

IND VS ENG: ಜು.23 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಮ್ಯಾಂಚೆಸ್ಟರ್ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಆಟಗಾರರ ಪಟ್ಟಿ ಪ್ರಕಟಿಸಿದ್ದು, ಅನುಭವಿ ಆಲ್‌ರೌಂಡರ್ ಲಿಯಾಮ್ ಡಾಸನ್ ಎಂಟು ವರ್ಷಗಳ ಸುಧೀರ್ಘ ವಿರಾಮದ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.
ಆಫ್-ಸ್ಪಿನ್ನರ್ ಬಶೀರ್ ಎಡಗೈ ತೋರುಬೆರಳಿಗೆ ಗಾಯವಾದ ಕಾರಣ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಬದಲಿಗೆ 35 ವರ್ಷದ ಆಲ್‌ರೌಂಡರ್ ಲಿಯಾಮ್ ಡಾಸನ್ ಅವರನ್ನು ಇಂಗ್ಲೆಂಡ್ ತಂಡ ಆಯ್ಕೆ ಮಾಡಿದೆ.
2016ರಲ್ಲಿ ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಡಾಸನ್ ಪಾದಾರ್ಪಣೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 66 ರನ್ ಗಳಿಸಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಅವರ ಅಜೇಯ 303 ರನ್‌ಗಳೊಂದಿಗೆ ಸ್ಮರಣೀಯ ಪಂದ್ಯವನ್ನಾಡಿದ್ದರು.
ಇನ್ನು ಡಾಸನ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಹ್ಯಾಂಪ್‌ಶೈರ್ ತಂಡ ಪರವಾಗಿ 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.ಬ್ಯಾಟಿಂಗ್ನಲ್ಲಿ 10,731 ರನ್ ಗಳಿಸಿದ್ದರೆ ಬೌಲಿಂಗ್ನಲ್ಲಿ 371 ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರೊಬ್ಬ ಅದ್ಬುತ ಆಲ್‌ರೌಂಡರ್ ಎನ್ನುವುದನ್ನು ನಿರೂಪಿಸಿದ್ದಾರೆ.ಅಲ್ಲದೆ, 2025ರ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ ಒನ್ ಸೀಸನ್‌ನಲ್ಲಿ, ಡಾಸನ್ ಮಿಂಚಿನ ಪ್ರದರ್ಶನ ನೀಡಿದ್ದು, ಒಂಬತ್ತು ಪಂದ್ಯಗಳಿಂದ, 44.66 ರ ಸರಾಸರಿಯಲ್ಲಿ 536 ರನ್‌ಗಳನ್ನು ಗಳಿಸಿದ್ದಾರೆ. ಈ ಋತುವಿನಲ್ಲಿ ಅವರು ಹ್ಯಾಂಪ್‌ಶೈರ್‌ನ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಬೌಲಿಂಗ್ನಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.
ಡಾಸನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2017ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಅಂದಿನಿಂದ ಟೆಸ್ಟ್ಗೆ ಮರು ಆಯ್ಕೆಯಾಗಲು ಅವಕಾಶಕ್ಕಾಗಿ ಎದುರು ನೋಡುತ್ತಿದ್ದರು.(ಏಜೆನ್ಸೀಸ್)