ಜಕ್ಕಲಮಡು ಪರಿಸರ ಸಂರಕ್ಷಣೆ ಕೋರಿ ಸಿಎಂಗೆ ಪತ್ರ

Vijayavani's top news of the day
Published on

ಬೆಂಗಳೂರು: ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಗಡಿಯಲ್ಲಿರುವ ಜಕ್ಕಮಡು ಜಲಾಶಯದ ಸುತ್ತಲಿನ ಗುಡ್ಡ ಹಾಗೂ ಗೋಮಾಳ ಜಾಗವನ್ನು ಖಾಸಗಿ ವ್ಯಕ್ತಿಗಳು ಕಬ್ಬ ಮಾಡಿಕೊಳ್ಳುವುದನ್ನು ತಡೆಯುವ ಸಂಬಂಧ, ಆ ಭಾಗದ ಪರಿಸರವನ್ನು ಸಂರಕ್ಷಿಸುವಂತೆ ಕೋರಿ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ವಿಜಯ್ ನಿಶಾಂತ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜಕ್ಕಲಮಡು ಸುತ್ತಲಿನ ಬೆಟ್ಟ ಗುಡ್ಡ ಪ್ರದೇಶವು ಜೀವವೈವಿಧ್ಯತೆಯ ತಾಣವಾಗಿದೆ. ಪರಿಸರ ದೃಷ್ಟಿಯಿಂದ, ಅಂತರ್ಜಲ ಮರುಪೂರಣ ಹಾಗೂ ಕೆರೆಗಳ ಜಾಲಕ್ಕೆ ನೀರಿನ ಸೆಲೆಯಾಗಿರುವ ಈ ಪ್ರದೇಶವು ಚಿರತೆ, ಕಾಡು ಹಂದಿ, ನವಿಲು ಸೇರಿದಂತೆ ಹಲವು ಮೃಗ, ಪಕ್ಷಿಗಳಿಗೆ ಆಸರೆಯಾಗಿದೆ. ಇಂತಹ ಮಹತ್ವದ ಜಾಗದಲ್ಲಿ ನೂರಾರು ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಗುಡ್ಡಗಳನ್ನು ಜೆಸಿಬಿ ಯಂತ್ರಗಳಿಂದ ಸಮತಟ್ಟುಗೊಳಿಸಿ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಿ ಜಲಾಶಯದ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡಬೇಕು. ತಪ್ಪಿದ್ದಲ್ಲಿ ಪ್ರಕೃತಿ ವಿಕೋಪದ ಜತೆಗೆ ಮಾನವ - ವನ್ಯಜೀವಿ ಸಂಘರ್ಷಕ್ಕೂ ದಾರಿ ಮಾಡಿಕೊಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸಮಸ್ಯೆ ಉದ್ಭವಿಸಿರುವ ಜಕ್ಕಲಮಡು ಪ್ರದೇಶದಲ್ಲಿ ಸರ್ಕಾರಿ ಗೋಮಾಳ ಹಾಗೂ ಅರಣ್ಯ ಭೂಮಿ ಪ್ರದೇಶದ ಸರ್ವೆ ನಡೆಸಬೇಕು, ಒತ್ತುವರಿ ತಡೆಗೆ ವಿಚಕ್ಷಣಾ ದಳ ನಿಯೋಜಿಸಬೇಕು, ಅಕ್ರಮ ಒತ್ತುವರಿದಾರರ ವಿರುದ್ಧ ಕಾನುನು ಕ್ರಮ ಕೈಗೊಳ್ಳಬೇಕು ಹಾಗೂ ಜಲಾಶಯದ ಅಚ್ಚುಕಟ್ಟು ಪ್ರದೇಶವನ್ನು ಸಂರಕ್ಷಿಸಬೇಕು ಎಂದು ವಿಜಯ್ ನಿಶಾಂತ್ ಅವರು ಸಿಎಂ ಅಲ್ಲದೆ ಡಿಸಿಎಂ, ಕಂದಾಯ ಹಾಗೂ ಅರಣ್ಯ ಸಚಿವರಿಗೂ ಪತ್ರವನ್ನು ರವಾನಿಸಿ ಮನವಿ ಮಾಡಿದ್ದಾರೆ.

ವಿಜಯವಾಣಿ ವರದಿ ಆಧರಿಸಿ ಪತ್ರ:

ಜಕ್ಕಲಮಡು ಭಾಗದಲ್ಲಿ ಸರ್ಕಾರಿ ಗೋಮಾಳ ಜಾಗವನ್ನು ಸ್ಥಳೀಯರಲ್ಲದವರು ಒತ್ತುವರಿ ಮಾಡಿ ನಕಲಿ ದಾಖಲೆ ಬಳಸಿ ನೋಂದಣಿ ಮಾಡಿಕೊಳ್ಳುತ್ತಿರುವ ಬಗ್ಗೆ ‘ವಿಜಯವಾಣಿ’ ಪತ್ರಿಕೆಯ ಜು.27ರ ಸಂಚಿಕೆಯಲ್ಲಿ ‘ಜಕ್ಕಲಮಡು ಡ್ಯಾಂ ಬಳಿ ಗೋಮಾಳ ಕಬ್ಜ’ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ ವಿಜಯ್ ನಿಶಾಂತ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net