ವಾಹನಗಳನ್ನು ಬೇಕಾಬಿಟ್ಟಿ ಚಲಾಯಿಸಿದ್ರೆ ಲೈಸೆನ್ಸ್ ರದ್ದು

driving lisence
Published on

ನವದೆಹಲಿ: ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನು ನಿರ್ವಹಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಹೊಸ ಹಾಗೂ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ರಸ್ತೆ ಅಪಘಾತಗಳನ್ನು ತಗ್ಗಿಸುವುದು ಮತ್ತು ಪುನರಾವರ್ತಿತ ನಿಯಮ ಉಲ್ಲಂಘಕರಿಗೆ ಕಠಿಣ ದಂಡವನ್ನು ಜಾರಿಗೊಳಿಸುವುದು ಈ ಉಪಕ್ರಮದ ಗುರಿಯಾಗಿದೆ.

ಚಾಲನಾ ಪರವಾನಗಿಗಳಿಗೆ ಋಣಾತ್ಮಕ ಪಾಯಿಂಟ್ ವ್ಯವಸ್ಥೆ ಪರಿಚಯಿಸುವುದು ಈ ಯೋಜನೆಯ ಪ್ರಮುಖ ಭಾಗವಾಗಿದೆ. ಅದರ ಪ್ರಕಾರ, ಚಾಲಕರು ಅಧಿಕ ನೆಗೆಟಿವ್ ಪಾಯಿಂಟ್​ಗಳನ್ನು ಪಡೆದರೆ ಅಂಥವರ ಡ್ರೈವಿಂಗ್ ಲೈಸೆನ್ಸ್ ಗಳನ್ನು ಅಮಾನತು ಅಥವಾ ರದ್ದು ಪಡಿಸಲಾಗುತ್ತದೆ. ವೇಗದ ಚಾಲನೆ ಮತ್ತು ರೆಡ್ ಲೈಟ್ ಉಲ್ಲಂಘನೆ ಮುಂತಾದ ಉಲ್ಲಂಘನೆಗಳಿಗೆ ಈಗ ವಿಧಿಸಲಾಗುವ ದಂಡ ಹಾಗೂ ಶುಲ್ಕಗಳಿಗೆ ಅತಿರಿಕ್ತವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ.

ಜಾಗತಿಕ ನಿಯಮಗಳ ಪ್ರಭಾವ: ಅನೇಕ ವಿದೇಶಗಳಲ್ಲಿರುವ ‘ಡಿಮೆರಿಟ್ ಮತ್ತು ಮೆರಿಟ್’ ಪಾಯಿಂಟ್​ಗಳ ಪ್ರಭಾವದಿಂದ ಸಚಿವಾಲಯ ಈ ಹೊಸ ವ್ಯವಸ್ಥೆಯನ್ನು ರೂಪಿಸಿದೆ. ಆಸ್ಟ್ರೇಲಿಯಾ, ಜರ್ಮನಿ, ಬ್ರಿಟನ್ ಮತ್ತು ಕೆನಡಾ ಸಹಿತ ಹಲವು ರಾಷ್ಟ್ರಗಳಲ್ಲಿ ಈ ನಿಯಮ ಅನುಷ್ಠಾನದಲ್ಲಿದೆ.

ಉತ್ತಮ ಚಾಲನೆಗೂ ಅಂಕ: ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಡಿಮೆರಿಟ್ ಅಂಕ ನೀಡಲಾಗುತ್ತದೆ. ಅದೇ ರೀತಿ ಉತ್ತಮ ಚಾಲನಾ ವರ್ತನೆ ಹಾಗೂ ಪರೋಪಕಾರ ಬುದ್ಧಿಗಾಗಿ ಮೆರಿಟ್ ಪಾಯಿಂಟ್​ಗಳನ್ನು ಕೊಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಸಾವಿನ ಹೆಚ್ಚಳ: ಹೆಚ್ಚು ದಂಡ ಸಹಿತ ಹಲವು ಕಠಿಣ ನಿಯಮಗಳನ್ನು 2019ರಲ್ಲಿ ಜಾರಿಗೊಳಿಸಿದರೂ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಏರುತ್ತಲೇ ಇರುವ ಕಾರಣ ಲೈಸೆನ್ಸ್ ಅಮಾನತು ಅಥವಾ ರದ್ದು ಸಹಿತ ನಿಯಮವನ್ನು ಬಿಗಿಗೊಳಿಸಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ರಸ್ತೆ ಅಪಘಾತಗಳಿಗೆ ಪ್ರತಿ ವರ್ಷ 1.7 ಲಕ್ಷಕ್ಕೂ ಅಧಿಕ ಜನರು ಬಲಿಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net