

ಕೋಲಾರ: ಮಾಡುವ ತಪ್ಪುಗಳನ್ನು ಮುಚ್ಚಿ ಹಾಕಿಕೊಳ್ಳಲು ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವವರು ಆರ್ಎಸ್ಎಸ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಪತ್ರ ಬರೆದಿರುವುದು ಖಂಡನೀಯ. ಸಂಸ್ಥೆಯ ಇತಿಹಾಸ ತಿಳಿದು ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹೇಳಿದರು.
ನಗರದ ಡೂಂ ಲೈಟ್ ವೃತ್ತದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ "ಐ ಲವ್ ಆರ್ಎಸ್ಎಸ್' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚೀನಾ-ಭಾರತ ಯುದ್ಧ, ಪ್ರಾಕೃತಿಕ ಅವಘಡದಲ್ಲಿ ಆರ್ಎಸ್ಎಸ್ ಯಾವ ಕೆಲಸ ಮಾಡಿಕೊಂಡು ಬಂದಿದೆ ಎಂಬುದನ್ನು ಇತಿಹಾಸ ಓದಿ ಅರ್ಥಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ನಿಮ್ಮದೇ ಪಕ್ಷದಿಂದ ಪ್ರಧಾನಿಯಾಗಿದ್ದ ನೆಹರು ಅವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಆರ್ಎಸ್ಎಸ್ಗೆ ಅವಕಾಶ ನೀಡಿ ಗೌರವಿಸಿದ್ದ ಇತಿಹಾಸ ಪುಟಗಳಲ್ಲಿ ಉಳಿದಿದೆ. ಓದಿ ತಿಳಿದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪಾಕ್ಗೆ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ಬ್ಯಾನ್ ಮಾಡಿ, ಅದು ಬಿಟ್ಟು ಲಕ್ಷಾಂತರ, ಕೋಟ್ಯಾಂತರ ಕಾರ್ಯಕರ್ತರನ್ನು ಹುಟ್ಟು ಹಾಕಿರುವ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಸಾಕಾರವಾಡಿರುವ ಆರ್ಎಸ್ಎಸ್ ಅನ್ನು ನೀವು ಎಷ್ಟೇ ಜನ್ಮವೆತ್ತಿದರೂ ನಿಷೇಧ ಅಸಾಧ್ಯ ಎಂದು ಎಚ್ಚರಿಕೆ ನೀಡಿದರು.
ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಜೆ.ಪಿ.ನಡ್ಡಾ, ಅಮಿತ್ ಶಾ, ಯಡಿಯೂರಪ್ಪ ಸೇರಿ ಅನೇಕ ನಾಯಕರು ಆರ್ಎಸ್ಎಸ್ನಿಂದ ಬಂದವರು. ಇವರನ್ನು ನೋಡಿಯಾದರೂ ಆರ್ಎಸ್ಎಸ್ ಇತಿಹಾಸ ತಿಳಿಯಲಿಲ್ಲ ಎಂದು ಹೇಗೆ ಎಂದು ಪ್ರಶ್ನಿಸಿದರು.
ಅಂತಹ ಆರ್ಎಸ್ಎಸ್ಅನ್ನು ನಿಲ್ಲಿಸಿದರೆ ಅದು 10 ಪಟ್ಟು ಹೆಚ್ಚಾಗುತ್ತದೆ. ಮನೆ, ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೂ ಚಾಲನೆ ನೀಡುತ್ತಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.
ಇದೇ ವೇಳೆ ವಾಹನಗಳಿಗೆ ಐ ಲವ್ ಆರ್ ಎಸ್ ಎಸ್ ಸ್ಟಿಕ್ಕರ್ ಅಂಟಿಸಿ, ಘೋಷಣೆ ಕೂಗಲಾಯಿತು. ಅಭಿಯಾನದ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮುಖಂಡರಾದ ವಿಜಯ್ ಕುಮಾರ್, ಅಪ್ಪಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಬಾಲಾಜಿ, ಮಹೇಶ್, ಹಾರೋಹಳ್ಳಿ ವೆಂಕಟೇಶ್, ನಾಮಾಲ್ ಮಂಜು, ಸಾ.ಮಾ.ಬಾಬು, ಅರುಣಮ್ಮ, ರತ್ನಮ್ಮ, ಮಂಜುಳಾದೇವಿ, ವಿಜಯಲಕ್ಷಿ$್ಮ, ಮಂಜುನಾಥ್, ಸಾಮಾ ಪ್ರಸನ್ನ, ಸಾಯಿಮೌಳಿ ಇದ್ದರು.