

ನ್ಯೂಯಾರ್ಕ್: ಕರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆಯ ಮಾಹಿತಿಯನ್ನು ಕದಿಯಲು ಚೀನಾ ಹ್ಯಾಕರ್ಗಳು ಯತ್ನಿಸಿದ್ದಾರೆ ಎಂದು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಆ್ಯಂಡ್ ಸೈಬರ್ ಸೆಕ್ಯುರಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೆರಿಕದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕರೊನೆ ಲಸಿಕೆ ಕಂಡು ಹಿಡಿಯುವಲ್ಲಿ ಪೈಪೋಟಿಗೆ ಬಿದ್ದವರಂತೆ ಸಂಶೋಧನೆಯಲ್ಲಿ ತೊಡಗಿವೆ. ಆದರೆ, ಈ ಮಾಹಿತಿಯನ್ನು ಕದಿಯಲು ಚೀನಾ ಹ್ಯಾಕರ್ಗಳು ಯತ್ನಿಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಕರೊನಾ ಚಿಕಿತ್ಸೆ ಹಾಗೂ ಪರೀಕ್ಷೆ ನಡೆಸಿರುವ ಮಾಹಿತಿಗೂ ಕನ್ನ ಹಾಕುತ್ತಿದ್ದಾರೆ. ಈ ಹ್ಯಾಕರ್ಗಳು ಚೀನಾ ಸರ್ಕಾರಕ್ಕೆ ಸಂಬಂಧಿಸಿದವರಾಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತ ಎಚ್ಚರಿಕೆಯನ್ನು ಕೆಲ ದಿನಗಳಲ್ಲಿಯೇ ಪೊಲೀಸರು ಅಧಿಕೃತವಾಗಿ ಹೊರಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಅಮೆರಿಕ ಪೊಲೀಸರ ವಾದವನ್ನು ಚೀನಾ ತಳ್ಳಿ ಹಾಕಿದೆ. ಯಾವುದೇ ರೀತಿಯ ಸೈಬರ್ ದಾಳಿಯನ್ನು ಚೀನಾ ವಿರೋಧಿಸುತ್ತದೆ. ಸದ್ಯ ಕರೊನಾ ಲಸಿಕೆ ಸಂಶೋಧನೆ ವಿಚಾರದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಹೀಗಾಗಿ ಸುಳ್ಳು ಸುದ್ದಿಗಳ ಮೂಲಕ ಚೀನಾವನ್ನು ಗುರಿಯಾಗಿಸಲಾಗುತ್ತಿದೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾಹೋ ಲಿಜಿಯಾನ್ ಹೇಳಿದ್ದಾರೆ.
ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ವೈದ್ಯಕೀಯ ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರದ ಸಂಸ್ಥೆಗಳ ಮೇಲೆ ಹೆಚ್ಚುತ್ತಿರುವ ಸೈಬರ್ ದಾಳಿಯ ಬಗ್ಗೆ ಕಳೆದ ವಾರವಷ್ಟೇ ಅಮೆರಿಕ ಹಾಗೂ ಬ್ರಿಟನ್ ಜಂಟಿಯಾಗಿ ಕಳವಳ ವ್ಯಕ್ತಪಡಿಸಿದ್ದವು.