ರಾಜ್ಯ ಸರ್ಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರಕ್ಕೆ ಪತ್ರ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಛಲವಾದಿ ನಾರಾಯಣಸ್ವಾಮಿ
Published on

ಬೆಂಗಳೂರು: ಹುಬ್ಬಳ್ಳಿ ಠಾಣೆಗೆ ದಾಳಿ ಮಾಡಿ, ದಾಂಧಲೆ ಎಬ್ಬಿಸಿದವರ ಮೇಲೆ ದಾಖಲಾಗಿದ್ದ ಕ್ರಿಮಿನಲ್ ದಾವೆ ಹಿಂಪಡೆದ ರಾಜ್ಯ ಸರ್ಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರದ ಕಾನೂನು ಸಚಿವರಿಗೆ ಇವತ್ತೇ ಪತ್ರ ಬರೆಯುವುದಾಗಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಶನಿವಾರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಈಚೆಗೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದವರು, ಕಲ್ಲು ತೂರಿದವರು, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಗಲಭೆ ಮಾಡಿದ 100-150 ಜನ ಕ್ರಿಮಿನಲ್‍ಗಳ ಮೇಲಿನ ಕೇಸುಗಳನ್ನು ಹಿಂಪಡೆದಿದೆ. ಈ ಮೂಲಕ ಒಂದು ಸಮುದಾಯವನ್ನು ಓಲೈಕೆ ಮಾಡಲು ತುಷ್ಟೀಕರಣ ರಾಜಕೀಯ ಮಾಡಿದೆ ಎಂದು ಖಂಡಿಸಿದರು.

ಹುಬ್ಬಳ್ಳಿಯಲ್ಲಿ ಆದುದು ಗಂಭೀರ ಅಪರಾಧ. ಅಂಥ ಪ್ರಕರಣ ಹಿಂಪಡೆಯುವ ನಿರ್ಧಾರದ ಸಂಬಂಧ  ರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರದ ಗೃಹ ಸಚಿವರ ಗಮನ ಸೆಳೆಯುತ್ತೇನೆ. ಅವರಿಗೂ ಪತ್ರ ಬರೆಯುವೆ ಎಂದು ತಿಳಿಸಿದರು.

ಸರ್ಕಾರದ ಅಪರಾಧ

ಇದು ಸರ್ಕಾರ ಮಾಡಿದ ಅಕ್ಷಮ್ಯ ಅಪರಾಧ. ಸಂಘಟಿತ ಅಪರಾಧ ಮಾಡಿದವರ ಕೇಸ್ ವಾಪಸ್ ಪಡೆಯುವ ಮೂಲಕ ಇನ್ನೊಂದು ಸಂಘಟಿತ ಅಪರಾಧವನ್ನು ರಾಜ್ಯದ ಸಚಿವಸಂಪುಟ ಮಾಡಿದೆ ಎಂದು ಟೀಕಿಸಿದರು. ಇದರ ಬಗ್ಗೆ ‘ತುಷ್ಟೀಕರಣ ರಾಜಕೀಯ’ ಎಂದು ಜನರ ಗಮನ ಸೆಳೆಯುತ್ತೇವೆ; ಕೇಸಿನ ವಾಪಸಾತಿಯ ಸಂಬಂಧ ಹೈಕೋರ್ಟಿನಲ್ಲಿ ಚಾಲೆಂಜ್ ಮಾಡಲಿದ್ದೇವೆ. ಟ್ರಯಲ್ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದ್ದು, ಅಲ್ಲಿ ಕೂಡ ನಮ್ಮ ಪಕ್ಷದಿಂದ ಆಕ್ಷೇಪ ಸಲ್ಲಿಸುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಹಾಗಿದ್ದರೆ ಹುಬ್ಬಳ್ಳಿ, ಮಂಗಳೂರು, ಉಡುಪಿ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಹಿಂದು ಕಾರ್ಯಕರ್ತರ ಮೇಲಿನ ಕೇಸ್‍ಗಳನ್ನು ಯಾಕೆ ವಾಪಸ್ ಪಡೆದಿಲ್ಲ?.  ಹಿಂದುಗಳು ಮಾತ್ರ ಕ್ರಿಮಿನಲ್‍ಗಳು, ಇವರು ಕ್ರಿಮಿನಲ್‍ಗಳಲ್ಲವೇ ?. ಸರ್ಕಾರದ ಉದ್ದೇಶ ಏನು? ಇದು ತುಷ್ಟೀಕರಣ ರಾಜಕೀಯವಲ್ಲವೇ? ಒಂದು ಸಮುದಾಯದ ಪರ ನಿಲ್ಲುವ ಸರಕಾರ ನಮಗೆ ಬೇಕೇ ಎಂದು ಕೇಳಿದರು.

ಸಿ.ಟಿ.ರವಿ ಅವರ ಕೇಸನ್ನೂ ವಾಪಸ್ ಪಡೆದುದಾಗಿ ಹೇಳಿದ್ದಾರೆ. ಅದೇನು ಕ್ರಿಮಿನಲ್ ಕೇಸಾ ಎಂದು ಪ್ರಶ್ನಿಸಿದರು. ಸಿ.ಟಿ.ರವಿ ಅವರು ಶಾಸಕ, ಹಿಂದೆ ಸಚಿವರಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಒಳ್ಳೆಯ ಹೆಸರು ಪಡೆದವರು. ಅವರೇನು ಕ್ರಿಮಿನಲ್ಲಾ? ಎಂದರು.

ಮುಡಾ ಹಗರಣ, ಎಸ್‍ಇಪಿ, ಟಿಎಸ್‍ಪಿ ಹಣ ದುರುಪಯೋಗ, ಕೆಕೆಆರ್‍ಡಿಪಿಯಲ್ಲಿ ಸಾವಿರಾರು ಕೋಟಿ ಹಣ ನುಂಗಿದ್ದು, ವಾಲ್ಮೀಕಿ ನಿಗಮದ ಹಣ ನುಂಗಿದ ಆಪಾದನೆಗಳಿಂದ ನುಣುಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರದ ಯೋಗ್ಯತೆ ಬಯಲು

ಕಾಂಗ್ರೆಸ್ ಸರ್ಕಾರ ಎಲ್ಲ ವಿಷಯಗಳಲ್ಲೂ ವಿಫಲವಾಗಿದೆ. ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ರೈತರು ಸಾಯುತ್ತಿರುವುದಾಗಿ ಹೇಳಿ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಬೆಳಗಾವಿ ಸದನ ನಡೆಯುವಾಗ ರಾಜೀನಾಮೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ನಿಮ್ಮ ಯೋಗ್ಯತೆ ಏನೆಂದು ಅವರು ಬಯಲು ಮಾಡಿದ್ದಾರೆ ಎಂದು ವಿವರಿಸಿದರು. ಈ ಸರ್ಕಾರ ಇನ್ನಷ್ಟು ದಿನ ಉಳಿಯಬೇಕೇ ಎಂದು ಕೇಳಿದ್ದಾಗಿ ಹೇಳಿದರು.

40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಇದೇರೀತಿಯ ಮನಸ್ಥಿತಿಯಲ್ಲಿ ಇದ್ದಾರೆ. ಇದೆಲ್ಲ ಬೆಳಗಾವಿ ಸದನದ ವೇಳೆಗೆ ಸ್ಫೋಟಗೊಂಡು, ಸರ್ಕಾರಕ್ಕೆ ಮೂರು ಕಾಸಿನ ಮರ್ಯಾದೆಯೂ ಉಳಿಯುವುದಿಲ್ಲ ಎಂದರು.

ಈ ಸರ್ಕಾರ ಹೋಗಲಿದೆ ಎಂದಿದ್ದೇನೆ; ಪಲ್ಲಟ ಆಗಲಿದೆ ಎಂದರೆ ನಮ್ಮ ಕಡೆ ಒಂದಷ್ಟು ಜನ ಬರುತ್ತಾರೆ, ನಾವು ಸರ್ಕಾರ ಮಾಡುತ್ತೇವೆ ಎಂದು ಅರ್ಥ ಮಾಡಿಕೊಳ್ಳಬೇಕಿಲ್ಲ. ನಾವು ಯಾವುದೇ ಕಾರಣಕ್ಕೂ ಚುನಾವಣೆ ಎದುರಿಸಲು ಸಿದ್ಧವೇ ಹೊರತು ಇವರನ್ನು ಸೇರಿಸಿಕೊಂಡು ಸರ್ಕಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರಿಗೆ ರಕ್ಷಣೆ

ಕೇಸು ದಾಖಲಾಗುತ್ತಿದ್ದಂತೆ ಬಿಜೆಪಿ ಶಾಸಕ ಮುನಿರತ್ನ ಬಂಧನ ವಾಯಿತು. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಬಂಧಿಸದೆ ಬಿಟ್ಟಿದ್ದಾರೆ. ಅವರ ಶಾಸಕರನ್ನು ರಕ್ಷಣೆ ಮಾಡುವಲ್ಲಿ ಈ ಸರ್ಕಾರ ನಿರತವಾಗಿದೆ ಎಂದು ದೂರಿದರು.

ನಮ್ಮ ಶಾಸಕರು ಮಾತ್ರ ತಪ್ಪಿತಸ್ಥರು; ಅವರೆಲ್ಲ ಹರಿಶ್ಚಂದ್ರರ ಮಕ್ಕಳು. ಅಷ್ಟು ಮಾತ್ರ ಯಾಕೆ? ಚನ್ನಾರೆಡ್ಡಿಯವರ ಮೇಲೆ ಎಫ್‍ಐಆರ್ ಆಗಿ ಮೂರು ತಿಂಗಳಾಗಿದೆ. ಜಾತಿ ನಿಂದನೆ ಕೇಸಿದ್ದರೂ ಅವರನ್ನು ಇವತ್ತಿಗೂ ರಕ್ಷಿಸುತ್ತಿದ್ದಾರೆ. ಕ್ಲೀನ್ ಚಿಟ್ ಪಡೆಯಲು ಎಸ್‍ಐಟಿ, ಸಿಐಡಿ ಬಳಸಿಕೊಳ್ಳುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net