ಕನ್ನಡದ ವೈಭವವನ್ನು ಮತ್ತಷ್ಟು ವಿಸ್ತರಿಸೋಣ

Ravishankar Guruji
Published on

ಪ್ರತಿಯೊಂದು ಭಾಷೆಯೂ ತನ್ನದೇ ಆದ ವಿಲಕ್ಷಣವಾದ ಗುಣವನ್ನು, ಶಕ್ತಿಯನ್ನು ಹೊಂದಿರುತ್ತದೆ. ಆದರೆ ಸ್ವಲ್ಪ ಆಳವಾಗಿ ಇಳಿದು ನೋಡಿದಾಗ, ಎಲ್ಲಾ ಭಾಷೆಯೂ ಎಲ್ಲೋ ಒಂದು ಕಡೆ ಸೇರುತ್ತದೆ. ಆದರೆ ಭಾಷೆಗಳೆಲ್ಲವನ್ನೂ ಮೀರಿರುವಂತದ್ದು ಚೈತನ್ಯಶಕ್ತಿ. ನಮ್ಮ ಸುಪ್ತ ಚೇತನದಲ್ಲಿ ಮಾತೃಭಾಷೆ

ಅಂಕಿತವಾಗಿರುತ್ತದೆ. ನಾವು ಎಲ್ಲಿ ಹೋದರೂ, ಯಾವುದೇ ದೇಶಕ್ಕೆ ಹೋದರೂ, ಯಾವುದೇ ಭಾಷೆಯನ್ನು ಮಾತನಾಡುತ್ತಿದ್ದರೂ, ಲೆಕ್ಕ ಮಾಡಬೇಕಿದ್ದರೆ, ಎಣಿಸಬೇಕಿದ್ದರೆ, ಕನ್ನಡದಲ್ಲೇ ಎಣಿಸುತ್ತೇವೆ. ಆಗ ಸಂಖ್ಯೆಗಳೆಲ್ಲವೂ ಕನ್ನಡದಲ್ಲೇ ಬರುತ್ತವೆ. ಆಂಗ್ಲದಲ್ಲಿ ಬರುವುದಿಲ್ಲ, ಒಂದು, ಎರಡು, ಮೂರು ಹೀಗೆೆ. ಆದ್ದರಿಂದ ನಮ್ಮ ಮಾತೃಭಾಷೆ ನಮ್ಮ ಅಂತರಾಳದಲ್ಲಿ ಒಂದು ರೀತಿಯಲ್ಲಿ ಅಚ್ಚಾಗಿ ಉಳಿಯುತ್ತದೆ. ಮಕ್ಕಳು ಮಾತೃಭಾಷೆಯಲ್ಲಿ ಕಲಿಯುವುದರಿಂದ ಹೆಚ್ಚು ಚುರುಕಾಗುತ್ತಾರೆ. ಕನ್ನಡ ಮಾಧ್ಯಮದ ಶಾಲೆಯಲ್ಲಿಯೇ ನಾವು ಓದಿದ್ದು. ಕನ್ನಡ ಭಾಷೆಯಲ್ಲಿ ಶಾಲೆಯನ್ನು ಮುಗಿಸಿದವರು ಜೀವನದಲ್ಲಿ ಮೇಲೆ ಬರುವುದಿಲ್ಲ ಎಂಬ ಅಭಿಪ್ರಾಯ ನಮ್ಮಲ್ಲಿದೆ. ಆದರೆ ಅದು ತಪ್ಪು. ನಮ್ಮ ಕನ್ನಡ ಭಾಷೆ, ಸಮೃದ್ಧವಾದದ್ದು. ಅದರಲ್ಲಿ ಬಹಳ ಸತ್ವವಿದೆ. ಶಬ್ದಗಳು ಮತ್ತು ಅದರ ಅರ್ಥ ಬಹಳ ಹೊಂದಿಕೊಂಡಿವೆ. ಆದ್ದರಿಂದ, ನಾಡು, ನುಡಿ, ನೆಲ, ಜಲವನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಾವು ಕನ್ನಡದವರು ಉದಾರಿಗಳು, ವಿಶಾಲ ಮನೋಭಾವನೆ ಹೊಂದಿರುವವರು. ಇತರ ಭಾಷೆಗಳೆಲ್ಲವನ್ನೂ ಬೇಗನೆ ಕಲಿತು ಬಿಡುತ್ತೇವೆ. ಆದರೆ ನಮ್ಮ ಭಾಷೆಯನ್ನು ನೆರೆಹೊರೆಯವರಿಗೆ ಕಲಿಸುವ ಗೋಜಿಗೇ ಹೋಗುವುದಿಲ್ಲ. ಕಲಿಸಬೇಕು.

ಕನ್ನಡದಲ್ಲಿನ ದಾಸ ಸಾಹಿತ್ಯ, ವಚನಗಳು ಬಹಳ ಅರ್ಥಗರ್ಭಿತ ವಾಗಿವೆ. ಇದರ ಪ್ರಚಾರ, ಪ್ರಸಾರ ಹೆಚ್ಚಾಗಬೇಕು. ಪಠ್ಯಕ್ರಮದಲ್ಲಿ ಇವೆಲ್ಲವೂ ಮತ್ತೆ ಹೆಚ್ಚಾಗಬೇಕು. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂದು ಮಕ್ಕಳಾಗಿದ್ದಾಗಲೇ ನಾವೆಲ್ಲರೂ ಕೇಳಿ ಬೆಳೆದೆವು. ಚಿಕ್ಕ ಮಕ್ಕಳಿದ್ದಾಗಲೇ ಎಲ್ಲವೂ ಬಾಯಿಪಾಠವಾಗಿತ್ತು. ಕನ್ನಡ ಚಲನಚಿತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆಯುವುದರಿಂದಲೂ ಕನ್ನಡ ಭಾಷೆ ಹೆಚ್ಚು ಪ್ರಚಲಿತವಾಗುತ್ತದೆ. ಕನ್ನಡ ಭಾಷೆಯ ಮೇಲಿನ ಸ್ವಾಭಿಮಾನ ಬಹಳ ಮಹತ್ವವಾದವು. ಶ್ರೀಲಂಕಾದವರು ಐಸ್ಕ್ರೀಮ್ ಅನ್ನು ‘ಕುಳಿರ್ ಕಳಿ’ ಎಂದು ತಮ್ಮದೇ ಆದ ಪದವನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಪಂಚದಲ್ಲಿ ಎಲ್ಲೇ ಹೋದರೂ ಶ್ರೀಲಂಕಾದ ತಮಿಳರು ತಮ್ಮ ಭಾಷೆಯ ಮೇಲೆ ಬಹಳ ಅಭಿಮಾನದಿಂದ ಹೊಂದಿದ್ದಾರೆ. ಕನ್ನಡಿಗರೂ ಅದೇ ರೀತಿಯಾದ ಅಭಿಮಾನವನ್ನು ಹೊಂದಬೇಕು.

ಕನ್ನಡ ರಾಜ್ಯೋತ್ವವನ್ನು ಆಚರಿಸಬೇಕೆಂದರೆ ನಮ್ಮ ಯುವಕರು ನಮ್ಮ ಭಾಷೆಯನ್ನು ಸನ್ಮಾನಿಸಬೇಕು. ಕನ್ನಡದಲ್ಲೇ ಮಾತನಾಡಬೇಕು. ನಮ್ಮ ಆಹಾರ ಪದ್ಧತಿಗಳನ್ನು ಎತ್ತಿ ಹಿಡಿಯಬೇಕು. ನಮ್ಮ ಹೋಳಿಗೆ, ಒಬ್ಬಟ್ಟು, ಆಂಬೊಡೆ ಇವೆಲ್ಲವೂ ಬೇರೆ ಎಲ್ಲಿ ಸಿಗುತ್ತದೇ? ನಮ್ಮ ಬಿಸಿಬೇಳೆಬಾತು ಎಷ್ಟು ರುಚಿರುಚಿಯಾಗಿರುತ್ತದೆ! ಗೊಜ್ಜವಲಕ್ಕಿ, ರಾಗಿಮುದ್ದೆ ಇದೆಲ್ಲವನ್ನೂ ಎಲ್ಲರೂ ತಿನ್ನುವಂತೆ ಪೋ›ತ್ಸಾಹಿಸಬೇಕು. ಈಗ ಹೇಗಾಗಿದೆ ಎಂದರೆ, ಮುದ್ದೆ ತಿನ್ನುತ್ತಾರೆ ಎಂದರೆ ಅಂತಹವರು ಹಿಂದುಳಿದವರು ಎಂಬಂತೆ ನೋಡುತ್ತಾರೆ. ನಗರದ ಯುವಕರು ಈ ರೀತಿಯಾಗಿ ಭಾವಿಸಬಾರದು. ನಮ್ಮ ಆಹಾರದ ಬಗ್ಗೆ ಅಭಿಮಾನ ಇರಬೇಕು. ನಮ್ಮ ರಾಜ್ಯದಲ್ಲಿ ಸ್ವಚ್ಛತೆ ಯನ್ನು ಕಾಯ್ದುಕೊಂಡುಬರಬೇಕು, ಪ್ರಸನ್ನತೆಯಿರಬೇಕು, ಸಮಾಜದ ಎಲ್ಲೆಡೆ ಹಿಂಸಾ ವಿಹೀನವಾಗಿರಬೇಕು, ಹಿಂಸೆಯು ಇರಬಾರದು.

75ರ ದಶಕದಲ್ಲಿ ಬೆಂಗಳೂರು - ಮೈಸೂರಿನಲ್ಲಿ ಕಳ್ಳತನವೇ ಇರುತ್ತಿರಲಿಲ್ಲ. ರಾಮರಾಜ್ಯದಂತೆಯೇ ಇರುತ್ತಿತ್ತು. ಏನಾದರೊಂದು ಸಾಮಾನನ್ನು ಮರೆತು ಬಂದಿದ್ದರೆ, ಮತ್ತೆ ಹೋಗಿ ಆ ಸಾಮಾನನ್ನು ತರಬಹುದಿತ್ತು. ಅವು ಅಲ್ಲೇ ಇರುತ್ತಿದ್ದವು. ದಸರೆಯ ಸಮಯದಲ್ಲಿ ಜನರು ಅವರ ಮನೆಗಳ ಬಾಗಿಲುಗಳನ್ನು ತೆರೆದು, ಮನೆಯ ಅಂಗಳದಲ್ಲಿ ಹಾಸಿಗೆಯನ್ನು ಹಾಸಿ ಇಡುತ್ತಿದ್ದರು. ಯಾರು ಬೇಕಾದರೂ ಹೋಗಿ ಅಲ್ಲಿ ತಂಗಿಕೊಳ್ಳಬಹುದಿತ್ತು. ಆಗ ಹೋಟೆಲ್​ಗಳು, ಅತಿಥಿಗೃಹಗಳು ಇರುತ್ತಿರಲಿಲ್ಲ. ಒಂದೇ ಹೋಟೆಲ್ ಇತ್ತು. ಪ್ರತಿಯೊಬ್ಬರ ಮನೆಯೂ ಅತಿಥಿಗೃಹವಾಗಿತ್ತು. ದಸರೆಯ ಸಮಯದಲ್ಲಿ ಮನೆಯವರೆಲ್ಲರೂ ಸೇರಿ 50-60 ಜನ ಬಂದರೂ ಅಡುಗೆ ಮಾಡುತ್ತಿದ್ದರು. ಪರಿಚಯವೇ ಇಲ್ಲದವರು ಅತಿಥಿಗಳಾಗಿ ಬಂದು ಊಟ ಮಾಡಿ ಮನೆಗಳಲ್ಲಿ ಉಳಿದು ಕೊಳ್ಳುತ್ತಿದ್ದರು. ಇಷ್ಟು ಸುಭಿಕ್ಷವಾಗಿದ್ದಂತಹ ನಾಡಿನಲ್ಲಿ ನಾವು ಮತ್ತೆ ಶಾಂತಿಯನ್ನು ತರಬೇಕು, ಸಾಮರಸ್ಯ ನೆಲೆಸುವಂತೆ ಮಾಡಬೇಕು. ಕನ್ನಡ ರಾಜ್ಯೋತ್ಸವದ ಈ ಒಂದು ತಿಂಗಳು ಮದ್ಯಪಾನವನ್ನು ನಿಲ್ಲಿಸಬೇಕು. ಯುವಕರು ಎಲ್ಲಾ ಸೇರಿ ಉತ್ಸವ ಮಾಡಿ, ಆದರೆ ಮದ್ಯದ ವ್ಯಸನದಿಂದ ದೂರವಿರಿ. ಎರಡನೆಯದಾಗಿ ಎಲ್ಲಾ ರೀತಿಯ ಚಟಗಳನ್ನು, ಬೀಡಿ, ಸಿಗರೇಟುಗಳನ್ನು ಒಂದು ತಿಂಗಳು ಬಿಡಿ. ಸಸ್ಯಾಹಾರಿಗಳಾಗಿರಲು ಸ್ವಲ್ಪ ಯತ್ನಿಸಿ. ಇಷ್ಟನ್ನು ಖಂಡಿತವಾಗಿ ಮಾಡಿ.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net