ಹುಣಸೂರು: ನಗರದ ಬಾಚಳ್ಳಿ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದ ನಿವಾಸಿಗಳಾದ ನಮ್ಮ ಸಮುದಾಯವನ್ನು ಗುರುತಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತ ಕುಲಶಾಸ್ತ್ರ ಅಧ್ಯಯನ ನೆಡಸಲಿ ಎಂದು ನಿವಾಸಿಗಳಾದ ಕಣ್ಣಮ್ಮ, ವಸಂತಾ ಮುಂತಾದವರು ಒತ್ತಾಯಿಸಿದರು.
ನಾವು ಶಿಕ್ಷಣ ಆರಂಭಿಸಿದ ಒಂದನೇ ತರಗತಿಯಿಂದ ಜಾತಿ ಪ್ರಮಾಣ ಪತ್ರದಲ್ಲಿ ಜೇನುಕುರುಬ ಎಂದು ನಮೂದಿಸಿ ಸರ್ಕಾರ ನಮಗೆ ನೀಡಿದೆ. ಅದನ್ನೇ ಬಳಸಿಕೊಂಡು ನಾವು ಶಿಕ್ಷಣ ಪಡೆದಿದ್ದೇವೆ. ಸರ್ಕಾರ ಜೇನುಕುರುಬ ಸಮಾಜಕ್ಕೆ ನೀಡುವ ಯಾವೊಂದು ಸೌಲಭ್ಯವೂ ನಮಗೆ ಸಿಗುತ್ತಿಲ್ಲ. ಕಾರಣ ಕೆಲ ಮುಖಂಡರು ನಮ್ಮನ್ನು ಆದಿವಾಸಿ ಜೇನುಕುರುಬ ಸಮುದಾಯಕ್ಕೆ ಸೇರಿಲ್ಲವಂದು ತಿಳಿಸಿ ತಾಲುಕು ಮತ್ತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.
ಎರಡು ತಲೆಮಾರುಗಳಿಂದ ತಾಲೂಕಿನ ಅಂಬೇಡ್ಕರ್ ನಗರ, ಬನ್ನಿಕುಪ್ಪೆ, ತೊಂಡಾಳು ಮತ್ತು ಕಟ್ಟೆಮಳಲವಾಡಿ ಕಾಲನಿಗಳಲ್ಲಿ ಜೀವನ ನಡೆಸಿದ್ದೇವೆ. ಜೇನು ಕೃಷಿ ಬಲ್ಲೆವು. ಹೀಗಿದ್ದೂ ನಮ್ಮನ್ನು ಜೇನುಕುರುಬರಲ್ಲ ಎಂದು ಆಪಾದಿಸುತ್ತಿದ್ದಾರೆ. ನಮಗೆ ಬೇತಲ್ ಸಂಸ್ಥೆಯವರು ಮನೆ ನಿರ್ಮಿಸಿಕೊಟ್ಟಿದ್ದಾರೆ. ದಲಿತ ಮುಖಂಡ ನಿಂಗರಾಜ ಮಲ್ಲಾಡಿ 94 ಸಿಸಿ ಅಡಿ ಹಕ್ಕುಪತ್ರ ದೊರಕಿಸಿಕೊಟ್ಟಿದ್ದಾರೆ. ಇದನ್ನು ಹೊರತುಪಡಿಸಿ ನಮಗೆ ಇನ್ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಜೇನುಕುರುಬ ಸಮಾಜಕ್ಕೆ ನೀಡುವ ಪೌಷ್ಟಿಕ ಆಹಾರ ದೊರಕುತ್ತಿಲ್ಲವೆಂದು ಅಲವತ್ತುಕೊಂಡರು.
ಕುಲಶಾಸ್ತ್ರ ಅಧ್ಯಯನ ನಡೆಸಲಿ: ಮುಂದಿನ ದಿನಗಳಲ್ಲಿ ಈ ಗೊಂದಲ ಹೀಗೆ ಮುಂದುವರಿದರೆ ನಮ್ಮ ಮಕ್ಕಳಿಗೆ ಇನ್ನಷ್ಟು ತೊಂದರೆಗಳಾಗುವ ಸಾಧ್ಯತೆಯಿದ್ದು, ಜಿಲ್ಲಾಡಳಿತ ನಮ್ಮ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿ. ವರದಿಯಲ್ಲಿ ಬಂದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಅಧಿಕಾರಿಗಳು ನಮ್ಮ ಕಾಲನಿಗೆ ಬಂದು ಅಧ್ಯಯನ ಕೈಗೊಳ್ಳಲಿ ಎಂದು ಕಣ್ಣಮ್ಮ ಮತ್ತು ವಸಂತಾ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುತ್ತುರಾಜ್, ಮೂರ್ತಿ ತೊಂಡಾಳು ಇದ್ದರು.