

ಅರಕಲಗೂಡು: ತಾಲೂಕು ಆಡಳಿತ ವತಿಯಿಂದ ಏ.14ರಂದು ಅದ್ದೂರಿಯಾಗಿ ನಡೆಯುವ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಜಯಂತಿ ಅರ್ಥಪೂರ್ಣ ಆಚರಣೆ ಕಾರ್ಯಕ್ರಮದಲ್ಲಿ ಎಲ್ಲ ಪ್ರಗತಿಪರ ಸಂಘ-ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.
ಪಟ್ಟಣದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಯಾವುದೇ ಚುನಾವಣೆ ಇಲ್ಲದೇ ಇರುವುದರಿಂದ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ನಮ್ಮ ಭಾಗ್ಯವಾಗಿದೆ. ಪಟ್ಟಣ ಸೇರಿದಂತೆ ಇಡೀ ತಾಲೂಕಿನಾದ್ಯಂತ ಜನರು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಿಧಾನ ಶಿಲ್ಪಿಗೆ ಗೌರವ ತಂದುಕೊಡಬೇಕೆಂದು ಕರೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಯ ಗೋಪುರ ಕಾರ್ಯಕ್ರಮ ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಕೆಲಸ ನಿರ್ವಹಿಸುವ ತಂಡ ಸುಳ್ಳು ನೆಪ ಹೇಳಿ ಬೇರೆ ಕಡೆ ತೆರಳಿರುವ ಪರಿಣಾಮ ಅಂದುಕೊಂಡ ವೇಳೆಗೆ ಗೋಪುರ ಕೆಲಸ ಮುಗಿದಿಲ್ಲ. ಈ ಬಾರಿಯ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಗೋಪುರ ಸಮರ್ಪಣೆ ಮಾಡುವ ಮೂಲಕ ಐತಿಹಾಸಿಕ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಕೆಲಸಗಾರರಿಂದ ಅದು ಸಾಧ್ಯವಾಗಿಲ್ಲ. ಏಪ್ರಿಲ್ 14ರ ಜಯಂತಿ ಕಾರ್ಯಕ್ರಮ ಮುಗಿದ ನಂತರ ಗೋಪುರ ಉದ್ಘಾಟನೆ ಕಾರ್ಯಕ್ರಮವನ್ನು ಅತ್ಯಂತ ಹೆಚ್ಚಿನ ರೀತಿಯ ವೈಭವದಿಂದ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.
ತಹಸೀಲ್ದಾರ್ ಸೌಮ್ಯಾ ಮಾತನಾಡಿ, ಏ.14ರಂದು ಬೆಳಗ್ಗೆ ತಾಲೂಕು ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬೆಳ್ಳಿರಥದ ಸಾರೋಟಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ವಿವಿಧ ಕಲಾತಂಡಗಳು, ಅಧಿಕಾರಿಗಳೊಂದಿಗೆ ನಡೆಯಲಿದೆ. ಇದಾದ ಬಳಿಕ ಶಿಕ್ಷಕರ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ದಲಿತ ಸಮುದಾಯದ ಗಣ್ಯರಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸಂಪನ್ಮೂಲ ವ್ಯಕ್ತಿಯಿಂದ ವಿಶೇಷ ಭಾಷಣದ ವ್ಯವಸ್ಥೆಯೂ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮ ಆಯೋಜನೆ ಕುರಿತು ಕೆಲವು ಸಲಹೆಗಳನ್ನು ನೀಡಿದರು. ಪಪಂ ಅಧ್ಯಕ್ಷ ಪ್ರದೀಪ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಇದ್ದರು.