ಸಮಾಜದಲ್ಲಿ ಸೌಹಾರ್ದ ಬಿತ್ತುವ ಕೆಲಸವಾಗಲಿ

ಸಮಾಜದಲ್ಲಿ ಸೌಹಾರ್ದ ಬಿತ್ತುವ ಕೆಲಸವಾಗಲಿ
Published on

ಹುಣಸೂರು: ಮನುಷ್ಯನ ಆಧುನಿಕ ಆಲೋಚನೆಗಳು ಸಮುದಾಯದಲ್ಲಿ ಸೌಹಾರ್ದ ಬಿತ್ತುವ, ಸನ್ಮಾರ್ಗ ತೋರಿಸುವ ನಂದಾದೀಪ ಆಗಬೇಕು ಎಂದು ಗಾವಡಗೆರೆ ಶ್ರೀಗುರುಲಿಂಗ ಜಂಗಮದೇವರ ಮಠದ ಶ್ರೀನಟರಾಜ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸುಮನ್ ಫಂಕ್ಷನ್ ಹಾಲಿನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್, ಸಂಘಟನೆ ವತಿಯಿಂದ ಗುರುವಾರ ಆಯೋಜಿಸಿದ್ದ ಈದ್ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈದ್ ಸ್ನೇಹ ಮಿಲನ ಮಹೋತ್ಸವ ಎಲ್ಲ ಸಮುದಾಯಗಳ ಪ್ರಮುಖರನ್ನು ಆಹ್ವಾನಿಸಿ ಮಾನವೀಯತೆ, ಪ್ರೀತಿ, ಸೌಹಾರ್ದತೆ ಹರಡಿ ಭಾರತೀಯ ಸಮುದಾಯ ಜಗತ್ತಿಗೆ ಮಾದರಿಯಾಗಬೇಕು ಎಂಬ ಆಶಯವನ್ನು ಹೊಂದಿದೆ. ಬಹಿರಂಗದ ಕುರಿತು ನಾವು ಚಿಂತಿಸುವ ರೀತಿಯಲ್ಲೇ, ನಮ್ಮ ಅಂತರಂಗದ ಕುರಿತು ಸಹ ಚಿಂತಿಸುವ ಪ್ರಯತ್ನ ಮಾಡಬೇಕಾಗಿದೆ. ನಮ್ಮ ಅಂತರಂಗವನ್ನು ಶುದ್ಧೀಕರಿಸಲು ಶ್ರಮಿಸಿದರೆ ಮಾತ್ರ ಸಮಾಜದ ಕಲ್ಯಾಣ ಸಾಧ್ಯ. ಆಧುನಿಕತೆ ಮನುಷ್ಯನಲ್ಲಿರಬೇಕಾದ ಮಾನವೀಯತೆಯನ್ನು ಮರೆಸುವಂತಾಗಬಾರದು. ನವ್ಯತೆ ನಮ್ಮ ಅನುಕೂಲಗಳನ್ನು ಸುಲಭಗೊಳಿಸಿದರೆ ಸಾಲದು, ಸಂಬಂಧಗಳನ್ನು ಗಟ್ಟಿಗೊಳಿಸುವಂತಿರಬೇಕು. ಆಗ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವೆಂದರು.

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮಾತನಾಡಿ, ಜಗದೊಡೆಯನು ನಮ್ಮನ್ನು ಕುಲಗಳಾಗಿ, ಗೋತ್ರಗಳಾಗಿ ಹಂಚಿರುವುದು ಕೇವಲ ನಮ್ಮ ಗುರುತಿಗೋಸ್ಕರ. ಇದೊಂದು ನೈಸರ್ಗಿಕ ಪದ್ಧತಿ. ಈ ವ್ಯವಸ್ಥೆಯು ಪರಸ್ಪರರನ್ನು ಅರಿಯುವ, ಪರಸ್ಪರೊಂದಿಗೆ ಪ್ರೀತಿ ಮಾಡುವ ಒಂದು ಮೂಲವಾಗಬೇಕೆ ಹೊರತು, ಹಗೆತನ, ಅಸೂಯೆ, ಮತ್ತು ದ್ವೇಷಕ್ಕೆ ಕಾರಣವಾಗಬಾರದು. ನಾವೆಲ್ಲರೂ ಮನುಜರು ಎಂಬ ಕಲ್ಪನೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಸೇಂಟ್ ಕ್ಸೇವಿಯರ್ ಚರ್ಚ್‌ನ ರೆವರೆಂಡ್ ಫಾದರ್ ಜಾರ್ಜ್ ಮಾರ್ಟಿಸ್ ಮಾತನಾಡಿ, ಈದ್ ಸ್ನೇಹ ಮಿಲನ ನಾವೆಲ್ಲರೂ ಆಚರಿಸುತ್ತಿರುವಂತೆ ಕ್ರಿಸ್ಮಸ್ ಹಬ್ಬ, ದೀಪಾವಳಿ ಹಬ್ಬ ಎಲ್ಲರೂ ಸೇರಿ ಆಚರಿಸುವ, ಭಾರತೀಯತೆ ಮೆರೆಯುವ ವಿಶ್ವದೆಲ್ಲೆಡೆ ಮಾನವೀಯತೆ ಬೆಳೆಸಿ ಬೆಸೆಯಬೇಕಿದೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್, ಮೈಸೂರು ವಲಯದ ಸಂಚಾಲಕ ಜನಾಬ್ ಅಬ್ದುಸ್ಸಲಾಂ ಉಪ್ಪಿನಂಗಡಿ ಪ್ರಾಸ್ತಾವಿಕ ನುಡಿಯನ್ನಾಡಿ, ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಹರಡಿಬಿಟ್ಟಿವೆ. ಇಂತಹ ಕಾರ್ಯಕ್ರಮಗಳು ಆ ಎಲ್ಲ ತಪ್ಪುಕಲ್ಪನೆಗಳ ನಿರ್ಮೂಲನೆಯ ಒಂದು ಭಾಗ ಎಂದರು.

ಕಾರ್ಯಕ್ರಮಗಳು ಜಮಾತೆ ಇಸ್ಲಾಮಿ ಹಿಂದ್ ಚಾಮರಾಜನಗರ ಜಿಲ್ಲಾವಲಯ ಅಧ್ಯಕ್ಷ ಜೈನುಲ್ ಆಬಿದೀನ್, ತಾಲೂಕು ಅಧ್ಯಕ್ಷ ಪಿ.ಎ.ಮುಸ್ತಫ ಪಿಎ, ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಶ್ರೀಹರಿ, ಅಜರುದ್ದೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net