

ವಾಯುಮಾಲಿನ್ಯದ ಸ್ಥಿತಿ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಹಲವು ದಶಕಗಳಿಂದ ತೋರಿದ ನಿರ್ಲಕ್ಷ್ಯ ಇದಕ್ಕೆ ಕಾರಣ ಎನ್ನಬಹುದು. ಮಕ್ಕಳ ಆರೋಗ್ಯದ ಮೇಲೂ ವಾಯುಮಾಲಿನ್ಯ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಅಸ್ತಮಾಗೆ ತುತ್ತಾಗುತ್ತಿದ್ದಾರೆ. ಭಾರತದಲ್ಲಿ ವಾಯುಮಾಲಿನ್ಯದ ಪ್ರಮಾಣ ಭೌಗೋಳಿಕವಾಗಿ ವಿಸ್ತರಣೆಯಾಗಿದೆ ಮತ್ತು ಉತ್ತರ ಭಾರತದಲ್ಲಿ ಇದೇ ಪ್ರಮಾಣ ಮುಂದುವರಿದರೆ ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ ಒಂಬತ್ತಕ್ಕೂ ಹೆಚ್ಚಿನ ವರ್ಷಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕಕಾರಿ ವಿಚಾರವನ್ನು ಷಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ನ ಅಧ್ಯಯನ ವರದಿ ಬಹಿರಂಗಗೊಳಿಸಿದೆ. ಅಲ್ಲದೆ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡೂ ರಾಜ್ಯಗಳಲ್ಲಿ ವ್ಯಕ್ತಿಯ ಸರಾಸರಿ ಆಯಸ್ಸು 2.5ರಿಂದ 2.9 ವರ್ಷಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯವೇ ಕಾರಣವಾಗಿದೆ ಎಂದು ಬುಧವಾರ ಬಿಡುಗಡೆಯಾದ ವರದಿ ವರದಿ ಬೊಟ್ಟು ಮಾಡಿದೆ.
ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅಪಾಯದ ಮಟ್ಟ ಮೀರುತ್ತಿದೆ. ಭಾರತದ ಸುಮಾರು 14 ಕೋಟಿ ಜನರು ಎಕ್ಯುಐನ ಅಪಾಯಕಾರಿ ಮಟ್ಟಕ್ಕಿಂತ 10ರಿಂದ 15 ಪಟ್ಟು ಹೆಚ್ಚು ಮಾಲಿನ್ಯ ಹೊಂದಿರುವ ಗಾಳಿ ಸೇವಿಸುತ್ತಿದ್ದಾರೆ. ದೇಶದ ಬಹುತೇಕ
ನಗರಗಳು ಅಪಾಯದ ಮಟ್ಟಕ್ಕಿಂತ ತುಂಬ ಹೆಚ್ಚು ವಾಯುಮಾಲಿನ್ಯ ಹೊಂದಿವೆ ಎಂದರೆ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇ.25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ.15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ತಜ್ಞರ ಅಂಬೋಣ.
ನಾವು ಉಸಿರಾಡುವ ಗಾಳಿಯಲ್ಲಿ ಗಂಧಕದ ಡೈಆಕೈ ್ಸ್, ಸಾರಜನಕ ಡೈಆಕೈ ್ಸ್, ಇಂಗಾಲದ ಮೊನಾಕೈ ್ಸ್ (ಇದಂತೂ ಭಾರಿ ವಿಷಕಾರಕ) ಸೀಸ, ಜತೆಗೆ ಕ್ಲೋರೋಫೋರಾ ಕಾರ್ಬನ್ (ಇದು ಓಜೋನ್ ಪದರಕ್ಕೆ ಹಾನಿಮಾಡುತ್ತದೆ) ಸೇರಿಕೊಂಡಿವೆ. ವಾಯುಮಾಲಿನ್ಯ ಗಂಭೀರ ಸಮಸ್ಯೆ ಎಂದು ಪರಿಗಣಿಸಿ, ಪರಿಹಾರದ ದಾರಿಯಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸದಿದ್ದರೆ, ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಕೈಗಾರಿಕೆಗಳು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹೆಚ್ಚು ಒತ್ತು ನೀಡುವುದು, ರೈತರು ಕಳೆ ವಿಲೇವಾರಿಗೆ ಪರ್ಯಾಯ ಕ್ರಮ ಅನುಸರಿಸುವುದು, ವಾಯು ಗುಣಮಟ್ಟ ಸೂಚ್ಯಂಕ ಹೆಚ್ಚಿಸಲು ಮರಗಿಡಗಳನ್ನು ಬಳಸುವ ಪ್ರಯತ್ನಗಳು ಆಂದೋಲನ ಸ್ವರೂಪದಲ್ಲಿ ನಡೆಯಬೇಕು. ಮುಖ್ಯವಾಗಿ, ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ನೀತಿಗಳು ಕೂಡ ಇನ್ನಷ್ಟು ಬಿಗಿಯಾಗಬೇಕು. ಅಲ್ಲದೆ, ಈ ನಿಟ್ಟಿನಲ್ಲಿ ಜನರ ಸಹಕಾರ ಸಿಗುವವರೆಗೆ, ಜನರು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳುವವರೆಗೆ ದೊಡ್ಡ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ವಾಯುಮಾಲಿನ್ಯ ಸಮಸ್ಯೆ ಮತ್ತಷ್ಟು ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳೋಣ, ಉಸಿರಾಟಕ್ಕೆ ಪೂರಕವಾದ ಪರಿಸರವನ್ನು ನಮ್ಮದಾಗಿಸಿಕೊಳ್ಳೋಣ. ಇಲ್ಲದಿದ್ದರೆ ಮುಂದಿನ ಪೀಳಿಗೆ ಈಗಿನ ನಾಗರಿಕತೆಯನ್ನು ಕ್ಷಮಿಸದು.