ಅವರು​ ನಮ್ಮೊಂದಿಗಿಲ್ಲ.. ಎಂಬ ಕಾಂಗ್ರೆಸ್​ ನಾಯಕನ ಹೇಳಿಕೆಗೆ ಶಶಿ ತರೂರ್​ ತಿರುಗೇಟು! | Shashi Tharoor

Shashi tharoor
Published on

Shashi Tharoor: ಶಶಿ ತರೂರ್ ನಮ್ಮೊಂದಿಗಿಲ್ಲ. ಅಲ್ಲದೆ, ತಿರುವನಂತಪುರಂನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾವು ಅವರನ್ನು ಆಹ್ವಾನಿಸುತ್ತಿಲ್ಲ ಎಂಬ ಕೇರಳ ಕಾಂಗ್ರೆಸ್ ಹಿರಿಯ ನಾಯಕ ಕೆ.ಮುರುಳೀಧರನ್ ಹೇಳಿಕೆಗೆ ಸಂಸದ ಶಶಿ ತರೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಸತ್​ ಬಳಿ ಸುದ್ದಿಗಾರರ ಜತೆ ಮಾತನಾಡಿ, 'ಈ ರೀತಿ ಹೇಳಲು ಅವರು ಯಾರು? ಕಾಂಗ್ರೆಸ್​ನಲ್ಲಿ ಅವರು ಯಾವ ಸ್ಥಾನ ಹೊಂದಿದ್ದಾರೆ. ಅವರ ಹೇಳಿಕೆಗೆ ಸರಿಯಾದ ಆಧಾರವಿರಬೇಕೆಂದು' ತಿರುಗೇಟು ಕೊಟ್ಟಿದ್ದಾರೆ.

ಕೆ.ಮುರುಳೀಧರನ್ ಹೇಳಿದ್ದೇನು?

ಜು.20ರಂದು ಮುರುಳೀಧರನ್ ಮಾತನಾಡಿ ''ಶಶಿ ತರೂರ್ ತಮ್ಮ ನಿಲುವನ್ನು ಬದಲಾಯಿಸುವವರೆಗೆ, ತಿರುವನಂತಪುರಂನಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಾವು ಅವರನ್ನು ಆಹ್ವಾನಿಸುವುದಿಲ್ಲ. ಅವರು ನಮ್ಮೊಂದಿಗಿಲ್ಲ, ಆದ್ದರಿಂದ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ. ತರೂರ್  ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ವಿರೋಧಿಸುತ್ತಾರೆ. ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿಯಂತಹ ಮಾಜಿ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಾರೆ'' ಎಂದು ಮುರಳೀಧರನ್ ಹೇಳಿದ್ದರು.

ಇತ್ತೀಚಿನ ಕೆಲ ದಿನಗಳಿಂದ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿರುವ ಶಶಿ ತರೂರ್ ಕಾಂಗ್ರೆಸ್ ಪಕ್ಷದ ನಿಲುವಿನ ವಿರುದ್ಧ ಕೇಂದ್ರ ಸರ್ಕಾರವನ್ನ ಬೆಂಬಲಿಸಿ ಮಾತನಾಡಿದ್ದು, ಕಾಂಗ್ರೆಸ್ ಹಿರಿಯ ನಾಯಕರನ್ನ ಕೆರಳಿಸಿದೆ. ಇತ್ತೇಚೆಗೆ ಮಲಯಾಳಂ ಪತ್ರಿಕೆಗೆ ಬರೆದ ಲೇಖನದಲ್ಲೂ ಕೂಡ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನ ಖಂಡಿಸಿ, ಆ ವೇಳೆ ಸಂಜಯ್ ಗಾಂಧಿ ತೆಗೆದುಕೊಂಡಿದ್ದ ನಿರ್ಧಾರಗಳನ್ನ  ಶಶಿ ತರೂರ್ ಟೀಕಿಸಿ ಬರೆದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net