

ಸೋಮವಾರಪೇಟೆ: ಮಹಿಳೆಯರು ಸ್ವ-ಉದ್ಯೋಗದತ್ತಲೂ ಆಸಕ್ತಿ ಹೊಂದಬೇಕು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರಪೇಟೆ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಸ್ಥಳೀಯ ಮಹಿಳಾ ಸಮಾಜದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದು, ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ. ಕೇಂದ್ರ ಸರ್ಕಾರವು ಮಹಿಳಾ ಸ್ವಾವಲಂಬನೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಮಾಹಿತಿ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಮಹಿಳೆಯರು ಇಂದು ಔದ್ಯೋಗಿಕ ಕ್ಷೇತ್ರದಲ್ಲೂ ಹೆಸರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಸ್ವ ಉದ್ಯೋಗಕ್ಕೆ ಹಣಕಾಸಿಕ ನೆರವು ಒದಗಿಸುತ್ತಿದೆ. ಹಲವಾರು ಯೋಜನೆಗಳನ್ನು ಸ್ಥಳೀಯ ಬ್ಯಾಂಕ್‌ಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದು. ಪ್ರಸ್ತುತ ಎಲ್ಲ ರಂಗದಲ್ಲೂ ಮಹಿಳೆಯರು ಪ್ರಗತಿ ಸಾಧಿಸುತ್ತಿದ್ದು, ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದರು.
ಸೋಮವಾರಪೇಟೆ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಮಡಿಕೇರಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌಮ್ಯಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾ ನಾಗೇಶ್, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ದರ್ಶನ್ ಜೋಯಪ್ಪ, ಎಸ್.ಆರ್.ಸೋಮೇಶ್, ಶರತ್‌ಚಂದ್ರ ಇದ್ದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆಯಡಿ ಉದ್ಯಮ ಆರಂಭಿಸಿ ಆರ್ಥಿಕ ಸಬಲತೆ ಸಾಧಿಸಿರುವ ಅಬ್ಬೂರುಕಟ್ಟೆಯ ಉದ್ಯಮಿ ರೂಪಾ ಹೆಬ್ಬಾರ್ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.