

ಇಂದು ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ 128ನೇ ಜನ್ಮದಿನ. ಅಂಬಿಕಾತನಯದತ್ತ ಅವರು ಕನ್ನಡ ಸಾಹಿತ್ಯ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲ್ಲೊಬ್ಬರು. ವರಕವಿ, ಶಬ್ದಗಾರುಡಿಗ, ದಾರ್ಶನಿಕ ಹೀಗೆ ಹಲವು ನಾಮಗಳಿಂದ ಕರೆಯಲ್ಪಡುವ ದ.ರಾ. ಬೇಂದ್ರೆ ಧಾರವಾಡಿಗರಿಗೆ ಮಾತ್ರ ಸದಾ ಪ್ರೀತಿಯ ‘ಬೇಂದ್ರೆ ಅಜ್ಜ’ನಾಗಿ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಒಡನಾಡಿಗಳು ಬೇಂದ್ರೆಯವರ ಜೀವನವನ್ನು ಮೆಲುಕು ಹಾಕಿರುವುದು ಹೀಗೆ.
ಧಾರವಾಡದ ಕಾಮನಕಟ್ಟಿ, ದತ್ತಾತ್ತೇಯ ಗುಡಿ, ಧಾರವಾಡದ ತಾಯಿ-ದುರ್ಗಾಮಾತೆ, ಹಾಲಗೇರಿ, ಎಮ್ಮೀಕೇರಿ, ಸಾಧನಕೇರಿ, ಮುಗದ ಅವರು ಸುಳಿದಾಡಿ ಬಿಟ್ಟುಹೋದ ನೆನಪುಗಳಾಗಿ ಈಗಲೂ ಧಾರವಾಡದ ಜನರಿಗೆ ಕಾಡುತ್ತವೆ. ಬೇಂದ್ರೆ ಕಾವ್ಯ ಬಾಹ್ಯದಲ್ಲಿ ಸರಳ ಅರ್ಥವನ್ನು ನೀಡಿದರೆ ಅಂತರಂಗದಲ್ಲಿ ವೇದಾಂತಿಕ ಅರ್ಥವನ್ನು ಹುದುಗಿಸಿಟ್ಟುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕವಿ ರೂಪಕಗಳ ಮೂಲಕ ಕಾವ್ಯವನ್ನು ಕಟ್ಟಿರುವುದು. ಉದಾ: ‘ಬಿದಿಗೆ ಚಂದ್ರನ ಹೆಣಾ ಬಂತು ಮುಗಿಲಾಗ ತೇಲತ ಹಗಲ’ ಇತ್ಯಾದಿ ನೋಡಬಹುದು.
ಬೇಂದ್ರೆ ಕೇವಲ ಒಬ್ಬ ಕವಿಯಾಗಿರಲಿಲ್ಲ, ಅವರೊಬ್ಬ ಮನೋವಿಜ್ಞಾನಿಯೂ ಆಗಿದ್ದರು. ದೇಹ ಮತ್ತು ಮನಸುಗಳ ನಡುವೆ ಸಂವಾದವಾಗಿಸುವ ಕವಿ, ತಮ್ಮ ಕೂಸು ಮಂಗಳಾ ತೀರಿಕೊಂಡಾಗ ‘ನೀ ಹೀಂಗ ನೋಡಬ್ಯಾಡ ನನ್ನ’ ಪದ್ಯದಲ್ಲಿ ‘ಅತ್ತಾರ ಅತ್ತುಬಿಡು.. ತುಟಿ ಕಚ್ಚಿ ಹಿಡಿಯದಿರು ದುಃಖ’ ಎನ್ನುವ ಮೂಲಕ ಅತ್ತು ಹಗುರಾಗುವುದು, ದುಖದಿಂದ ಹೊರಬರುವ ಮಾರ್ಗ ಎಂಬುದನ್ನು ತಿಳಿಸುತ್ತಾರೆ. ಸಖಿಗೀತದ ಮೂಲಕ ದಾಂಪತ್ಯದ ಹೊನಲು ಹರಿಸಿದ ಕವಿ ನಾಕುತಂತಿಯಲ್ಲಿ ಋಷಿಸದೃಷ ಅನುಭೂತಿಯ ಪರಿಚಯ ಮಾಡಿಸುತ್ತಾರೆ. ಅತಂತ್ರ, ಅನಿಶ್ಚಿತ ಬದುಕಿಗೆ ನೆಲೆಗಾಣದೆ ಊರೂರು ಅಲೆದು ಅನುಭಾವಿ ಸಂತನಾಗಿ ಬೆಳೆದವರು.
ಹುಸಿನಗುತ ಬಂದೇವ ನಸುನಗುತ ಬಾಳೋಣ ತುಸುನಗುತ ತೆರಳೋಣ ಬಡನೂರು ವರುಷಾನ ಹರುಷದಿ ಕಳೆಯೋಣ ಯಾಕಾರ ಕೆರಳೋಣ ಎನ್ನುವ ಕವಿ, ಬದುಕಿನಲ್ಲಿ ದುಃಖ, ನೋವು, ನಿರಾಶೆ ತರುವ ಘಟನೆಗಳನ್ನೇ ಕಾವ್ಯವಾಗಿಸಿಯೇ ಬದುಕಿದವರು.
| ಡಾ. ಮಲ್ಲಿಕಾರ್ಜುನ ಗುಮ್ಮಗೋಳ ಸಾಹಿತಿ
| ಡಾ. ಶ್ಯಾಮಸುಂದರ ಬಿದರಕುಂದಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನ ಮಾಜಿ ಅಧ್ಯಕ್ಷರು
| ಅನಂತ ದೇಶಪಾಂಡೆ ರಂಗಭೂಮಿ ಕಲಾವಿದರು
| ಸುರೇಶ ಕುಲಕರ್ಣಿ ಖ್ಯಾತ ಕಲಾವಿದರು
ವಿಶಿಷ್ಟ ಪ್ರಯತ್ನ: ರಂಗಭೂಮಿ ಕಲಾವಿದ ಅನಂತ ದೇಶಪಾಂಡೆ ಅವರು ಬೇಂದ್ರೆ ಅವರ 100ನೇ ಜನ್ಮದಿನದ ಸಮಾರಂಭದಲ್ಲಿ ಬೇಂದ್ರೆಯವರಂತೆ ವೇಷ ಧರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿ ಗಮನ ಸೆಳೆದಿದ್ದರು. ಅಂದಿನಿಂದ ಬೇಂದ್ರೆಯವರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಲ್ಲದೆ, ಅವರ ಜೀವನವನ್ನು ಯುವಪೀಳಿಗೆಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ದೇಶಪಾಂಡೆಯವರ ಕಾರ್ಯ ಗುರುತಿಸಿರುವ ಅಂಬಿಕಾತನಯದತ್ತ ವೇದಿಕೆಯು 2023-24ನೇ ಸಾಲಿನ ಬೇಂದ್ರೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.