ಬೇಜವಾಬ್ದಾರಿ ತೋರಿದರೆ ಸರ್ಕಾರಕ್ಕೆ ಪತ್ರ

bdvt kdp
ಭದ್ರಾವತಿ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಲಾಯಿತು. ಬಿ.ಕೆ.ಸಂಗಮೇಶ್ವರ್, ಶಾರದಾ ಪೂರ‌್ಯಾನಾಯ್ಕಾ, ಬಲ್ಕಿಷ್ ಬಾನು, ನಾಗರಾಜ್, ಗಂಗಣ್ಣ, ಮಣಿಶೇಖರ್ ಇತರರಿದ್ದರು.
Published on

ಭದ್ರಾವತಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಹಿತಿಯೇ ಇಲ್ಲವಲ್ರಿ, ಕೆಡಿಪಿ ಸಭೆಯ ಜ್ಞಾನ ಇದೆಯೇ? ಇಲ್ಲವೇ? ಹೊಳೆಹೊನ್ನೂರು ಕ್ಷೇತ್ರ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೆ? ಹಾಗಾದರೆ ನಮ್ಮ ಕ್ಷೇತ್ರಕ್ಕೆ ಬೇರೊಬ್ಬ ತಹಸೀಲ್ದಾರರನ್ನು ಕೊಡಿ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ತಾಲೂಕು ಕಚೇರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿ ಚರ್ಚಿಸಬೇಕಾದ ವಿಚಾರಗಳ ಕುರಿತು ನೀವು ಕೊಡುವ ವರದಿಯಲ್ಲಿ ಎಲ್ಲ ಮಾಹಿತಿಗಳು ಇರಬೇಕು. 94ಸಿ ಸೇರಿ ಹೊಳೆಹೊನ್ನೂರು ಭಾಗದ ಯಾವುದೇ ಮಾಹಿತಿ ನಿಮ್ಮ ಬಳಿ ಇಲ್ಲ. ನಾವು ಸಭೆಗೆ ಬಂದು ಮಾಹಿತಿ ಕೇಳಿದಾಗ ನೀಡುತ್ತೀರ. ಇದನ್ನು ನಾವು ಇಲ್ಲಿ ಓದಿಕೊಂಡು ನಿಮ್ಮೊಡನೆ ಚರ್ಚಿಸಬೇಕಾ? ನಿಮ್ಮ ಹರಿಕಥೆ ಕೇಳಲು ಮೀಟಿಂಗ್ ಮಾಡುತ್ತಿಲ್ಲ. ನಿಮ್ಮ ಬೇಜವಾಬ್ದಾರಿತನಕ್ಕೆ ಸರ್ಕಾರಕ್ಕೆ ಪತ್ರ ಬರೆಯಬೇಕಾಗುತ್ತದೆ. ಸಂಪ್ರದಾಯಬದ್ಧವಾಗಿ ಯಾವ ಕೆಲಸಗಳೂ ತಾಲೂಕು ಕಚೇರಿಯಲ್ಲಿ ನಡೆಯುತ್ತಿಲ್ಲ. ಎಲ್ಲ ಟೇಬಲ್ ಕೆಳಗಿನ ಬೋಣಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ನಮಗೆ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಎಂದು ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಕ್ಕುಪತ್ರ ಸೇರಿ ಾರ್ಮ್ ನಂ.57ಕ್ಕೆ ಸಂಬಂಧಿಸಿ ವಿಲೇವಾರಿ ಮಾಡಿರುವ ಅರ್ಜಿಗಳ ಕುರಿತು ಮಾಹಿತಿ ನೀಡುತ್ತಿದ್ದ ಮಂಜಾನಾಯ್ಕ ಅವರಿಗೆ ಪ್ರತಿಕ್ರಿಯಿಸಿ, ವಿಲೇವಾರಿ ಕುರಿತು ನೀವು ಸರಿಯಾಗಿ ತಿಳಿದುಕೊಂಡಿಲ್ಲ. ವಿಲೇ ಎಂದರೆ ಪೆಂಡಿಂಗ್ ಅಂತ ಅರ್ಥ ಬರುತ್ತೆ. ಕ್ಲೋಸ್ ಅಂತ ಅಲ್ಲ. ವಿಲೇ ಎಂಬ ಪದವನ್ನು ನಾವು ಕನ್ನಡದಲ್ಲಿ ಏನರ್ಥ ಎಂಬುದನ್ನು ಸರ್ಕಾರಕ್ಕೆ ಕೇಳಬೇಕಾಗಿದೆ ಎಂದು ಶಾರದಾ ಪೂರ‌್ಯಾನಾಯ್ಕ ಬೇಸರ ವ್ಯಕ್ತಪಡಿಸಿದರು.

ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಶಾಸಕಿ, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಶ್ರೀನಿವಾಸಪುರದಲ್ಲಿ ಸಾಕಷ್ಟು ವರ್ಷಗಳಿಂದ ಜನರು ವಾಸ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೂ ಹಕ್ಕುಪತ್ರ ಕೊಟ್ಟಿಲ್ಲ. 3 ಎಕರೆಗಿಂತ ಕಡಿಮೆ ಜಮೀನು ಹೊಂದಿದ ರೈತರನ್ನು ಒಕ್ಕಲೆಬ್ಬಿಸಬೇಡಿ ಎಂದು ಸರ್ಕಾರವೇ ಹೇಳಿದೆ. ಆದರೆ ಅರಣ್ಯ ಅಧಿಕಾರಿಗಳು ಇಲ್ಲಸಲ್ಲದ ಕಾನೂನುಗಳನ್ನು ಹೇಳಿ ಖಾತೆ ಮಾಡಿಕೊಡಲು ಬಿಡದೆ ರೈತರನ್ನು ಕಳ್ಳರನ್ನಾಗಿ ಮಾಡಿದ್ದಾರೆ ಎಂದರು.

ಅರ್ಜಿ ಇತ್ಯರ್ಥಕ್ಕೆ ಎಷ್ಟು ಇದನ ಬೇಕು?: ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾರೂ ದೂರುವುದಿಲ್ಲ. ತಾಲೂಕು ಕಚೇರಿ ಅಧಿಕಾರಿ, ಸಿಬ್ಬಂದಿ ಮಾತ್ರ ಉತ್ತಮ ಕೆಲಸ ಮಾಡಿದರೆ ಸಾಲದು. ಎಲ್ಲ ಇಲಾಖೆ ಅಧಿಕಾರಿಗಳು ಸಹ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಂಗಮೇಶ್ವರ್ ಸೂಚಿಸಿದರು. ಮೊದಲು ಕಚೇರಿಯ ಸಿಬ್ಬಂದಿ ಸಭೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಿ. ತಾಲೂಕು ಕಚೇರಿಯಲ್ಲಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಒಂದು ಅರ್ಜಿಯನ್ನು ಪೂರ್ಣಗೊಳಿಸಲು ಎಷ್ಟು ದಿನಗಳು ಬೇಕಾಗುತ್ತದೆ. ತಹಸೀಲ್ದಾರ್‌ಗೆ ಸಾರ್ವಜನಿಕರ ಕೂಗು ಕೇಳಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ನಗರಸಭೆ ಸದಸ್ಯ ಬಿ.ಕೆ.ಮೋಹನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ಮಣಿಶೇಖರ್, ತಹಸೀಲ್ದಾರ್ ಕೆ.ಆರ್.ನಾಗರಾಜ್, ತಾಪಂ ಇಒ ಗಂಗಣ್ಣ, ರಾಜೇಂದ್ರ, ಮಂಜಪ್ಪ, ಜೆ.ಬಿ.ಟಿ.ಬಾಬು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net