ವಿಜಯವಾಣಿ ಸಂಪಾದಕೀಯ: ಜವಾಬ್ದಾರಿ ನಿಭಾಯಿಸಲಿ

Corona
Published on

ದೇಶದಾದ್ಯಂತ ಜೂನ್ 1ರಿಂದ ಪ್ರತಿನಿತ್ಯ ಸರಾಸರಿ 9-10 ಸಾವಿರ ಕರೊನಾ ಸೋಂಕು ಪ್ರಕರಣಗಳು ದೃಢಪಡುತ್ತಿದ್ದು, ಆತಂಕ ಹೆಚ್ಚಾಗಿದೆ. ಈ ಮಧ್ಯೆ ಲಾಕ್​ಡೌನ್ ಸಡಿಲಗೊಂಡಿದ್ದು, ಭಾಗಶಃ ಭಾರತ ಮತ್ತೆ ತೆರೆದುಕೊಂಡಿದೆ. ಎರಡೂವರೆ ತಿಂಗಳುಗಳಿಂದ ಬಾಗಿಲು ಹಾಕಿದ್ದ ಮಾಲ್, ಹೋಟೆಲ್, ಪ್ರಾರ್ಥನಾ ಸ್ಥಳಗಳು ಮುಕ್ತವಾಗಿದ್ದು, ಮುಂಬರುವ ದಿನಗಳಲ್ಲಿ ಸೋಂಕು ಪ್ರಕರಣಗಳು ಮತ್ತಷ್ಟು ಹೆಚ್ಚಿದರೂ ಆಶ್ಚರ್ಯ ಪಡಬೇಕಿಲ್ಲ. ಆರ್ಥಿಕತೆಗೆ ಚೇತರಿಕೆ ನೀಡುವ ಸವಾಲೂ ಸರ್ಕಾರದ ಮುಂದೆ ಇರುವುದರಿಂದ, ಜನಜೀವನ ಸಹಜ ಸ್ಥಿತಿಗೆ ತರುವುದು ಅನಿವಾರ್ಯವೂ ಆಗಿದೆ. ಮತ್ತೊಂದೆಡೆ, ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂಬುದು ಸಮಾಧಾನಕರ ವಿಷಯ. ಆದರೆ, ಸೋಂಕಿಗೆ ಒಳಪಟ್ಟ ಹೊಸ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಭರ್ತಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ, ಮುಂಬೈ, ಚೆನ್ನೈನ ಆಸ್ಪತ್ರೆಗಳಲ್ಲಂತೂ ಹಾಸಿಗೆಗಳೇ ಇಲ್ಲದ ಸ್ಥಿತಿ ನಿರ್ವಣವಾಗುತ್ತಿದೆ.

ಕರ್ನಾಟಕದ ಸ್ಥಿತಿಯೂ ತುಂಬ ಭಿನ್ನವಾಗೇನಿಲ್ಲ. ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಹಸಿರು ವಲಯದ ಜಿಲ್ಲೆಗಳಿಗೂ ಕರೊನಾ ವ್ಯಾಪಿಸಿದೆ. ಬೆಂಗಳೂರಿನ ಬಹುತೇಕ ವಾರ್ಡ್​ಗಳಿಗೆ ಸೋಂಕು ಪ್ರವೇಶಿಸಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿ ಆರೋಗ್ಯ ಇಲಾಖೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆಯಾದರೂ, ಮುಂಬರುವ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಸಾಕಾಗದೆ ಹೋಗಬಹುದು. ಪರಿಸ್ಥಿತಿ ಹೀಗಿರುವಾಗ ಖಾಸಗಿ ಆಸ್ಪತ್ರೆಗಳು ಕೆಲ ಚಿಕಿತ್ಸೆಗಳಿಗೆ ನಿರಾಕರಿಸುತ್ತಿರುವ ನಿದರ್ಶನಗಳು ಬೆಳಕಿಗೆ ಬಂದಿವೆ. ಮಂಗಳವಾರ ಸಂಜೆ ಹೊತ್ತಿಗೆ ರಾಜ್ಯದ ಸೋಂಕು ಪ್ರಕರಣಗಳ ಸಂಖ್ಯೆ 5,900ರ ಗಡಿ ದಾಟಿದೆ. ಆದ್ದರಿಂದ, ಕರೊನಾ ಸೋಂಕು ನಿಯಂತ್ರಣದಲ್ಲಿ ಖಾಸಗಿ ಆಸ್ಪತ್ರೆಗಳು ಹೊಣೆಗಾರಿಕೆ ಮೆರೆಯಬೇಕಿದೆ. ಈ ಹೊಣೆಯನ್ನು ಬರೀ ಸರ್ಕಾರದ ಮೇಲೆ ಹಾಕಿ ಸುಮ್ಮನಾಗುವ ಕಾಲ ಇದಲ್ಲ.

ಪ್ರಸಕ್ತ ಸ್ಥಿತ್ಯಂತರವನ್ನು ಮತ್ತು ಕರೊನಾ ತಂದೊಡ್ಡಿರುವ ಅಪಾಯವನ್ನು ಖಾಸಗಿ ಆಸ್ಪತ್ರೆಗಳು ಮನಗಾಣಬೇಕಿದೆ. ಚಿಕಿತ್ಸೆ ನಿಟ್ಟಿನಲ್ಲಿ ಅವು ಸೂಕ್ತ ಮಾನದಂಡಗಳನ್ನು ರೂಪಿಸಿಕೊಳ್ಳಲಿ. ಆದರೆ, ಕರೊನಾ ವಿರುದ್ಧ ಹೋರಾಟಕ್ಕೆ ಅವು ಅಣಿಯಾಗಬೇಕಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆತರೆ ಸೋಂಕುಪೀಡಿತರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಆದ್ದರಿಂದ, ಖಾಸಗಿ ಆಸ್ಪತ್ರೆಗಳ ಮೇಲೂ ಈಗ ಮಹತ್ವದ ಜವಾಬ್ದಾರಿ ಇದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಅವು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ. ಉತ್ತಮ ಮೂಲಸೌಕರ್ಯ, ತಜ್ಞವೈದ್ಯರು, ಆಧುನಿಕ ತಂತ್ರಜ್ಞಾನದ ಬಲ ಎಲ್ಲವನ್ನೂ ಹೊಂದಿರುವ ಖಾಸಗಿ ಆಸ್ಪತ್ರೆಗಳಿಗೆ ಅವುಗಳ ದಕ್ಷತೆ ತೋರ್ಪಡಿಸಲು ಇದು ಸರಿಯಾದ ಸಮಯ. ಈ ನಿಟ್ಟಿನಲ್ಲಿ, ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಚಿಕಿತ್ಸೆಗೆ ಒಂದೇ ಥರದ ಶುಲ್ಕ ನಿಗದಿ ಮಾಡಿ, ರೋಗಿಗಳನ್ನು ಉಪಚರಿಸಬೇಕಿದೆ. ಕರೊನಾ ಹಾವಳಿಯನ್ನು ಬೇಗ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net