

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಬದ್ಧತೆ, ಧಮ್ ಇದ್ದರೆ ಅನ್ವರ್ ಮಾಣಿಪ್ಪಾಡಿ ವರದಿ ಆಧರಿಸಿ ವಕ್ಫ್ ಜಮೀನು ಕಬಳಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಿ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಬೇಕು ಎನ್ನುವುದಾದರೆ ಈ ದೇಶದಲ್ಲಿರಬೇಕು. ಷರಿಯಾ ಮುಖ್ಯವೆನ್ನುವವರು ಪಾಕಿಸ್ತಾನಕ್ಕೆ ಹೋಗಬೇಕು. ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನೂ ಸೇರಿ ಈ ಮಾತು ಹೇಳುತ್ತಿದ್ದೇನೆ ಎಂದರು.
ಸಚಿವ ಎಂ.ಬಿ.ಪಾಟೀಲರು ಅನುಭವದಿಂದ ಪಕ್ವರಾಗಬೇಕು. ಷರಿಯಾ ಪರವಾಗಿ ಮಾತನಾಡಿದರೆ ಮತಗಳು ಬರುತ್ತವೆ ಎಂದು ಅಂಧ ಜ್ಞಾನದಲ್ಲಿ ಮಾತನಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು.
ಬಿಜೆಪಿ ತೊರೆದ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವುದು ಮಾಜಿ ಸಂಸದ ಡಿ.ಕೆ.ಸುರೇಶ್ ಬೇಗುದಿ ಹೆಚ್ಚಿದೆ. ಮಹಾರಾಷ್ಟ್ರ ಚುನಾವಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ಸಿಪಿವೈ ಪಕ್ಷ ತೊರೆದಿದ್ದರ ಬಗ್ಗೆ ಮಾತನಾಡಲು ಆಗಿದ್ದಿಲ್ಲ, ಇದನ್ನೇ ಮುಂದೆ ಮಾಡಿ ಡಿ.ಕೆ.ಸುರೇಶ್ ಟೀಕಿಸಿದ್ದಾರೆ ಎಂದರು.
ಲೋಕಸಭಾ ಚುನಾವಣಾ ಸೋಲಿನ ಸೇಡನ್ನು ಯೋಗೇಶ್ವರ್ ಮೇಲೆ ಸುರೇಶ್ ತೀರಿಸಿಕೊಳ್ಳುವ ಸಾಧ್ಯತೆಯಿದೆ. ಯೋಗೇಶ್ವರ್ ಬಿಜೆಪಿಯಲ್ಲಿದ್ದಾಗ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ಕೊಡಿ ಎಂದು ವರಿಷ್ಠರಿಗೆ ಕೇಳಿದ್ದೇನೆ.
ಈಗ ಎನ್‌ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಸೂಚನೆಯಂತೆ ಹೋಗಿ ಕೆಲಸ ಮಾಡುವೆ. ಯೋಗೇಶ್ವರ್ ಈ ಹಿಂದೆ ಏನು ಮಾತನಾಡಿದ್ದರು ಎಂದು ಡಿ.ಕೆ.ಸುರೇಶ್ ನೆನಪು ಮಾಡಿಕೊಳ್ಳಲಿ ಎಂದು ಸಿ.ಟಿ.ರವಿ ಕಾಲೆಳೆದರು.