

ಬೆಂಗಳೂರು: ‘ಒತ್ತಡ ಹೇರಿಯಾದರೂ ಸರಿ ಕರೊನಾ ಜಾಗೃತಿ ಮಾಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ಆರ್ಥಿಕ ನೆರವಿನ ಭರವಸೆ ನೀಡದಿದ್ದರೂ, ಹಣಕಾಸಿನ ಅಗತ್ಯವಿದ್ದರೆ ಲಿಖಿತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಕರೊನಾ ಎದುರಿಸಲು ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇದೀಗ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮುನ್ನೆಚ್ಚರಿಕೆ ಪಾಠ ಮಾಡಿದ್ದಾರೆ. ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ವಿಡಿಯೋ ಸಂವಾದದಲ್ಲಿ ಅವರು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಯೂ ಆರು ನಿಮಿಷ ವಿಚಾರ ವಿನಿಮಯ ನಡೆಸಿ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.
ಸಂವಾದದ ಆರಂಭ ಮತ್ತು ಕೊನೆಯಲ್ಲಿ ಎಲ್ಲ ರಾಜ್ಯಗಳಿಗೆ ಅನ್ವಯವಾಗುವಂತೆ ಹಲವು ಸಲಹೆ ಸೂಚನೆ ನೀಡಿದರು. ಕೇರಳ ರಾಜ್ಯದಿಂದ ಬೇಡಿಕೆಯ ದೊಡ್ಡ ಪಟ್ಟಿ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಸ್ವತಃ ಕೈಗೊಂಡ ಕ್ರಮಗಳನ್ನು ತಿಳಿಸಿ, ಪ್ರಧಾನಿಯವರ ಮಾತು ಆಲಿಸಿದವು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಪರೆನ್ಸ್ನಲ್ಲಿ ಫಲಪ್ರದವಾದ ಚರ್ಚೆ ನಡೆಯಿತು. ಪ್ರಧಾನ ಮಂತ್ರಿಯವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು. ಕರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು ಎಂದರು. ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು. ಕ್ವಾರಂಟೈನಿಂಗ್(ಪ್ರತ್ಯೇಕವಾಗಿಡುವುದು) ಅನ್ನು ದೊಡ್ಡಮಟ್ಟದಲ್ಲಿ ಕೈಗೊಳ್ಳುವಂತೆ ಸಲಹೆ ನೀಡಿದರು ಎಂದು ತಿಳಿಸಿದರು.
ಎಲ್ಲ ಮುಖ್ಯಮಂತ್ರಿಗಳು ಆಹಾರ ಮತ್ತು ಔಷಧಗಳ ಕೊರತೆ ಉಂಟಾಗದಂತೆ ವರ್ತಕರು ಹಾಗೂ ಔಷಧ ಮಾರಾಟಗಾರರೊಂದಿಗೆ ನಿಕಟ ಸಂಪರ್ಕ ಇರಿಸಿಕೊಳ್ಳುವಂತೆ ಸೂಚಿಸಿದರು ಎಂದ ಅವರು ಕರೋನಾ ಕುರಿತ ಮಾರ್ಗಸೂಚಿಗಳನ್ನು ಜನತೆ ಪಾಲಿಸುವಂತೆ ಮುಖ್ಯಮಂತ್ರಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಒತ್ತಡ ಹೇರುವಂತೆಯೂ ಸೂಚಿಸಿದರು ಎಂದರು.
ಬಾರ್ ಬಂದ್, ಹೋಟೆಲ್ ಭಾಗಶಃ
ಮಾರ್ಚ್ 31ರವರೆಗೆ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇರುವ ಹೋಟೆಲ್ಗಳಲ್ಲಿ ಪಾರ್ಸೆಲ್ ಮಾತ್ರ ಒದಗಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕಳೆದೊಂದು ವಾರದಿಂದ ವಿವಿಧ ಕ್ರಮಕೈಗೊಂಡಿದೆ. ಇದೀಗ ಹೋಟೆಲ್ ಮೂಲಕ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದ ಪಾಲಿಕೆ ವ್ಯಾಪ್ತಿಯ ಹೋಟೆಲ್ಗಳಲ್ಲಿ ಆಹಾರವನ್ನು ಪಾರ್ಸೆಲ್ ಮೂಲಕ ಮಾತ್ರ ವಿತರಿಸಲು ಕೈ ಮುಗಿದು ಮನವಿ ಮಾಡುತ್ತೇನೆ ಎಂದರು. ಎಲ್ಲ ಪಬ್ಗಳು, ಬಾರ್ಗಳನ್ನು ಕಡ್ಡಾಯವಾಗಿ ಮುಚ್ಚಲೇಬೇಕು ಎಂದ ಅವರು, ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ವೆಂಟಿಲೇಟರ್ಗಳ ಖರೀದಿ ಹಾಗೂ 5000 ಆಕ್ಸಿಜನ್ ಸೌಲಭ್ಯ ಇರುವ ಹಾಸಿಗೆಗಳ ಸೌಲಭ್ಯ ಸೃಷ್ಟಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿಯೂ ಹೇಳಿದರು.
‘ಜನತಾ ಕರ್ಫ್ಯೂ’ಗೆ ದೇವೇಗೌಡರ ಬೆಂಬಲ
ಬೆಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಹಾಗೂ ಸಂಯಮದಿಂದ ಕರೊನಾ ವೈರಸ್ ಎದುರಿಸಬೇಕು ಎಂಬ ಪ್ರಧಾನಿ ಮೋದಿ ಅವರ ಮಾತು ಪಾಲನೆಗೆ ಯೋಗ್ಯವಾದದ್ದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಸಾಮಾಜಿಕ ಕರ್ತವ್ಯದ ದೃಷ್ಟಿಯಿಂದ ಮಾರ್ಚ್ 22 ರಂದು ಪ್ರಧಾನಿ ಕರೆ ನೀಡಿರುವ ’ಜನತಾ ಕರ್ಫ್ಯೂ’ವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ. 60 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷ ಒಳಗಿನ ಮಕ್ಕಳು ಕಡ್ಡಾಯವಾಗಿ ಮನೆಯಿಂದ ಹೊರ ಬರಬಾರದೆಂಬ ಪ್ರಧಾನಿಯವರ ಆಗ್ರಹಪೂರ್ವಕ ವಿನಂತಿಯ ಹಿಂದಿನ ಕಾಳಜಿಯನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಈ ಅಗೋಚರ ಶತ್ರುವಿನ ವಿರುದ್ಧದ ಹೋರಾಟ ಇಡೀ ಜನತೆಯ ಸಮಷ್ಟಿಪ್ರಜ್ಞೆ ಮತ್ತು ಸಂಯಮಪೂರ್ಣ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗುತ್ತದೆ ಎಂದಿದ್ದಾರೆ. ಮಾರ್ಚ್ 22ರಂದು ಜನತಾ ಕರ್ಫ್ಯೂವನ್ನು ಪಾಲಿಸೋಣ ಹಾಗೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗಳಿಗೂ ಗೌರವ ಸಲ್ಲಿಸೋಣ ಎಂದು ದೇವೇಗೌಡ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಗೊಂದಲ ಬೇಡ. ಪರೀಕ್ಷೆ ಯಥಾಪ್ರಕಾರ ನಡೆಯುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಹೆಚ್ಚು ಅಂತರ ಇರುವಂತೆ ಸೂಚನೆ ನೀಡಲಾಗಿದೆ. | ಬಿ.ಎಸ್.ಯಡಿಯೂರಪ್ಪ ಸಿಎಂ ಶನಿವಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ (981) ಜನರನ್ನು ಅವಲೋಕನಕ್ಕೊಳಪಡಿಸಲಾಗಿದೆ. ಹೆಚ್ಚು ಸೋಂಕಿತ ದೇಶಗಳಿಂದ ಪ್ರಯಾಣಿಕರು ಬಂದಿರುವುದರಿಂದ ಪರಿಶೀಲಿಸಲಾಗಿದೆ. | ಡಾ.ಸುಧಾಕರ್ ವೈದ್ಯ ಶಿಕ್ಷಣ ಸಚಿವ