ತಂಬಾಕು ಸೇಲ್​ಗೆ ಬೇಕು ಲೈಸೆನ್ಸ್: ಪರವಾನಗಿರಹಿತ ಮಾರಾಟಕ್ಕೆ ದಂಡ; ಮಾಸಾಂತ್ಯಕ್ಕೆ ರಾಜ್ಯದಲ್ಲಿ ಜಾರಿ

Smoking
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಇನ್ನು ಮುಂದೆ ಟ್ರೇಡ್ ಲೈಸೆನ್ಸ್ ಇಲ್ಲದೇ ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೆ ದಂಡ ಕಟ್ಟಬೇಕಾಗುತ್ತದೆ. ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಮಾರಾಟ ಮಾಡುವ ಎಲ್ಲ ರೀತಿಯ ಅಂಗಡಿಗಳು ಪ್ರತ್ಯೇಕವಾದ ಟ್ರೇಡ್ ಲೈಸೆನ್ಸ್ ಹೊಂದಿರಬೇಕಾಗುತ್ತದೆಂಬ ನಿಯಮ ಈ ತಿಂಗಳ ಅಂತ್ಯದೊಳಗೆ ಜಾರಿಗೆ ಬರಲಿದೆ. ದೊಡ್ಡ ಅಥವಾ ಸಗಟು ಮಾರಾಟಗಾರರು ಮಾತ್ರವಲ್ಲ, ಸಣ್ಣಪುಟ್ಟ ಅಂಗಡಿಗಳು ಸಹ ಸ್ಥಳೀಯ ಸಂಸ್ಥೆಗಳಿಂದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಟ್ರೇಡ್ ಲೈಸನ್ಸ್ ಪಡೆಯಬೇಕು. ಅದನ್ನು ಅಂಗಡಿಗಳಲ್ಲಿ ಪ್ರದರ್ಶಿಸಬೇಕಾಗುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಹಾಗೂ ದಂಡ ಈಗಾಗಲೆ ಜಾರಿಯಲ್ಲಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಅನುಷ್ಠಾನವಾಗುತ್ತಿಲ್ಲ. ಜತೆಗೆ, ನಿಯಂತ್ರಣವೂ ಇಲ್ಲದಂತಾಗಿದೆ. ಟ್ರೇಡ್ ಲೈಸನ್ಸ್ ಜಾರಿಗೆ ಬಂದರೆ ಸ್ವಲ್ಪಮಟ್ಟಿನ ನಿಯಂತ್ರಣ ಸಾಧ್ಯವಾಗಬಹುದೆಂದು ಹೇಳಲಾಗುತ್ತಿದೆ.

ಕಾರಣವೇನು?: ತಂಬಾಕು ಸೇವನೆ ಆರೋಗ್ಯಕ್ಕೆ ಅಪಾರ ಹಾನಿ ಯುಂಟುಮಾಡುತ್ತದೆ. ಶಾಲಾ, ಕಾಲೇಜು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು, ಯುವಕರು, ಯುವತಿಯರು ತಂಬಾಕು ಸೇವನೆಯ ದಾಸರಾಗುತ್ತಿರುವುದು ಇತ್ತೀಚಿನ ಸಮೀಕ್ಷೆಗಳಲ್ಲಿ ಕಂಡು ಬರುತ್ತಿದೆ. ಶಾಲಾ-ಕಾಲೇಜುಗಳಿಂದ 100 ಮೀಟರ್ ಒಳಗಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮಗಳು ಉಪಯೋಗಕ್ಕೆ ಬರುತ್ತಿಲ್ಲ. ಟ್ರೇಡ್ ಲೈಸನ್ಸ್ ಮೂಲಕ ಸಣ್ಣಪುಟ್ಟ ಗೂಡಂಗಡಿಗಳಲ್ಲಿ ಸಿಗರೇಟ್, ಬೀಡಿ ಸಿಗದಂತೆ ನೋಡಿ ಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

ಸಮಯ ಉಳಿತಾಯ: ವ್ಯಾಪಾರಿಗಳು ಯಾವುದೇ ರೀತಿಯ ಟ್ರೇಡ್ ಲೈಸೆನ್ಸ್ ಪಡೆಯುವುದು ಹಾಗೂ ನವೀಕರಿಸುವ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ನಗರಾಭಿವೃದ್ಧಿ ಇಲಾಖೆ ತೆಗೆದುಕೊಂಡಿದೆ. ಇದರಿಂದ ವರ್ಷಕ್ಕೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಹೋಗುವ ಪ್ರಮೇಯ ತಪ್ಪಲಿದೆ.

13.3 ಲಕ್ಷ ಜನರಿಗೆ ದಂಡ: ಕೋಟ್ಪಾ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ದಂಡ ಹಾಕುವುದು ನಡೆದಿದೆ. ಆದರೂ ನಿಯಂತ್ರಣಕ್ಕೆ ಬಂದಿಲ್ಲ. 2019 ರಿಂದ 2022ರ ಸೆಪ್ಟಂಬರ್ ತನಕ ರಾಜ್ಯದಲ್ಲಿ 13.3 ಲಕ್ಷ ಜನರಿಗೆ ದಂಡ ಹಾಕಲಾಗಿದೆ. ದಂಡದ ಪ್ರಮಾಣ 200 ರೂ.

ಬೊಕ್ಕಸಕ್ಕೆ ಹೊರೆ: ತಂಬಾಕು ಹಾಗೂ ಉತ್ಪನ್ನಗಳ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುವವರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 900 ಕೋಟಿ ರೂ.ಗಳಷ್ಟು ಮೊತ್ತವನ್ನು ಖರ್ಚು ಮಾಡುತ್ತಿದೆ ಎಂಬ ಅಂದಾಜಿದೆ.

ಪರ ವಿರೋಧ: ಟ್ರೇಡ್ ಲೈಸನ್ಸ್ ನಿಯಮ ಜಾರಿಗೆ ತರಬೇಕು ಎಂಬುದು ಐದಾರು ವರ್ಷಗಳಿಂದ ಕೇಳಿಬರುತ್ತಿರುವ ಕೂಗು. ಮಕ್ಕಳ ಹಕ್ಕುಗಳ ಸಂಘಟನೆಗಳು, ವಕೀಲರು, ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿ ಬಂದಿತ್ತು. ಆದರೆ ತಂಬಾಕು ಉತ್ಪನ್ನಗಳ ಮಾರಾಟಗಾರರು ವಿರೋಧ ಮಾಡಿದ್ದರು. ಸರ್ಕಾರ ಸಿಗರೇಟ್, ತಂಬಾಕು ಉತ್ಪನ್ನಗಳ ಮೇಲೆ ನಿಯಂತ್ರಣಕ್ಕೆ 2020ರಲ್ಲಿಯೇ ಕರ್ನಾಟಕ ಪೌರಸಂಸ್ಥೆಗಳ ಕಾಯ್ದೆಯಡಿ ನಿಯಮ ರೂಪಿಸಿದ್ದರೂ, ಲಾಬಿ ಕಾರಣಕ್ಕೆ ಜಾರಿಗೆ ತರಲು ಆಗಿರಲಿಲ್ಲ.

ಸಿದ್ಧವಾಗಿವೆ ನಿಯಮಗಳು: ನಗರಾಭಿವೃದ್ಧಿ ಇಲಾಖೆ ಹೊಸದಾಗಿ ಮತ್ತೆ ನಿಯಮಗಳನ್ನು ರೂಪಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಕೇಳಿ ಅಂತಿಮ ಮಾಡಿದೆ. ಸದ್ಯದಲ್ಲಿಯೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಸ್ಥಳೀಯ ಸಂಸ್ಥೆಗಳ ಮೂಲಕ ಜಾರಿಗೊಳಿಸಲು ನೀಡಲಾಗುತ್ತದೆ. ಡಿಸೆಂಬರ್ ಅಂತ್ಯದೊಳಗೆ ಹೊಸ ನಿಯಮಾವಳಿಗಳನ್ನು ಅನುಷ್ಠಾನ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ಅಂಗಡಿ?: ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಣ್ಣಪುಟ್ಟ ಅಂಗಡಿಗಳಿರಬಹುದೆಂದು ಅಂದಾಜು ಮಾಡಲಾಗಿದೆ. ಅಂಗಡಿ ಮಾಲೀಕರು ಲೈಸೆನ್ಸ್ ಪಡೆಯಬೇಕಾಗಿ ರುವುದರಿಂದ ಸ್ಥಳೀಯ ಸಂಸ್ಥೆಗಳಿಗೂ ಆದಾಯ ಬರುತ್ತದೆ. ತಮಿಳುನಾಡು, ಅರುಣಾಚಲಪ್ರದೇಶ, ಮೇಘಾಲಯ ರಾಜ್ಯ ಗಳಲ್ಲಿ ಪ್ರಸ್ತುತ ಟ್ರೇಡ್ ಲೈಸೆನ್ಸ್ ಜಾರಿಯಲ್ಲಿದೆ ಎನ್ನಲಾಗಿದೆ

ದಬ್ಬಾಳಿಕೆಗೆ ದಾರಿ: ಲೈಸೆನ್ಸ್ ಇಲ್ಲದೆ ಮಾರಾಟ ಮಾಡುವವರ ಮೇಲೆ ಹಾಗೂ ಲೈಸೆನ್ಸ್ ಪಡೆಯಲು ಹೋದಾಗ ಲಂಚದ ಹಾವಳಿ ಹೆಚ್ಚಾಗುತ್ತದೆ. ಅನಗತ್ಯ ಕಿರುಕುಳವೂ ಇರುತ್ತದೆ ಎಂಬ ಕೂಗು ಮಾರಾಟಗಾರರಿಂದ ಕೇಳಿ ಬರುತ್ತಿದೆ.

ತಂಬಾಕಿನಿಂದ ಬರುವ ಕಾಯಿಲೆ

  • ಹೃದಯ ಸಂಬಂಧಿ ರೋಗಗಳು
  • ಶ್ವಾಸಕೋಶ ಸಮಸ್ಯೆ
  • ಕ್ಯಾನ್ಸರ್
  • ಕಣ್ಣಿನ ಪೊರೆ
  • ಕಿವಿಯ ರಕ್ತನಾಳಗಳು ಹೆಪು್ಪಗಟ್ಟುವಿಕೆ
  • ಪಾರ್ಶ್ವವಾಯುವಿಗೆ ತುತ್ತಾಗುವಿಕೆ
  • ದೇಶದಲ್ಲಿ ಪ್ರತಿನಿತ್ಯ ತಂಬಾಕು ಸೇವನೆಯಿಂದ ಸಾವನ್ನಪು್ಪವವರ ಸಂಖ್ಯೆ 2,200 ಎಂಬುದು ಅಧ್ಯಯನವೊಂದರಲ್ಲಿ ಕಂಡುಬಂದಿರುವ ಅಂದಾಜು
  • 13 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿದೆ
  • ಬೇರೆಯವರ ಧೂಮಪಾನದ ಹೊಗೆ ಕುಡಿದು ಅನಾರೋಗ್ಯಕ್ಕೆ ಗುರಿಯಾಗು ವವರ ಸಂಖ್ಯೆ ಶೇ.29
  • ಇ-ಸಿಗರೇಟ್ ಬಳಕೆ ಶೇ.2.8

ನಿಯಮಗಳಲ್ಲಿ ಏನಿದೆ?

  • ಸ್ಥಳೀಯ ಸಂಸ್ಥೆಗಳು ಲೈಸೆನ್ಸ್ ನೀಡುವ ಜವಾಬ್ದಾರಿ ಹೊಂದಿರುತ್ತವೆ
  • ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ಲೈಸೆನ್ಸ್ ನೀಡುವ ಅಥವಾ ತಿರಸ್ಕರಿಸುವ ನಿರ್ಧಾರವಾಗಬೇಕು
  • ಅರ್ಜಿ ತಿರಸ್ಕರಿಸುವುದಾದರೆ ನಿಖರ ಕಾರಣ ನೀಡಬೇಕು
  • ಅರ್ಜಿ ಶುಲ್ಕ 500 ರೂ.
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಲೈಸೆನ್ಸ್ ಇಲ್ಲದಿದ್ದರೆ ದಂಡ 5000 ರೂ.
  • ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ದಂಡದ ಪ್ರಮಾಣ 4000 ರೂ.
  • ದಂಡ ಹಾಕಿದ ನಂತರವೂ ಲೈಸೆನ್ಸ್ ಪಡೆಯದಿದ್ದರೆ ದಿನಕ್ಕೆ ್ಝ;100 ದಂಡ
  • ಲೈಸೆನ್ಸ್ ಪ್ರತಿ ಹಾಗೂ ತಂಬಾಕಿನಿಂದ ಆರೋಗ್ಯದ ಮೇಲಾಗುವ ದುಷ್ಪರಿ ಣಾಮ ಫಲಕ ಅಳವಡಿಕೆ ಕಡ್ಡಾಯ
  • ಒಮ್ಮೆಗೆ ಐದು ವರ್ಷಗಳ ಅವಧಿಗೆ ಲೈಸೆನ್ಸ್ ಪಡೆಯಬಹುದು. ಶುಲ್ಕದಲ್ಲಿ ಯಾವುದೇ ವಿನಾಯ್ತಿ ಇಲ್ಲ
  • ಲೈಸೆನ್ಸ್ ಅವಧಿ ಮುಗಿಯುವ ಒಂದು ತಿಂಗಳ ಮುನ್ನ ನವೀಕರಣ ಮಾಡಿಕೊಳ್ಳಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net