

ಮಕ್ಕಳು, ಯುವಸಮೂಹ ಹಾಗೂ ವೃದ್ಧರೂ ಪುಸ್ತಕ ಓದುವ ಹವ್ಯಾಸವಿರುವುದು ಸಮಾಜದ ಸ್ವಾಸ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಕೇವಲ ಮೋಜು-ಮಸ್ತಿಯಿದೆ ಎಂಬ ತಪ್ಪು ಕಲ್ಪನೆ ಮತ್ತು ನಾವೂ ಅದರಂತೆ ನಡೆಯಬೇಕು ಎಂಬ ಅಂಧಾನುಕರಣೆ ಹಲವು ಭಾರತೀಯರ ಮನದಲ್ಲಿದೆ. ಆದರೆ ವಾಸ್ತವವೇ ಬೇರೆ. ಈ ದೇಶಗಳಲ್ಲಿ ಗ್ರಂಥಾಲಯಕ್ಕೆ ಇಲ್ಲಿನ ಜನ ಬಹಳ ಮಹತ್ವವನ್ನು ಕೊಡುತ್ತಾರೆ. ಅಮೆರಿಕ ದೇಶದಲ್ಲೂ ಅನೇಕ ಗ್ರಂಥಾಲಯಗಳಿದ್ದು ಯುವಸಮೂಹ ಹಾಗೂ ನಾಗರೀಕರು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಪುಣ್ಯಭೂಮಿ ಭಾರತದಲ್ಲಿ ಶ್ರೀಕೃಷ್ಣನು ನ ಹಿ ಜ್ಞಾನೇನ ಸದೃಶಂ- ಜ್ಞಾನಕ್ಕೆ ಸಮಾನವಾದದ್ದು ಮತ್ತಾವುದೂ ಇಲ್ಲ ಎಂದಿದ್ದಾನೆ.
ವಾಲ್ಮೀಕಿ, ವ್ಯಾಸ, ಕಾಳಿದಾಸ, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಮುಂತಾದ ಮಹಾಕವಿಗಳು ಉದಯಿಸಿದ ದೇಶ ನಮ್ಮದು. ಆರ್ಯಭಟ, ವರಹಾಮಿಹಿರ, ಶುಶ್ರುತ, ಮುಂತಾದ ಶ್ರೇಷ್ಠ ವೈದ್ಯರು, ಗಣಿತಜ್ಞರು ಜನ್ಮ ತಳೆದ ದೇಶ ನಮ್ಮದು. ನಳಂದ, ತಕ್ಷಶಿಲ, ಮುಂತಾದ ಅತ್ಯಂತ ಪುರಾತನ ವಿಶ್ವವಿದ್ಯಾಲಯಗಳನ್ನು ಕಂಡ ದೇಶ. ಆದರೆ ನಮ್ಮ ಅನೇಕ ಗ್ರಂಥಾಲಯಗಳು ಇತ್ತೀಚಿನ ದಿವಸಗಳಲ್ಲಿ ಧೂಳಿನಿಂದ ಕೂಡಿವೆ. ಯುವಕರಲ್ಲಿ ಓದುವ ಅಭ್ಯಾಸವೂ ಕುಂಠಿತವಾಗುತ್ತಿದೆ. ದೇಶವು ಸಂಶೋಧನೆಯಲ್ಲಿ ಮುಂದುವರಿಯಲು ಜ್ಞಾನಾರ್ಜನೆ ಮುಖ್ಯ. ಅದಕ್ಕೆ ಗ್ರಂಥಾಲಯಗಳು ಪ್ರಧಾನ ಅಂಗ. ಭಾರತೀಯರಲ್ಲಿ, ವಿಶೇಷವಾಗಿ ಯುವ ಸಮೂಹದಲ್ಲಿ ಜ್ಞಾನಾರ್ಜನೆಯ ಕಿಚ್ಚು ಹೆಚ್ಚಾಗಲಿ.