ಪಿಡಿಒ ತಲೆಬೇನೆ ಹೆಚ್ಚಿಸಿದ ಗ್ರಂಥಾಲಯ

klr Digital library
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಡಿಜಿಟಲ್​ ಗ್ರಂಥಾಲಯ.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಪಂಚಾಯತ್​ ರಾಜ್​ ಇಲಾಖೆಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಿರುವ ಡಿಜಿಟಲ್​ ಗ್ರಂಥಾಲಯಗಳ ನಿರ್ವಹಣೆಯು ಪಿಡಿಒಗಳಿಗೆ ಹೊರೆ ಹೆಚ್ಚುವಂತೆ ಮಾಡಿದೆ.

ಜಿಲ್ಲೆಯಲ್ಲಿ ಒಟ್ಟು 154 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗಿದ್ದು, ಪ್ರತಿ ಗ್ರಂಥಾಲಯಕ್ಕೆ ಒಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಿದ್ದು, ಗ್ರಂಥಾಲಯಗಳ ನಿರ್ವಹಣೆಯನ್ನು ಸದ್ಯ ಆಯಾ ಗ್ರಾಮ ಪಂಚಾಯಿತಿಗೆ ವಹಿಸಲಾಗಿದ್ದು, ಪುಸ್ತಕ, ಇಂಟರ್​ನೆಟ್​, ಸಿಬ್ಬಂದಿ ವೇತನ ಸೇರಿ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ನೀಡಲಾಗಿದೆ.

ಡಿಜಿಟಲ್​ ಕಾರಣದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಾಲತಾಣ ಮತ್ತು -ಸಾರ್ವಜನಿಕ ಗ್ರಂಥಾಲಯ, ಆ್ಯಪ್​ ಮೂಲಕ ಇ&-ಪುಸ್ತಕಗಳು, ಶೈಕ್ಷಣಿಕ ವಿಡಿಯೋ ಲಭ್ಯವಿರುವುದರಿಂದ ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರ ಶೈಕ್ಷಣಿಕ ಮತ್ತು ಬೌದ್ಧಿಕಮಟ್ಟ ವೃದ್ಧಿಸುವಲ್ಲಿ ಡಿಜಿಟಲ್​ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಡಿಜಿಟಲೀಕರಣಗೊಂಡ ಗ್ರಂಥಾಲಯಗಳು ಓದುಗರ ಪಾಲಿಗೆ ದೊರಕಲು ಸಮರ್ಪಕ ವ್ಯವಸ್ಥೆ ಇಲ್ಲದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ನಗರವಾಸಿಗಳಂತೆ ಸ್ಪರ್ಧಾತ್ಮಕ ಪರೀೆಗಳಿಗೆ ತಯಾರಿ ನಡೆಸಲು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಡಿಜಿಟಲ್​ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆರಂಭಿಸಲಾಗಿದೆ.

15ನೇ ಹಣಕಾಸಿನಲ್ಲಿ ಹಳೆಯ ಗ್ರಂಥಾಯ ಕಟ್ಟಡ ದುರಸ್ತಿಗೊಳಿಸಿ ಡಿಜಿಟಲೀಕರಣ ಮಾಡಲಾಗಿದೆ. ಇದಕ್ಕೆ ಅಗತ್ಯವಾಗಿ ಬೇಕಿರುವ 6 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಓದುಗರಿಗೆ ಲಭ್ಯವಾಗುವಂತೆ ಮಾಡಲಾಗಿದೆ.

ಹೊಸದಾಗಿ ಬಿಡುಗಡೆಯಾಗುವ ಸ್ಪರ್ಧಾತ್ಮಕ ಪರೀೆಗೆ ಉಪಯೋಗ ಆಗುವ ಪುಸ್ತಗಳು, ಕ್ರೀಡೆ, ಸಾಮಾನ್ಯ ಜ್ಞಾನ, ಕಾದಂಬರಿ, ವಿಜ್ಞಾನ, ಐತಿಹಾಸಿಕಕ್ಕೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗಲಿವೆ.

* ಸಲಹಾ ಸಮಿತಿ ಜವಾಬ್ದಾರಿಗಳೇನು?

ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ಜಿಲ್ಲಾ ಹಾಗೂ ಗ್ರಾಪಂಮಟ್ಟದಲ್ಲಿ ಸಲಹಾ ಸಮಿತಿ ರಚನೆ ಮಾಡಲು ಸರ್ಕಾರ ಆದೇಶಿಸಿದ್ದು, ಸಮಿತಿಯು ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಹೆಚ್ಚಿಸಿ ಹೊಸ ಪುಸ್ತಕಗಳು, ಕಂಪ್ಯೂಟರ್​ಗಳು, ಪುಸ್ತಕ ಕಪಾಟುಗಳು, ಪೀಠೋಪಕರಣ ಒದಗಿಸಲು ಹಾಗೂ ಗ್ರಾಮದ ಯುವಕರು, ಯುವತಿಯರು, ಗೃಹಿಣಿಯರು, ಹಿರಿಯ ನಾಗರಿಕರು, ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡುವಂತೆ ಮಾಡುವುದು ಸೇರಿ ಹಲವು ಜವಾಬ್ದಾರಿ ವಹಿಸಲಾಗಿದೆ. ಜಿಲ್ಲಾಮಟ್ಟದ ಸಮಿತಿಗೆ ಜಿಪಂ ಸಿಇಒ ಅಧ್ಯಕ್ಷ, ಡಿಎಸ್​ ಸದಸ್ಯ, ಮುಖ್ಯ ಗ್ರಂಥಾಲಯಾಧಿಕಾರಿ, ಸದಸ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ, ಜಿಲ್ಲಾ ಅಂಗವಿಲಕರ ಕಲ್ಯಾಣಾಧಿಕಾರಿ, ಸ್ಥಳಿಯ ಬರಹಗಾರರು, ಸಾಹಿತಿಗಳು ಸದಸ್ಯರಾಗಿರುತ್ತಾರೆ. ಅದೇ ರೀತಿ ಗ್ರಾಪಂಮಟ್ಟದಲ್ಲೂ ಸಹ ಸಮಿತಿ ಕಾರ್ಯನಿರ್ವಹಿಸುತ್ತಿದೆ.

* ನಿರ್ವಹಣೆಗೆ ಅನುದಾನ

ಗ್ರಾಮ ಪಂಚಾಯಿತಿಗಳು ಆಸ್ತಿ ತೆರಿಗೆ ಜತೆಗೆ ಸಂಗ್ರಹಿಸುವ ಗ್ರಂಥಾಲಯ ಉಪಕರಣದ ಹಣ ಬಳಸಿಕೊಳ್ಳಬಹುದು, ಸ್ವಂತ ಸಂಪನ್ಮೂಲದಿಂದಲೂ ಬಳಸಿಕೊಳ್ಳುವುದು, ಪ್ರಸ್ತಾವನೆಯಂತೆ ದಾನಿಗಳಿಂದ ಹಣ, ಪುಸ್ತಕ, ಕಂಪ್ಯೂಟರ್​, ಪೀಠೋಪರಣ ನೆರವು ಪಡೆಯಬಹುದು. ತೆರಿಗೆಯಲ್ಲಿ ಲೈಬ್ರರಿ ಸೆಸ್​ ಶೇ.6 ಮೀಸಲಿರಿಸಿ ಇದನ್ನು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಮೊತ್ತದಲ್ಲಿ ಮೇಲ್ವಿಚಾರಕರ ವೇತನ ನೀಡಲಾಗುತ್ತದೆ. ಗ್ರಂಥಾಲಯ ನಿರ್ವಹಣೆ, ಇಂಟರ್​ನೆಟ್​, ವಿದ್ಯುತ್​, ಪೇಪರ್​ ಬಿಲ್​ ಪಾವತಿಗೆ ಪಂಚಾಯಿತಿ ಖಾತೆಯಿಂದಲೇ ಬರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಬಿ.ಎಸ್​.ಗಂಗಾಧರ್​ ತಿಳಿಸಿದರು.

* ಪಿಡಿಒ ನೀಡುವ ಮಾಹಿತಿ ಅಂತಿಮ

ಜಿಲ್ಲೆಯಲ್ಲಿ 154 ಗ್ರಾಮ ಪಂಚಾಯಿತಿ ಇದ್ದು, ಪ್ರತಿ ಗ್ರಾಪಂ ಮಟ್ಟದಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಆದರೆ ಕೆಲ ಗ್ರಂಥಾಲಯಗಳ ನಿರ್ವಹಣೆ ಅಸಮರ್ಪಕವಾಗಿದ್ದು, ಓದಗರು ಕುಳಿತುಕೊಳ್ಳಲು ಕುರ್ಚಿಗಳು ಇಲ್ಲ, ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿರುವುದು ಸೇರಿ ಕೆಲ ಸಮಸ್ಯೆಗಳಿಂದ ನಲುಗುತ್ತಿವೆ. ಇದರ ಪರಿಶೀಲನೆ ಮಾಡಬೇಕಾಗಿರುವ ಜವಾಬ್ದಾರಿ ಪಿಡಿಒಗಳದಾಗಿದ್ದು, ಜಿಪಂಗೆ ಅವರು ಕೊಡುವೆ ಮಾಹಿತಿಯೇ ಅಂತಿಮವಾಗಿರುತ್ತದೆ. ಏನೇ ಸಮಸ್ಯೆ ಎದುರಾದರೂ ಮೇಲ್ವಿಚಾರಕರು ಪಿಡಿಒಗಳನ್ನೇ ಕೇಳಬೇಕಾಗಿದ್ದು, ಅವರು ಯಾವ ಸಂದರ್ಭದಲ್ಲಿ ಸೌಲಭ್ಯ ಕಲ್ಪಿಸುತ್ತಾರೆ ಎಂಬದಕ್ಕೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಧೂಳು ಹಿಡಿಯುತ್ತಿವೆ ಪುಸ್ತಕಗಳು!

ಪಂಚಾಯಿತಿ ಕೇಂದ್ರಲ್ಲೇ ಲಭ್ಯವಿರುವ ಸರ್ಕಾರಿ ಕಟ್ಟಡ ಅಥವಾ ಪಂಚಾಯಿತಿ ಕಟ್ಟಡದಲ್ಲೇ ಗ್ರಂಥಾಲಯ ಸ್ಥಾಪನೆ ಮಾಡಲಾಗಿದ್ದು, ಕೆಲ ಕಡೆ ಧೂಳು ತುಂಬಿದ ಪುಸ್ತಕ, ಶಿಥಿಲಾವಸ್ಥೆಯ ಕಟ್ಟಡಗಳು, ಇಕ್ಕಟ್ಟಾದ ಸ್ಥಳ ಹೀಗೆ ಹಲವು ಸಮಸ್ಯೆಗಳ ನಡುವೆಯೇ ನಲುಗುತ್ತಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಗತ್ಯ ಸಂಪನ್ಮೂಲಗಳನ್ನು ಸೂಚಿತ ಅನುದಾನ ಬಳಕೆ ಮಾಡಿಕೊಂಡು ಎಲ್ಲ ಗ್ರಾಪಂಗಳಲ್ಲಿ ಗ್ರಂಥಾಲಯ ಡಿಜಿಟಲೀಕರಣಕ್ಕೆ ಸೂಚನೆ ನೀಡದೆ. ಅದರಂತೆ 15ನೇ ಹಣಕಾಸು ಯೋಜನೆ, ಪಂಚಾಯಿತಿಯ ಸ್ವಂತ ನಿಧಿ ಬಳಸಿ ಗ್ರಂಥಾಲಯಗಳಿಗೆ ಹೈಟೆಕ್​ ಸ್ಪರ್ಶ ನೀಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಈಗಾಗಲೇ 44 ಗ್ರಂಥಾಲಯಗಳಿಗೆ ಕಂಪ್ಯೂಟರ್​, 39 ಯುಪಿಎಸ್​ ಒದಗಿಸಲಾಗಿದೆ.

ಕೋಟ್​...

ಗ್ರಂಥಾಲಯಗಳ ನಿರ್ವಹಣೆಯ ಜವಾಬ್ದಾರಿ ನಮಗೆ ನೀಡಿದ್ದು, ಇಲಾಖೆಯ ಕೆಲಸದ ಜತೆಗೆ ಒತ್ತಡ ಹೆಚ್ಚಾಗಿದೆ. ಎಲ್ಲ್ಲ ಮೂಲ ಸೌಲಭ್ಯಗಳನ್ನು ಪಂಚಾಯಿತಿಯಿಂದಲೇ ನೀಡಬೇಕು. ಇದು ಹೊರೆಯಾಗಿದೆ. ಕೆಲವೊಮ್ಮೆ ಗ್ರಂಥಾಲಯ ಮೇಲ್ವಚಾರಕರು ಗೈರಾದರೆ ಪಂಚಾಯಿತಿ ಸಿಬ್ಬಂದಿಯೇ ತೆಗೆಯಬೇಕು.

> ಹೆಸರು ಹೇಳಲು ಇಚ್ಛಿಸದ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net