

ಸಂತೋಷವಾಗಿದ್ದಾಗ ನಮ್ಮಲ್ಲಿ ಎನೋ ಒಂದು ವಿಕಾಸವಾಗುವ ಅನುಭವವಾಗುತ್ತದೆ. ನೀವಿದನ್ನು ಗಮನಿಸಿದ್ದೀರಾ? ನಾವು ಬೇಸರದಲ್ಲಿದ್ದಾಗ ನಮ್ಮಲ್ಲಿ ಕುಗ್ಗಿದಂತೆ ಭಾಸವಾಗುತ್ತದೆ. ಈ ವಿಕಾಸವಾಗುವ ಮತ್ತು ಸಂಕುಚಿತವಾಗುವುದನ್ನು ನಾವು ಅರಿತ ತಕ್ಷಣ ನಮ್ಮಲ್ಲಿ ಬಿಡುಗಡೆಯ ಅನುಭವವಾಗುತ್ತದೆ. ಆಗ ನಮ್ಮ ಮನಸ್ಸು ಅಥವಾ ಚೈತನ್ಯ, ಬೇರೊಬ್ಬರ ಮಾತು ಮತ್ತು ಅಭಿಪ್ರಾಯಗಳಿಗೆ ಕಾಲ್ಚೆಂಡಾಗುವುದಿಲ್ಲ. ಆಗ ಮುಕ್ತರಾಗುತ್ತೇವೆ. ಯಾವುದೇ ಷರತ್ತುಗಳು ಇಲ್ಲದ ಸಂತೋಷವನ್ನು ಹೊಂದುತ್ತೇವೆ. ನಮ್ಮ ಉಸಿರಾಟದ ಬಗೆಗಿನ ಅರಿವು ಮತ್ತು ಜ್ಞಾನ ನಮಗೆ ತುಂಬ ಅವಶ್ಯಕ. ನಮ್ಮ ಉಸಿರಾಟವೇ ನಮಗೆ ದಾರಿದೀಪವಾಗಬಹುದು. ಆದರೆ ನಮಗೆ ಇದರ ಅರಿವೇ ಇಲ್ಲ. ಮನಸ್ಸಿನ ಪ್ರತಿಯೊಂದು ಭಾವನೆಗೂ ಉಸಿರಾಟದಲ್ಲಿ ಅದಕ್ಕೆ ಅನುಗುಣವಾದ ಲಯವಿದೆ. ನಾವು ನಮ್ಮ ಮನಸ್ಸನ್ನು ನೇರವಾಗಿ ನಿಭಾಯಿಸಲು ಸಾಧ್ಯವಾಗದಿರುವಾಗ ನಾವು ಅದನ್ನು ಉಸಿರಿನ ಮೂಲಕ ನಿಯಂತ್ರಿಸಬಹುದಾಗಿದೆ. ಖಿನ್ನತೆ ಅಥವಾ ಬೇಸರದಿಂದ ಹೇಗೆ ಹೊರಬರುವುದು ಎಂಬುದನ್ನು, ನಮ್ಮ ಶಾಲೆಗಳಲ್ಲಾಗಲಿ ಅಥವಾ ಮನೆಗಳಲ್ಲಾಗಲಿ ಯಾರೂ ಹೇಳಿಕೊಡುವುದಿಲ್ಲ. ನಾವು ಈ ಭೂಮಿಗೆ ಬಂದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ದೀರ್ಘವಾದ ಉಸಿರನ್ನು ತೆಗೆದುಕೊಳ್ಳುವುದು, ನಂತರ ಅಳುವುದು. ಹಾಗೆಯೇ ನಾವು ಈ ಭೂಮಿಯನ್ನು ಬಿಟ್ಟು ಹೋಗುವಾಗ ಕೊನೆಯ ಉಸಿರನ್ನು ಹೊರಹಾಕಿ ಇತರರನ್ನು ಅಳಿಸುತ್ತೇವೆ. ಈ ಎರಡು ಮಹತ್ವದ ಉಸಿರಿನ ಮಧ್ಯೆ ನಮ್ಮ ಜೀವನವಿದೆ. ಆದರೆ ನಾವು ಎಂದಿಗೂ ಈ ಉಸಿರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನ ಮಾಡಿಲ್ಲ. ನಾವು ಲಯಬದ್ಧವಾಗಿ ಉಸಿರಾಟ ಮಾಡುವುದರಿಂದ ನಮ್ಮ ಚೈತನ್ಯದೊಂದಿಗೆ ಸಂಪರ್ಕ ಮೂಡುತ್ತದೆ. ನಮ್ಮದೇ ಅಸ್ತಿತ್ವದ ಆಂತರ್ಯದಲ್ಲಿ ನೆಲೆ ನಿಲ್ಲುತ್ತೇವೆ. ಆಗ ನಾವು ಈ ಪ್ರಪಂಚದ ಎಲ್ಲರೊಂದಿಗೆ ಎಲ್ಲದರೊಂದಿಗೆ, ಹೊಂದಿಕೊಂಡು ಸಾಗುತ್ತೇವೆ. ನಾವು ಉಸಿರಿನ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಲೇಬೇಕು. ನಮ್ಮ ಅಸ್ತಿತ್ವದ ವಿವಿಧ ಸ್ತರಗಳಾದ, ದೇಹ, ಉಸಿರು, ಮನಸ್ಸು, ಬುದ್ಧಿ, ಸ್ಮೃ, ಅಹಂಕಾರ ಮತ್ತು ಆತ್ಮ, ಇವುಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಇದೇ ಜೀವನ ಕಲೆ. ಇದರಿಂದಾಗಿ ನಾವು ವರ್ತಮಾನದ ಈ ಕ್ಷಣದಲ್ಲಿ ಬದುಕುತ್ತೇವೆ ಮತ್ತು ಇದರಿಂದ ಜನ್ಮತಃ ಬಂದಂತಹ ಮುಗ್ಧತೆಯನ್ನು ಕಾಪಾಡಿಕೊಂಡು ಎಲ್ಲರೊಡನೆಯೂ ಪ್ರೀತಿಪೂರ್ವಕವಾಗಿ ವ್ಯವಹರಿಸಬಹುದಾಗಿದೆ.