ವಿಶಾಖಪಟ್ಟಣದ 13,000 ಟನ್ ವಿಷಾನಿಲ ಎಲ್ಲಿಗೆ ರವಾನೆಯಾಗುತ್ತಿದೆ ಗೊತ್ತಾ?

LG polymers
Published on

ವಿಶಾಖಪಟ್ಟಣ: 11 ಜನರನ್ನು ಬಲಿ ಪಡೆದು, ಸಾವಿರಾರು ಜನರನ್ನು ಅಸ್ವಸ್ಥಗೊಳಿಸಿದ್ದ ಆರ್​.ಆರ್​. ವೆಂಕಟಾಪುರದ ಎಲ್​.ಜಿ. ಪಾಲಿಮರ್ಸ್​ ಕಾರ್ಖಾನೆಯ ವಿಷಾನಿಲವನ್ನು ಬೇರೆಡೆ ಸಾಗಿಸಲಾಗುತ್ತಿದೆ.

ರಾಸಾಯನಿಕ ಕಾರ್ಖಾನೆಯಲ್ಲಿ ಎರಡು ಬೃಹತ್​ ಟ್ಯಾಂಕ್​ಗಳಲ್ಲಿ ಸ್ಟೈರೀನ್​ ಅನಿಲವನ್ನು ಸಂಗ್ರಹಿಸಿ ಇಡಲಾಗಿತ್ತು. ಮೇ 7ರ ಬೆಳಗಿನ ಜಾವ ಸೋರಿಕೆ ಉಂಟಾಗಿ 11 ಜನರನ್ನು ಬಲಿ ಪಡೆದಿತ್ತು. ಸುತ್ತಲಿನ ಐದು ಹಳ್ಳಿಗಳ ಜನರು ಅಸ್ವಸ್ಥರಾಗಿದ್ದರು.

ಸೋರಿಕೆಯಾಗಿದ್ದ ಟ್ಯಾಂಕ್​ನಲ್ಲಿದ್ದ ವಿಷಾನಿಲವನ್ನು ಕಂಪನಿಯ ಮುಖ್ಯ ಕಚೇರಿ ಇರುವ ದಕ್ಷಿಣ ಕೊರಿಯಾದ ಸಿಯೋಲ್​ಗೆ ಸಾಗಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಕಂಟೇನರ್​ ಟ್ಯಾಂಕ್​ವುಳ್ಳ ಹಡಗೊಂದು 8,000 ಟನ್​ ಸ್ಟೈರೀನ್​ ಅನಿಲವನ್ನು ತುಂಬಿಕೊಂಡು ಸಿಯೋಲ್​ನತ್ತ ಈಗಾಗಲೇ ಪ್ರಯಾಣ ಬೆಳೆಸಿದೆ. ಇನ್ನುಳಿದ ಅನಿಲ 5000 ಟನ್​ ಅನಿಲವನ್ನು ಇನ್ನೆರಡು ದಿನಗಳೊಳಗೆ ಸಾಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿ. ವಿನಯ್​ ಮಾಹಿತಿ ನೀಡಿದ್ದಾರೆ.

ಸದ್ಯ ಕಾರ್ಖಾನೆಯ ಇನ್ನೊಂದು ಟ್ಯಾಂಕ್​ ಹಾಗೂ ವಿಶಾಖಪಟ್ಟಣದ ಬಂದರಿನಲ್ಲಿರುವ ಮತ್ತೆರಡು ಟ್ಯಾಂಕ್​ಗಳಲ್ಲಿ ಸಿಂಗಾಪುರದಿಂದ ಆಮದು ಮಾಡಿಕೊಂಡ ಸ್ಟೈರೀನ್​ ಅನಿಲವನ್ನು ಸಂಗ್ರಹಿಸಿಡಲಾಗಿದೆ. ಆಂಧ್ರಪ್ರದೇಶ ಸರ್ಕಾರವು ಕೇಂದ್ರದೊಂದಿಗೆ ಮಾತುಕತೆ ನಡೆಸಿ ರಾಸಾಯನಿಕವನ್ನು ಸಿಯೋಲ್​ಗೆ ಕಳುಹಿಸಲು ವಿಶೇಷ ಹಡಗಿನ ವ್ಯವಸ್ಥೆ ಮಾಡಿತ್ತು.

ಭಾರಿ ದುರಂತಕ್ಕೆ ಕಾರಣವಾಗಿದ್ದು ಸಣ್ಣ ಸೋರಿಕೆಯಷ್ಟೇ ಒಂದು, ಟ್ಯಾಂಕ್​ನಲ್ಲಿದ್ದ ಅನಿಲವೆಲ್ಲ ಸೋರಿಕೆಯಾಗಿದ್ದರೆ ಉಂಟಾಗುತ್ತಿದ್ದ ದುರಂತವನ್ನು ಊಹಿಸಲು ಸಾಧ್ಯವಿಲ್ಲ. ಭೋಪಾಲ್​ ಅನಿಲ ದುರಂತವನ್ನು ಮೀರಿಸುವ ಘಟನೆ ಇದಾಗುತ್ತಿತ್ತು.

ಈ ನಡುವೆ, ದುರಂತದಲ್ಲಿ ಮೃತಪಟ್ಟ ಐವರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ವಿತರಿಸಲಾಗಿದ್ದು, ಇನ್ನುಳಿದವರ ವಾರಸುದಾರರನ್ನು ಪತ್ತೆ ಹಚ್ಚಲಾಗುತ್ತಿದೆ.

ಕಾರ್ಖಾನೆಯನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಅವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸುತ್ತಲಿನ ಐದು ಗ್ರಾಮಗಳಲ್ಲಿ ತಲಾ ಒಬ್ಬ ಸಚಿವರು ಗ್ರಾಮ ವಾಸ್ತ್ಯವ್ಯ ನಡೆಸುವಂತೆ ಸಿಎಂ ಜಗನ್​ಮೋಹನ್ ರೆಡ್ಡಿ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net