ಇರುವವರೆಗೂ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ಮೃತ ಬಾಲಕಿ ಪಾಲಕರಿಗೆ 8 ಲಕ್ಷ ರೂ. ಪರಿಹಾರ ಮತ್ತು ಅಪರಾಧಿಗೆ ವಿಧಿಸಿರುವ 10 ಸಾವಿರ ರೂ. ದಂಡವನ್ನೂ ನೀಡುವಂತೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.

ಪಾಲಕರ ಜತೆಗಿದ್ದ ಬಾಲಕಿ, 2017ರ ಏ. 20ರ ಸಂಜೆ ಮನೆ ಮುಂದೆ ಆಟವಾಡುತ್ತಿತ್ತು. ಪಕ್ಕದ ಮನೆಯಲ್ಲಿ ನೆಲೆಸಿದ್ದ ಅನಿಲ್, ವಿಕೃತ ದೃಷ್ಟಿ ಬಿದ್ದಿತ್ತು. ‘ಚಿಂಟು ಟಿ.ವಿ. ಹಾಕುತ್ತೇನೆ’ ಎಂದು ಮನೆಗೆ ಕರೆದುಕೊಂಡು ಹೋಗಿ, ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ವಿಚಲಿತವಾದ ಮಗು, ‘ಮನೆಗೆ ಹೋಗುತ್ತೇನೆ.. ಬಿಡಿ ಆಂಕಲ್’ ಎಂದಾಗ ಬಲವಂತವಾಗಿ ಹಿಡಿದುಕೊಂಡಿದ್ದ.

ಹೊರಗೆ ಬಿಟ್ಟರೆ ನಡೆದಿದ್ದನ್ನು ತನ್ನ ಪಾಲಕರಿಗೆ ಹೇಳಿಬಿಡುತ್ತಾಳೆ ಎಂದು ಶೌಚಗೃಹಕ್ಕೆ ಎತ್ತಿಕೊಂಡು ಹೋಗಿ ಕತ್ತು ಇಸುಕಿ ಕೊಲೆ ಮಾಡಿದ್ದ. ಆ ನಂತರ ಅತ್ಯಾಚಾರ ಎಸಗಿದ್ದ. ಇನ್ನೊಂದೆಡೆ, ಮಗು ಕಾಣಿಸುತ್ತಿಲ್ಲ ಎಂದು ಪಾಲಕರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಈತನ ಬಾಗಿಲು ಬಡಿದು ಕೇಳಿದಾಗ ಅನಿಲ್, ಕಿಟಕಿಯಲ್ಲೇ ಕರೆದು ಇಲ್ಲ ಎಂದು ಉತ್ತರಿಸಿದ್ದ. ಬಾಲಕಿಯ ಶವವನ್ನು ರಟ್ಟಿನ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ. ನಂತರ ತುರ್ತಾಗಿ ಊರಿಗೆ ಹೋಗಬೇಕೆಂದು ಸ್ನೇಹಿತರಿಗೆ ಹೇಳಿ ಪರಾರಿಯಾಗಿದ್ದ.

ಇತ್ತ ಬಾಲಕಿ ಪಾಲಕರು, ಗಿರಿನಗರ ಪೊಲೀಸರಿಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕೆಲ ದಿನಗಳ ಬಳಿಕ ಅನಿಲ್ ಮನೆಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರು ಸಹಾಯದಿಂದ ಒಳಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ತನಿಖೆ ಕೈಗೊಂಡ ಅಂದಿನ ಇನ್‌ಸ್ಪೆಕ್ಟರ್ ಬಿ.ಎಂ. ಕೊಟ್ರೇಶಿ ನೇತೃತ್ವದ ತಂಡ ಅನಿಲ್‌ನನ್ನು ಬಂಧಿಸಿತ್ತು. ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net