ಒಂದು ಕೊನೆಯ ಪ್ರಯತ್ನ ನಮ್ಮದಾಗಲಿ...

-684dac8a7efb7
Published on
ಬದುಕು ನದಿಯಂತೆ ನಿರಂತರ ಚಲನಶೀಲವಾದುದು. ಅದೆಷ್ಟೇ ಒಡ್ಡು, ಅಣೆಕಟ್ಟು ಮುಂತಾದ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿ ನದಿ ಹರಿಯುತ್ತಲೇ, ಕೊನೆಗೆ ಸಮುದ್ರವನ್ನು ಸೇರುತ್ತದೆ. ನಮ್ಮ ಬದುಕು ಕೂಡ ಹಾಗೆಯೇ ನಿರಂತರವಾಗಿ ಮುನ್ನಡೆಯುತ್ತಲೇ ಇರುತ್ತದೆ. ಬದುಕಿನ ಪಯಣದಲ್ಲಿ ಅದೆಷ್ಟೋ ಅಡ್ಡಿ-ಆತಂಕ, ಕಷ್ಟ-ಸುಖ, ನೋವು-ನಲಿವು ಬಂದರೂ ಅವನ್ನೆಲ್ಲ ಸಂಭಾಳಿಸಿಕೊಂಡು ಹೋಗಬೇಕಾಗುತ್ತದೆ. ಬದುಕು ಎಂದ ಮೇಲೆ ಕಷ್ಟ ತಪ್ಪಿದ್ದಲ್ಲ.

ಸಿಹಿ-ಕಹಿಗಳ ಹೂರಣ ಎಂಬಂತೆ ಸುಖ, ಸಂತೋಷಗಳು ಬರುವ ರೀತಿಯಲ್ಲೇ ಒಂದಲ್ಲ ಒಂದು ಕಷ್ಟ, ನಷ್ಟಗಳೂ ಬರುತ್ತಿರುತ್ತವೆ. ಅವುಗಳಲ್ಲಿ ಕೆಲವು ತನ್ನಿಂದ ತಾನೇ ನಿವಾರಣೆಗೊಂಡರೆ, ಮತ್ತೆ ಕೆಲವು ನಮ್ಮ ಸ್ವ ಪ್ರಯತ್ನ, ಕಠಿಣ ಪರಿಶ್ರಮದಿಂದ ಬಗೆಹರಿಸಲ್ಪಡುವಂಥದ್ದು. ಯಾವುದೇ ಸಮಸ್ಯೆಗಳು ಬಗೆಹರಿಯಬೇಕಾದರೆ ಅದಕ್ಕೆ ಪೂರಕವಾದ ಪ್ರಯತ್ನ, ಸಾಧನೆ ಬೇಕಾಗುತ್ತದೆ. ಇಲ್ಲವಾದರೆ ಕಾಲಾನಂತರದಲ್ಲಿ ತನ್ನಿಂದ ತಾನೇ ಸಮಸ್ಯೆಗಳು ಪರಿಹಾರವಾಗಲೂಬಹುದು. ಪರಿಹಾರವಾಗದೆಯೂ ಇರಬಹುದು.

ಅನೇಕ ಬಾರಿ ಸಾಕಷ್ಟು ಪ್ರಯತ್ನ ಮಾಡಿದರೂ ಅಂದುಕೊಂಡ ಕೆಲಸ ಆಗದೇ ಇದ್ದಾಗ ಕೊನೆಗೆ ಇದಾಗುವ ಕೆಲಸವಲ್ಲ ಎಂದು ಕೈ ಚೆಲ್ಲಿ ಬಿಡುವುದುಂಟು. ಉದ್ಯೋಗ ಅರಸುವಿಕೆ, ಮನೆ ಕಟ್ಟುವುದು, ವಧು-ವರಾನ್ವೇಷಣೆ, ಹೊಸ ಉದ್ಯಮ ಪ್ರಾರಂಭ ಇಂತಹವುಗಳನ್ನೆಲ್ಲ ಕೈಗೊಳ್ಳುವಾಗ ಆರಂಭದಲ್ಲಿರುವ ಉತ್ಸಾಹ, ಹುರುಪು ಬರ ಬರುತ್ತ ಕಡಿಮೆಯಾಗುತ್ತದೆ. ಅದಕ್ಕೆ ತಕ್ಕನಾಗಿ ಆತ್ಮೀಯರೋ, ಬಂಧುಗಳೋ ನಕಾರಾತ್ಮಕವಾಗಿ, ‘ನಿನಗೆ ಯಾರು ಹೆಣ್ಣು ಕೊಡುತ್ತಾರೆ ಮಾರಾಯಾ’, ‘ನಿನಗೆ ಯಾಕೆ ಈ ಹೊಸ ವ್ಯಾಪಾರ ಮಾಡುವ ಉಸಾಬರಿ’, ‘ನಿನ್ನ ಕೈಯಲ್ಲಿ ಆಗದು, ಸುಮ್ಮನೆ ಇದ್ದ ಹಣವನ್ನೂ ಹಾಳು ಮಾಡಬೇಡ’ ಎಂದೆಲ್ಲ ಮಾತನಾಡಿದರಂತೂ ಧೈರ್ಯ ಮತ್ತಷ್ಟು ಕುಗ್ಗಿ ಹೋಗಿ ಅಯ್ಯೋ ಇದರ ಉಸಾಬರಿ ಬೇಡವೆಂಬ ಭಾವನೆ ಮೂಡುತ್ತದೆ. ಆದರೆ ಇನ್ನು ಕೆಲವರು ಸತತ ಪ್ರಯತ್ನ, ಶ್ರಮ ವಹಿಸಿ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಅದು ಅವರ ಶ್ರಮ, ಕಾರ್ಯದಲ್ಲಿನ ಬದ್ಧತೆಗೆ ದೊರಕಿದ ಪ್ರತಿಫಲವೂ ಆಗಿರಬಹುದು, ಜೊತೆಗೆ ಅದೃಷ್ಟವೂ ಇದ್ದಿರಬಹುದು. ಆದರೆ ಎಂದಿಗೂ ಅದೃಷ್ಟವನ್ನು ಬಯಸಿ ಕೂರುವುದು ಖಂಡಿತ ತಪ್ಪು. ಯಾಕೆಂದರೆ ಅದೃಷ್ಟ ಯಾವಾಗ ಬೇಕಾದರೂ ಕೈ ಕೊಡಬಹುದು, ಶ್ರಮ ಎಂದಿಗೂ ಕೈ ಕೊಡದು.

ಒಬ್ಬಾತ ದೊಡ್ಡ ಬಂಡೆಯನ್ನು ಒಡೆಯಲು ಅನೇಕ ದಿನಗಳಿಂದ ನಿರಂತವಾಗಿ ಸುತ್ತಿಗೆಯಿಂದ ಬಡಿಯುತ್ತಲೇ ಇದ್ದ. ಅದೆಷ್ಟೇ ಸುತ್ತಿಗೆಯ ಪೆಟ್ಟು ತಿಂದರೂ ಬಂಡೆ ಒಡೆಯಲೇ ಇಲ್ಲ. ಇದೇನಪ್ಪಾ ಇಷ್ಟು ದಿನಗಳಾದರೂ ಬಂಡೆ ಒಡೆಯಲಿಲ್ಲವಲ್ಲ ಎಂದು ಆತ ನಿರಾಶನಾಗಿ ಕೂತಿದ್ದ. ಆಗ ದಾರಿಯಲ್ಲಿ ಹಾದು ಹೋಗುತ್ತಿದ್ದ ಆತನ ಗೆಳೆಯ ಬಳಿ ಬಂದ. ‘ಇದೇನು ಹೀಗೆ ಮಂಕಾಗಿ ಕೂತಿದ್ದಿ?’ ಎಂದು ಕೇಳಿದ. ಆಗ ಕಲ್ಲು ಒಡೆಯುವವ ‘ಸುಮಾರು ದಿನಗಳಿಂದ ಬಂಡೆಯನ್ನು ಒಡೆಯಲು ನೋಡುತ್ತಿದ್ದೇನೆ. ಒಡೆದೇ ಹೋಗುತ್ತಿಲ್ಲ’ ಎಂದ. ‘ಸುತ್ತಿಗೆಯನ್ನು ಇಲ್ಲಿ ಕೊಡು ನಾನೊಮ್ಮೆ ಪ್ರಯತ್ನಿಸಿ ನೋಡುತ್ತೇನೆ’ ಎಂದು ಹೇಳಿದ. ಸುತ್ತಿಗೆಯನ್ನು ತೆಗೆದುಕೊಂಡು ಹತ್ತು-ಹದಿನೈದು ಸಲ ಹೊಡೆದಿದ್ದಾನಷ್ಟೇ ಬಂಡೆ ಒಡೆದು ಚೂರಾಯಿತು. ಆಗ ಆತನು ‘ನೋಡು ನಾನು ಹೇಗೆ ಬಂಡೆಯನ್ನು ಕೆಲವೇ ಏಟುಗಳಲ್ಲಿ ಪುಡಿ ಮಾಡಿದೆ. ಅಷ್ಟು ದಿನಗಳಿಂದ ಸುತ್ತಿಗೆಯಿಂದ ಬಡಿದರೂ ಬಂಡೆಯ ಒಂದು ತುಂಡನ್ನೂ ತೆಗೆಯಲು ಆಗಲಿಲ್ಲವಲ್ಲ ನಿನ್ನ ಕೈಯಲ್ಲಿ’ ಎಂದು ವ್ಯಂಗ್ಯ ಮಾಡಿದ.

ಅಲ್ಲೇ ಸಮೀಪದಲ್ಲಿನ ಕುಟೀರದಲ್ಲಿದ್ದ ಸ್ವಾಮೀಜಿಯೊಬ್ಬರು ಮೌನವಾಗಿದ್ದುಕೊಂಡು ಇವರನ್ನು ಗಮನಿಸುತ್ತ, ಅವರ ಮಾತು-ಕಥೆಗಳನ್ನು ಆಲಿಸುತ್ತಿದ್ದರು. ಬಳಿಕ ಅವರೀರ್ವರನ್ನೂ ಹತ್ತಿರ ಕರೆದು ‘ನೋಡಿ, ಆ ದೊಡ್ಡದಾದ ಬಂಡೆ ಒಡೆಯಲು ಸಾಕಷ್ಟು ಸುತ್ತಿಗೆಯ ಏಟಿನ ಅವಶ್ಯಕತೆಯಿತ್ತು. ಬಂಡೆ ಒಡೆಯುವಾತನೇ ಇನ್ನೂ ಒಂದಷ್ಟು ಹೆಚ್ಚು ಸುತ್ತಿಗೆ ಏಟು ನೀಡಿದ್ದರೆ ಆಗಲೇ ಅದು ಒಡೆದು ಹೋಗುತ್ತಿತ್ತು. ಪಾಪ ಆತ ಸುಸ್ತಾಗಿ ಕೂತಿದ್ದ. ದಾರಿಯಲ್ಲಿ ಬಂದ ನೀನು ಉತ್ಸಾಹದಿಂದ ಒಂದು ಕೈ ನೋಡಿಯೇ ಬಿಡುವ ಎಂದು ಕೆಲವು ಏಟು ಹಾಕಿದ ಕಾರಣ ಅದು ಪುಡಿ ಪುಡಿಯಾಯಿತು. ಇದರಲ್ಲಿ ಆತನ ಶ್ರಮದ ಪಾಲು ಮಹತ್ವದ್ದಾಗಿದೆ ಮತ್ತು ಅದಕ್ಕೆ ಕಾರಣವೂ ಆತನೇ ಆಗಿದ್ದಾನೆ. ನಿನ್ನ ಏಟಿನಿಂದ ಬಂಡೆ ಪುಡಿಯಾಗಿದ್ದು, ನಿನ್ನ ಅದೃಷ್ಟವೆನ್ನಬಹುದು’ ಎಂದರು. ಇಬ್ಬರಿಗೂ ಸ್ವಾಮೀಜಿಯ ಮಾತು ನಿಜವೆನಿಸಿತು.

ಬದುಕಿನಲ್ಲೂ ಹಾಗೆಯೇ ಯಾರೋ ಪಟ್ಟ ಶ್ರಮಕ್ಕೆ ಇನ್ಯಾರೋ, ಹೊಗಳಿಕೆ, ಗೌರವ, ಸಮ್ಮಾನ, ಉಡುಗೊರೆ ಪಡೆಯುತ್ತಾರೆ. ಕಷ್ಟಪಟ್ಟು ಶ್ರಮಿಸಿದವರಿಗೆ ಇದರಿಂದ ನಿರಾಶೆಯಾಗುವುದುಂಟು. ತನ್ನ ಶ್ರಮಕ್ಕೆ, ಕೆಲಸಕ್ಕೆ ಸೂಕ್ತ ಗೌರವವಿರಲಿ, ಗುರುತಿಸಲೂ ಇಲ್ಲವಲ್ಲ ಎಂದು ಅನಿಸುವುದು ಸಹಜ. ಹಾಗೆಂದು ನಿರಾಶರಾಗಬೇಕಾಗಿಲ್ಲ ಯಾಕೆಂದರೆ ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲವು ಒಂದಲ್ಲ ಒಂದು ರೀತಿಯಲ್ಲಿ, ಸೂಕ್ತ ಸಮಯದಲ್ಲಿ ಸಿಕ್ಕಿಯೇ ಸಿಗುತ್ತದೆ ಎಂದು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಹೇಳಿರುವುದು ನಮಗೆಲ್ಲ ತಿಳಿದಿದೆಯಲ್ಲವೇ. ಹಾಗಾಗಿ ಯಾವುದೇ ಫಲಾಪೇಕ್ಷೆಗಳನ್ನು ಬಯಸದೆ ನಮ್ಮ-ನಮ್ಮ ಕೆಲಸ ಕಾರ್ಯವನ್ನು ಸತ್ಯ, ಧರ್ಮ, ನ್ಯಾಯ, ನೀತಿ, ನಿಷ್ಠೆಯಿಂದ ಕೈಗೊಳ್ಳೋಣ.

ಅನೇಕ ಸಂದರ್ಭದಲ್ಲಿ ಸಣ್ಣ ವಿಚಾರ ಅಥವಾ ಒಂದೇ ಒಂದು ಸಂಗತಿಯಿಂದಾಗಿ ಬದುಕು ಮಹತ್ತರವಾದ ಬದಲಾವಣೆ ಅಥವಾ ತಿರುವನ್ನು ಪಡೆಯುತ್ತದೆ. ತೆಗೆದುಕೊಳ್ಳುವ ಸರಿ-ತಪ್ಪು ನಿರ್ಧಾರ, ಮಾಡುವ ಒಳ್ಳೆಯ-ಕೆಟ್ಟ ಕೆಲಸಗಳು ಕರ್ಮಕ್ಕೆ ತಕ್ಕಂತೆ ಪ್ರತಿಫಲವನ್ನು ನೀಡುತ್ತವೆ. ನಿರ್ಧಾರ ಸರಿಯಿದ್ದರೆ ಬದುಕಿನಲ್ಲಿ ಒಳಿತನ್ನೇ ಕಾಣಬಹುದು. ಅದೇ ತಪ್ಪು ನಿರ್ಧಾರವಾಗಿದ್ದರೆ ಕಷ್ಟಗಳು ಬೆನ್ನತ್ತಬಹುದು. ಆದರೂ ಕಷ್ಟವನ್ನೇ ಸವಾಲಾಗಿಸಿಕೊಂಡು ತಪ್ಪಿನಿಂದ ಪಾಠ ಕಲಿತು ಮತ್ತೊಮ್ಮೆ ಬದುಕನ್ನು ಯಶಸ್ಸು, ಸುಖ-ನೆಮ್ಮದಿಯ ಕಡೆಗೆ ತಿರುಗಿಸಿಕೊಂಡವರು ಸಾಕಷ್ಟಿದ್ದಾರೆ.

ಸತತ ಪ್ರಯತ್ನಗಳನ್ನು ಮಾಡಿದರೂ ಯಶಸ್ಸು ಕಾಣದೆ ಅರ್ಧದಲ್ಲಿ ಪ್ರಯತ್ನಕ್ಕೆ ಕೈ ಬಿಟ್ಟವರೆಷ್ಟೋ ಜನರಿದ್ದಾರೆ. ಆದರೆ ಸೋತರೂ ಕೈ ಬಿಡದೆ ಪ್ರಯತ್ನ ಪಟ್ಟ ಅನೇಕ ಸಾಧಕರು ನಮಗೆ ಕಾಣಸಿಗುತ್ತಾರೆ. ಬಲ್ಬ್ ಕಂಡು ಹಿಡಿದ ಥಾಮಸ್ ಆಲ್ವಾ ಎಡಿಸನ್, ವಿಮಾನ ಸಂಶೋಧಿಸಿದ ರೈಟ್ ಸಹೋದರರು, ಮೈಕಲ್ ಫ್ಯಾರಡೆ, ಬಿ.ಎಮ್​ಫೆಡ್ರಿ ಹೀಗೆ ಅನೇಕ ಸಂಶೋಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸತತ ಸೋಲನ್ನು ಕಂಡು ಕೊನೆಗೆ ಯಶಸ್ಸನ್ನು ಪಡೆದವರ ಸಂಖ್ಯೆಯೂ ಸಾಕಷ್ಟಿದೆ. ಅಂತಹ ಜನರಿಂದ ನಾವೆಲ್ಲ ಪ್ರೇರಣೆಯನ್ನು ಪಡೆಯಬಹುದಾಗಿದೆ.

ಹಾಗೆಯೇ ಒಂದೇ ಒಂದು ಸಂಗತಿಯ ನಿರ್ಲಕ್ಷ ್ಯಂದ ಸಾಕಷ್ಟು ತೊಂದರೆ, ನಷ್ಟವಾಗುವ ಸಂದರ್ಭಗಳೂ ಇವೆ. 99 ರೂಪಾಯಿಗೆ ಒಂದು ರೂಪಾಯಿ ಸೇರಿದರೆ ಮಾತ್ರ ನೂರು ರೂಪಾಯಿಯಾಗುವುದು, ಸಾವಿರ, ಲಕ್ಷ, ಕೋಟಿಗಳಿಗೂ ಅಷ್ಟೇ ಒಂದು ರೂಪಾಯಿ ಕಡಿಮೆಯಾದರೂ ಅವು ಪೂರ್ಣ ಪ್ರಮಾಣದ ಮೌಲ್ಯ ಪಡೆಯುವುದಿಲ್ಲ. ಒಮ್ಮೆ ಉದ್ಯಮಿಯೊಬ್ಬ ತನ್ನ ಹೊಸ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಎಲ್ಲ ವಯರಿಂಗ್ ಮಾಡಿಸಿದ, ಝುಗಮಗಿಸುವ ಬಲ್ಬ್, ಆಲಂಕಾರಿಕ ಫ್ಯಾನ್ ಇತ್ಯಾದಿ ಅಳವಡಿಸಿದ. ಹೇಗೆ ಕಾಣುತ್ತದೆ ಎಂದು ನೋಡಲು ಸ್ವಿಚ್ ಹಾಕಿದ.

ಊಹುಂ... ಯಾವ ಬಲ್ಬ್ ಕೂಡ ಉರಿಯುತ್ತಿಲ್ಲ. ಫ್ಯಾನ್ ತಿರುಗುತ್ತಲೇ ಇಲ್ಲ. ಅಯ್ಯೋ ಏನಾಯಿತು? ಇಷ್ಟೊಂದು ಖರ್ಚು ಮಾಡಿದರೂ ಯಾಕೆ ಕರೆಂಟ್ ಬರುತ್ತಿಲ್ಲ ಎಂದು ಗೋಳಾಡಿದ. ಆಗ ಅಲ್ಲಿಯೇ ಇದ್ದ ಕೆಲಸದ ಆಳು ‘ಸ್ವಾಮೀ, ಮೈನ್ ಸ್ವಿಚ್​ಬೋರ್ಡ್​ನಲ್ಲಿ ಫ್ಯೂಸ್ ಹೋಗಿದೆ. ಅದನ್ನು ಸರಿಪಡಿಸಿದರೆ ಸರಿಯಾಗಬಹುದು’ ಎಂದು ಹೇಳಿದ. ಉದ್ಯಮಿಯು ತಕ್ಷಣವೇ ರಿಪೇರಿಯವನನ್ನು ಕರೆಸಿ ಫ್ಯೂಸ್​ನ್ನು ಸರಿಪಡಿಸಿದ. ‘ಸ್ವಾಮಿ ಅದು ಫ್ಯೂಸ್​ನಲ್ಲಿರುವ ಸಣ್ಣ ತಂತಿಯೊಂದು ತುಂಡಾಗಿತ್ತು. ಹಾಗಾಗಿ ಇಡೀ ಮನೆಗೆ ಕರೆಂಟ್ ಸಂಪರ್ಕ ಇಲ್ಲವಾಗಿತ್ತು. ಸರಿ ಮಾಡಿದೆ. ಈಗ ನೋಡಿ ಮನೆ ಹೇಗೆ ಸುಂದರವಾಗಿ ಕಾಣುತ್ತದೆ’ ಎಂದ.

ಹಲವಾರು ವರ್ಷಗಳ ಹಿಂದೆ ಭೂಮಿಯ ಮೇಲೆ ನಿಂತು, ಆಗಸದತ್ತ ಕತ್ತನ್ನು ಚಾಚಿ ಚಂದ್ರನನ್ನು ನೋಡಲಾಗುತ್ತಿತ್ತು. ಚಂದಮಾಮನನ್ನು ತೋರಿಸಿ ಮಗುವಿಗೆ ಕೈತುತ್ತನ್ನು ಉಣಿಸಲಾಗುತ್ತಿತ್ತು. ಆದರೆ ಚಂದ್ರನನ್ನು ತಲುಪುವುದು ವಿಜ್ಞಾನಿಗಳ ಕನಸಾಗಿತ್ತು. ಅದಕ್ಕಾಗಿ ಹಗಲು-ರಾತ್ರಿ ದುಡಿದರು. ಅವಿರತ ಪ್ರಯತ್ನದಿಂದ ಚಂದ್ರನನ್ನು ತಲುಪಿ, ಚಂದ್ರನ ಮೇಲೆ ಕಾಲಿರಿಸುವ ಸಾಧನೆಯನ್ನೂ ಮಾಡಿದರು. ಈ ಸಾಧನೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ಸ್ವತಃ ನಾವೇ ಚಂದ್ರನಲ್ಲಿಗೆ ಹೋಗಿ ಬಂದಿದ್ದೇವೆ ಎನಿಸುವಷ್ಟು ಸಂತೋಷ ಪಟ್ಟಿದ್ದೇವೆ. ಇವೆಲ್ಲವೂ ನಡೆದದ್ದು ಸರಿಯಾದ ನಿರ್ಧಾರ ಹಾಗೂ ಪರಿಶ್ರಮದಿಂದ. ಚಂದ್ರನನ್ನು ತಲುಪುವ ಮೊದಲು ಅದೆಷ್ಟೋ ಸಲ ಸೋಲನ್ನು ಅನುಭವಿಸಿಯಾಗಿತ್ತು, ತಪ್ಪುಗಳನ್ನು ಮಾಡಿ ಪಾಠ ಕಲಿತಾಗಿತ್ತು. ಕೊನೆಗೂ ಚಂದ್ರನನ್ನು ತಲುಪಿಯಾಗಿತ್ತು. ಮೊನ್ನೆಯಷ್ಟೇ ನಮ್ಮ ವಿಜ್ಞಾನಿಗಳೂ ಮಂಗಳನನ್ನೂ ತಂತ್ರಜ್ಞಾನದ ಸಹಾಯದೊಂದಿಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲದರ ಹಿಂದಿರುವುದು ಪ್ರಯತ್ನ ಹಾಗೂ ಸರಿಯಾದ ನಿರ್ಧಾರ.

ಈ ಒಂದೇ ಸಂಗತಿಯಿಂದ ಆಗುವ ಮಹತ್ತರ ಬದಲಾವಣೆ ಬಗ್ಗೆ ತಿಳಿಯಬೇಕಾದರೆ ಕ್ರಿಕೆಟ್ ಇತ್ಯಾದಿ ಆಟಗಳ ಮೂಲಕ ಸರಳವಾಗಿ ಗಮನಿಸಬಹುದು. ಒಂದೇ ಒಂದು ರನ್ ಕಡಿಮೆಯಾಗಿ ತಂಡ ಸೋಲುವುದು, ಒಂದು ನೋಬಾಲ್, ವೈಡ್​ನ ಕಾರಣದಿಂದಾಗಿ ಇಡೀ ಆಟದ ಗತಿಯೇ ಬದಲಾಗಿ ಬಿಡುವುದನ್ನು ಕಂಡಿದ್ದೇವೆ. ಒನ್ ಡೇ, ಟೆಸ್ಟ್, ಟ್ವೆಂಟಿ-ಟ್ವೆಂಟಿ ಮ್ಯಾಚ್​ಗಳಲ್ಲಿ ಕೆಲವು ಪಂದ್ಯಗಳು ಜಿದ್ದಾ-ಜಿದ್ದಿಯ ಆಟಗಳಿಂದ ಸಾಕಷ್ಟು ರೋಚಕವಾಗಿರುತ್ತದೆ. ನಮ್ಮ ಬದುಕಿನಲ್ಲೂ ಹಾಗೆಯೇ ಕೊನೆಯ ಒಂದು ಪ್ರಯತ್ನ, ಸೋಲನ್ನು ಗೆಲುವನ್ನಾಗಿ ಪರಿವರ್ತಿಸಬಹುದು. ಕೊನೆಯ ಪ್ರಯತ್ನವನ್ನು ಮಾಡದೆ ಕೈ ಚೆಲ್ಲಿದರೆ ಗೆಲುವು, ಅವಕಾಶಗಳು ಕೈ ತಪ್ಪಿ ಹೋಗುವುದಂತೂ ಸತ್ಯ.

ಉದ್ಯೋಗದಲ್ಲಿ ಮುಂದುವರಿಸುವ ಅಥವಾ ಬಿಡುವ, ಪ್ರೀತಿಸಿದವರನ್ನು ಮದುವೆಯಾಗುವ ಅಥವಾ ಮನೆಯಲ್ಲಿ ಆಯ್ಕೆ ಮಾಡಿದವರನ್ನು ಮದುವೆಯಾಗುವ, ಹೊಸ ವ್ಯವಹಾರ ಮಾಡುವ ಅಥವಾ ಇನ್ನೊಬ್ಬರ ಕೈ ಕೆಳಗೆ ದುಡಿಯುವ ಹೀಗೆ ಅನೇಕ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಬಲು ಕಷ್ಟವೆನಿಸುತ್ತದೆ. ಅಂತಹ ಸಂದರ್ಭದಲ್ಲಿ ಆಪ್ತರು, ಅನುಭವಸ್ಥರು, ಮಾರ್ಗದರ್ಶಕರಿಂದ ಸಲಹೆ, ಸೂಚನೆಗಳನ್ನು ಪಡೆದು ಮುಂದುವರಿಯುವುದು ಉತ್ತಮ. ಹಾಗೆಯೇ ಶೈಕ್ಷಣಿಕ ಜೀವನದಲ್ಲಿ ಸೂಕ್ತ ಕೋರ್ಸ್​ಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಲು ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಕೂಡ ಬದುಕಿನಲ್ಲಿ ಮಹತ್ತರ ಘಟ್ಟವಾಗಿದೆ. ಜೀವನದಲ್ಲಿ ಸುಖ-ನೆಮ್ಮದಿ, ಸಂತೋಷ, ಸಫಲತೆಯನ್ನು ಪಡೆಯಲು ನಾವು ಮಾಡುವ ಪ್ರಯತ್ನಗಳನ್ನು ಮುಂದುವರಿಸೋಣ. ಸೋತು, ನಿರಾಶರಾಗಿ ಕೈ ಚೆಲ್ಲದೆ ಕೊನೆಯ ಪ್ರಯತ್ನವನ್ನು ಮಾಡೋಣ. ಕೊನೆಯ ಒಂದು ಪ್ರಯತ್ನ, ಒಂದು ನಿರ್ಧಾರ, ಒಂದು ಸಂಗತಿ ಬದುಕು ಬದಲಾವಣೆಯಾಗಲು ಕಾರಣವಾಗಬಹುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net