ಡೆಂಘಿ ನಿಯಂತ್ರಿಸಲು ಆಮ್ ಆದ್ಮಿ ಪಾರ್ಟಿ ಸಿದ್ದರಾಮಯ್ಯನವರಿಗೆ ಪತ್ರ

MOHAN DASARI
Published on

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಘಿ ರೋಗ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ತಮ್ಮ ಕೆಲಸವನ್ನು ಸಮರ್ಥವಾಗಿ ನಿಭಾಯಿಸದೆ ಹಾಗೂ ಜನಸಾಮಾನ್ಯರಿಗೆ ಜಾಗೃತಿಯಿಂದಿರುವಂತೆ ಸಲಹೆ ನೀಡುತ್ತ ಕಾಲಹರಣ ಮಾಡುತ್ತಿದ್ದು, ದಿನದಿಂದ ದಿನಕ್ಕೆ ಡೆಂಘಿ ರೋಗಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವಂತೆ ಆಮ್ ಆದ್ಮಿ ಪಾರ್ಟಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ, ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಜೊತೆಗೆ ಜನರ ಹಿತದೃಷ್ಟಿಯಿಂದ 3 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಬಿಬಿಎಂಪಿ ಸೂಕ್ತ ಸಲಹೆ ನೀಡಿದರೆ ಜನರು ತಮ್ಮ ಮನೆಗಳಲ್ಲಿ ನಿಯಂತ್ರಣ ಮಾಡಬಹುದು ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಯಾರು ನಿಯಂತ್ರಿಸಬೇಕು? ಸಾರ್ವಜನಿಕ ಸ್ಥಳಗಳ ನೈರ್ಮಲ್ಯ ಕಾಪಾಡುವ ಕೆಲಸ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ್ದಾಗಿದೆ. ಡೆಂಘಿ ಉಲ್ಬಣದ ಹೊಣೆಯನ್ನು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಹೊರಬೇಕು ಎಂದು ಒತ್ತಾಯಿಸಿದ್ದಾರೆ.

ಡೆಂಘಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿಯ ಸಂಪೂರ್ಣ ವೆಚ್ಛವನ್ನು ಸರ್ಕಾರವೇ ಭರಿಸಬೇಕು. ಡೆಂಘಿ ರೋಗಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ತಲಾ ₹25 ಲಕ್ಷ ಪರಿಹಾರ ನೀಡಬೇಕು. ಡೆಂಘಿ ನಿರ್ವಹಣೆ ವೈಫಲ್ಯದ ಹೊಣೆಗಾರಿಕೆಯನ್ನು ಆಯಾ ವಲಯ ಜಂಟಿ ಆಯುಕ್ತರು ಹಾಗೂ ಅವರ ಅಧೀನದ ಅಧಿಕಾರಿಗಳನ್ನು ನೇರ ಹೊಣೆ ಮಾಡಿ ಕ್ರಿಮಿನಲ್ ಆರೋಪ ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net