ವರುಣನ ರುದ್ರನರ್ತನ ಬದುಕು ಹೈರಾಣ

Rain State
Published on

ಬೆಂಗಳೂರು: ಬಂಗಾಳಿ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಧಾರಾಕಾರ ಮಳೆಗೆ ಸಿಲುಕಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅ.16ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮತ್ತಷ್ಟು ಸಂಕಷ್ಟ ಎದುರಾಗುವ ಆತಂಕ ಕಾಡುತ್ತಿದೆ. ನಿರಂತರ ಮಳೆಯಿಂದ ಹಳ್ಳ-ಕೊಳ್ಳ, ನದಿ-ತೊರೆಗಳು ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿ ಕಾಡುತ್ತಿದೆ. ಇದರಿಂದಾಗಿ ಮುಂಗಾರು ಹಂಗಾಮಿಗೆ ಕಾಡಿದ ಅತಿವೃಷ್ಟಿ ಇದೀಗ ಹಿಂಗಾರು ಬಿತ್ತನೆಗೂ ಅಡ್ಡಿಯಾಗುತ್ತಿದೆ.

ಕೊಚ್ಚಿಕೊಂಡು ಹೋದ ವೃದ್ಧ: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವಡ್ಡು ಗ್ರಾಮದ ಬಳಿ ನಾರಿಹಳ್ಳದಲ್ಲಿ ಭಾನುವಾರ ಕೊಚ್ಚಿಕೊಂಡು ಹೋಗಿದ್ದ ವೃದ್ಧರೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಕೊರವರ ಚನ್ನಪ್ಪ (65) ಮೃತ. ಈಚಲು, ಲಕ್ಕೆ ಬುಟ್ಟಿ ಹೆಣೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಚನ್ನಪ್ಪ, ಭಾನುವಾರ ನಾರಿಹಳ್ಳದ ಬದುವಿನಲ್ಲಿ ಲಕ್ಕೆ (ಕೋಲು)ಬರ್ಲು ಕೊಯ್ದು ತರಲು ಹೋಗಿದ್ದರು. ಸಂಜೆ ಮಳೆ ಆರಂಭವಾಗಿದ್ದು, ಕೊಯ್ದಿದ್ದ ಲಕ್ಕೆ ಬರ್ಲುಗಳನ್ನು ತಲೆ ಮೇಲೆ ಹೊತ್ತು ಹಳ್ಳ ದಾಟುತ್ತಿದ್ದಾಗ ನೀರಿನ ಸೆಳೆತದಿಂದ ಹಳ್ಳಕ್ಕೆ ಬಿದ್ದು, ಕೊಚ್ಚಿ ಹೋಗಿ ದ್ದಾರೆ. ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ನೆಲ ಕಚ್ಚಿದೆ. ಅಲ್ಲದೇ 2 ಗ್ರಾಮದ ಮಣ್ಣಿನ ಮನೆಗಳು ಭಾಗಶಃ ಕುಸಿದಿವೆ.

14 ಜಿಲ್ಲೆಗಳಲ್ಲಿ ಭಾರಿ ಮಳೆ: ಬಂಗಾಳಕೊಲ್ಲಿಯ ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಮುಂದಿನ 2 ದಿನ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಲಿದ್ದು, ಅ.14ರವರೆಗೆ 14 ಜಿಲ್ಲೆ ಗಳಲ್ಲಿ ಆರೆಂಜ್ ಅಲರ್ಟ್ ಹಾಗೂ 7 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ.15ರಿಂದ ಮಳೆಯ ಪ್ರಮಾಣ ಕಡಿಮೆ ಯಾಗುವ ಸಾಧ್ಯತೆಗಳಿವೆ. ಹೀಗಾಗಿ ಕರಾವಳಿ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.

ಬೆಳಗಾವಿ, ಕಲಬುರಗಿಯಲ್ಲಿ ತಲಾ 1 ಸಾವು: ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಬೈಲಹೊಂಗಲ, ಖಾನಾಪುರ, ಮೂಡಲಗಿ, ಚಿಕ್ಕೋಡಿ, ಅಥಣಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಹಲವು ಕೃಷಿ ಬೆಳೆಗಳು ಹಾನಿಗೀಡಾಗಿದ್ದು, ಹಲವೆಡೆ ಮನೆಗಳು ಕುಸಿದ ವರದಿಯಾಗಿದೆ. ಹುಕ್ಕೇರಿ ಪಟ್ಟಣದಲ್ಲಿ ಭಾನುವಾರ ಸುರಿದ ದಾಖಲೆ (162 ಮಿ.ಮೀ.) ಮಳೆಗೆ ಗ್ಯಾರೇಜ್ ಕುಸಿದು ಅಸ್ಲಂ ಮೀರಾಸಾಬ್ ಅಲ್ಲಾಖಾನ್ (52) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಳ್ಳದ ನೀರಿನ ಸೆಳೆವಿಗೆ ಕೊಚ್ಚಿ ಹೋಗಿದ್ದ ಓರ್ವ ಯುವಕ ಹಾಗೂ ವೃದ್ಧನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸವದತ್ತಿ ಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಯ ಗೋಡೆಗಳ ಪಾರ್ಶ್ವಭಾಗ ಕುಸಿದಿದೆ. ಜಿಲ್ಲೆಯಲ್ಲಿ ಸೋಮವಾರ ಕೂಡ ಮಳೆಯಾಗುತ್ತಿದ್ದು, ಕಟಾವಿಗೆ ಬಂದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ವ್ಯಕ್ತಿ ಬಲಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಅಳ್ಳೋಳ್ಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ ಮೋನಪ್ಪ ನಡುವಿನಕೇರಿ (26) ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ಮಹಿಳೆ ಶವ ಪತ್ತೆ: ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಮರಗುತ್ತಿ ಹತ್ತಿರದ ಶೇರಿ ಗುಡ್ಡ ಬಳಿಯ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮಹಿಳೆ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮರಗುತ್ತಿ ತಾಂಡಾದ ಶಾಂತಾಬಾಯಿ ಹೋಬು ರಾಠೋಡ್(40) ಮೃತಪಟ್ಟವಳು. ಸೀತಾಫಲ ತರಲು ಭಾನುವಾರ ಹೊಲಕ್ಕೆ ಹೋಗಿ ಸಂಜೆ ಮನೆಗೆ ವಾಪಸಾಗುವಾಗ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಳು.

ಅಪಾಯ ಮಟ್ಟದಲ್ಲಿ ಬೆಣ್ಣಿಹಳ್ಳ: ನವಲಗುಂದ, ನರಗುಂದ ಮತ್ತು ಲಕ್ಷೆ್ಮೕಶ್ವರ ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ನೂರಾರು ಮನೆಗಳು ನೆಲಕಚ್ಚಿದ್ದರೆ, ಬೆಣ್ಣಿಹಳ್ಳ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನವಲಗುಂದ ತಾಲೂಕಿನಲ್ಲಿ 55 ಮನೆಗಳು ಕುಸಿದು ಬಿದ್ದಿವೆ. ಶಾಲೆ, ಅಂಗನವಾಡಿ ಜಲಾವೃತವಾಗಿವೆ. ಹುಬ್ಬಳ್ಳಿ, ಧಾರವಾಡ ಮತ್ತು ಕುಂದಗೋಳ ಮೇಲ್ಭಾಗದಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳ ಉಕ್ಕಿ ಹರಿದಿವೆ. ಕೇಂದ್ರ ಜಲ ಆಯೋಗವು ಅಪಾಯದ ಬಗೆಗೆ ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದೆ. ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೀಡಾಗಿದೆ. 15 ಮನೆಗಳು ಕುಸಿದಿವೆ. ನರಗುಂದ ತಾಲೂಕಿನಲ್ಲಿ 2 ದಿನಗಳಲ್ಲಿ 30ಕ್ಕೂ ಅಧಿಕ ಮನೆ ಕುಸಿದು ಬಿದ್ದಿವೆ.

156 ಮನೆಗಳು ಕುಸಿತ: ವಿಜಯಪುರ ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸತತವಾಗಿ ವರುಣನ ಆರ್ಭಟ ಮುಂದುವರಿದಿದ್ದು ತೊಗರಿ, ಈರುಳ್ಳಿ, ಮೆಕ್ಕೆಜೋಳ, ಶೇಂಗಾ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 156 ಮನೆಗಳು ಭಾಗಶಃ ಕುಸಿದಿವೆ. 4 ಮನೆಗಳು ಸಂಪೂರ್ಣ ನೆಲಕಚ್ಚಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅತಾಲಟ್ಟಿ ಹಳ್ಳದಲ್ಲಿ ಗ್ರಾಮದ ನಿವಾಸಿ ಬಂದೇನವಾಜ್ ಮೊಕಾಶಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

970 ಹೆಕ್ಟೇರ್​ನಲ್ಲಿ ಬೆಳೆ ಹಾನಿ: ಕೊಪ್ಪಳ ಜಿಲ್ಲೆಯಲ್ಲಿ 2 ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ 970 ಹೆಕ್ಟೇರ್​ನಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಸಜ್ಜೆ, ಹತ್ತಿ, ಭತ್ತ, ಈರುಳ್ಳಿ, ಮೆಣಸಿನಕಾಯಿ, ಬಾಳೆ ಸೇರಿ ವಿವಿಧ ಬೆಳೆ ಹಾನಿಗೀಡಾಗಿದೆ. ಕುಕನೂರು ತಾಲೂಕಿನಲ್ಲಿ 90, ಕೊಪ್ಪಳ ತಾಲೂಕಲ್ಲಿ 20 ಮತ್ತು ಇತರ ಕಡೆ 30 ಸೇರಿ ಒಟ್ಟು 140 ಮನೆಗಳು ಭಾಗಶಃ ಬಿದ್ದಿವೆ. ಕನಕಗಿರಿಯ ಇತಿಹಾಸ ಪ್ರಸಿದ್ಧ ಲಕ್ಷ್ಮೀದೇವಿ ಕೆರೆ ತುಂಬಿ ಹರಿಯುತ್ತಿದೆ. ಕಾರಟಗಿಯ ರಸ್ತೆಗಳು ಮಳೆಯಿಂದ ಹಾಳಾಗಿದ್ದು, ಹಳ್ಳಗಳು ತುಂಬಿ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಯಲಬುರ್ಗಾ ತಾಲೂಕಲ್ಲಿ 130 ಮನೆಗಳು ಕುಸಿದಿದ್ದು, 180 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೀಡಾಗಿದೆ. ಲಿಂಗಸುಗೂರು ತಾಲೂಕಿನಾದ್ಯಂತ ಮಳೆಗೆ ಕರಡಕಲ್ ಕೆರೆ ತುಂಬಿ ಹರಿದಿದ್ದರಿಂದ ಭತ್ತದ ಗದ್ದೆ ಜಲಾವೃತಗೊಂಡಿದೆ.

ಲ್ಯಾಂಡಿಂಗ್ ಆಗದ ವಿಮಾನ: ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನಗರಕ್ಕೆ ಆಗಮಿಸಬೇಕಿದ್ದ ಮೂರು ವಿಮಾನಗಳು ವಾಪಸ್ ಹೋಗಿವೆ. ತಿರುಪತಿಯಿಂದ ಬೆಳಗ್ಗೆ 9.30ಕ್ಕೆ ಬಂದಿದ್ದ ಟ್ರುಜೆಟ್ ವಾಪಸ್ ತಿರುಪತಿಗೆ, 8.50ಗಂಟೆಗೆ ಬೆಂಗಳೂರು-ಬೆಳಗಾವಿ ಸ್ಪೆ್ತ್ರಸ್ ಜೆಟ್ ವಿಮಾನ ಕೂಡ ಮರಳಿ ಬೆಂಗಳೂರಿಗೆ ತೆರಳಿದೆ. ಹೈದ್ರಾಬಾದ್​ನಿಂದ ಬೆಳ ಗಾವಿಗೆ ಬೆಳಗ್ಗೆ 9.30 ಗಂಟೆಗೆ ಬಂದಿದ್ದ ಇಂಡಿಗೋ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ.

ರಣಮಳೆಗೆ ಜನತೆ ತತ್ತರ: ಬಾಗಲಕೋಟೆ ಜಿಲ್ಲೆಯ ಜನರಿಗೆ ವರುಣನ ಕಂಟಕ ಮುಂದುವರಿದಿದ್ದು, ಒಟ್ಟು 769 ಮನೆಗಳು ಕುಸಿದಿದೆ. ಮುಧೋಳ ತಾಲೂಕಿನ ಗ್ರಾಮಗಳಾದ ಮಿರ್ಜಿ ಒಂಟಗೋಡಿ -ಮಹಾಲಿಂಗಪುರಕ್ಕೆ ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಜಲಾವೃತಗೊಂಡಿದೆ. ಇಳಕಲ್ ತಾಲೂಕಿನ ಬಲಕುಂದಿ ಗ್ರಾಮದ ಪರಸಪ್ಪ ಎಂಬುವವರ ಮನೆ ಗೋಡೆ ಕುಸಿದಿದ್ದರಿಂದ ಮನೆಯಲ್ಲಿದ್ದ ನಾಲ್ವರು ಮಕ್ಕಳು ಮಣ್ಣಿನಲ್ಲಿ ಸಿಲುಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ನಂತರ ಸಮಯ ಪ್ರಜ್ಞೆ ಹಾಗೂ ಮನೆಯವರು ಹಾಗೂ ಸ್ಥಳಿಯರ ಸಹಕಾರದಿಂದ ಮಕ್ಕಳನ್ನು ರಕ್ಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net