

ಧಾರ್ವಿುಕ ಅವಹೇಳನ ಆರೋಪದ ನೆಪದಲ್ಲಿ ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ವ್ಯಾಪಕ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದೆ. ಅಲ್ಲದೆ, ಉದ್ವಿಗ್ನ ಸ್ಥಿತಿಯನ್ನೂ ಸೃಷ್ಟಿಸಿದೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಎರಡು-ಮೂರು ಸಾವಿರ ಜನರನ್ನು ಒಳಗೊಂಡ ಕಿಡಿಗೇಡಿಗಳ ಗುಂಪು ಒಟ್ಟಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಇಟ್ಟಿದ್ದಲ್ಲದೆ, ನಗನಾಣ್ಯವನ್ನೂ ದೋಚಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಪೊಲೀಸ್ ವಾಹನಗಳು, ಆಟೋ, ಬೈಕ್ ಸೇರಿ 50ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸಗೊಳಿಸಲಾಗಿದೆ. ಘಟನೆಯ ವರದಿ ಮಾಡಲು ಹೋದ ಪತ್ರಕರ್ತರ ಮೇಲೂ ಹಲ್ಲೆ ನಡೆದಿದೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದ ದುಷ್ಕರ್ವಿುಗಳ ಗುಂಪು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾನಿ ಮಾಡುವ ಜತೆಗೆ, ಕಾವಲ್ಭೈರಸಂದ್ರ ಪೊಲೀಸ್ ವಸತಿಗೃಹದ ಮನೆಗಳಿಗೆ ಕಲ್ಲು ತೂರಿದೆ. ಪೊಲೀಸರ ಮನವಿಗೂ ಕಿಡಿಗೇಡಿಗಳು ಕಿವಿಗೊಡದಿದ್ದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಅನಿವಾರ್ಯವಾಗಿ ಗೋಲಿಬಾರ್ ನಡೆಸಲಾಗಿದೆ. ಈ ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಗೆ ಎಲ್ಲಡೆಯಿಂದಲೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಿಂಸೆ ಹರಡಿಕೊಂಡ ಪರಿ ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳು ನಡೆಸಿದ ತಯಾರಿಯೂ ಆತಂಕಕ್ಕೆ ಕಾರಣವಾಗಿದೆ.
ನಮ್ಮಲ್ಲಿ ನ್ಯಾಯ ಒದಗಿಸಲು ಕಾನೂನು ವ್ಯವಸ್ಥೆ ಬಲಶಾಲಿಯಾಗಿದೆ. ಹೀಗಾಗಿ, ಧಾರ್ವಿುಕ ಅವಹೇಳನ ಸೇರಿ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸುವ ಮೂಲಕ ನ್ಯಾಯದ ಹಾದಿ ಹಿಡಿಯಬಹುದಿತ್ತು. ಆದರೆ, ಕಾನೂನನ್ನೇ ಕೈಗೆತ್ತಿಕೊಂಡ ಕ್ರಮ ಅಕ್ಷಮ್ಯ. ಯಾವುದೇ ಕಾರಣಕ್ಕೂ ಇಂಥ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜನರ ರಕ್ಷಣೆ ಮಾಡುವ ಪೊಲೀಸ್ ವ್ಯವಸ್ಥೆ, ಜನಪ್ರತಿನಿಧಿ ಮೇಲೆ ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದಿರುವುದನ್ನು ನೋಡಿದರೆ ಇದು ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಈ ಅಪಾರ ನಷ್ಟವನ್ನು ಭರಿಸಿ ಕೊಡುವವರಾರು? ಅಷ್ಟಕ್ಕೂ ಇಂಥ ಹಿಂಸೆಯಿಂದ ಯಾವ ಸಮಸ್ಯೆ ಪರಿಹಾರ ಕಾಣಲು ಸಾಧ್ಯ? ಬದಲಿಗೆ, ಶಾಂತಿಗೆ ಸಂಚಕಾರ ಒದಗಿ, ಸಾಮರಸ್ಯಕ್ಕೂ ಧಕ್ಕೆ ಒದಗುತ್ತದೆ. ಇಂಥ ಕೃತ್ಯದ ಹಿಂದೆ ಯಾವುದೇ ಶಕ್ತಿಗಳು ಅಡಗಿದ್ದರೂ, ಅವರನ್ನು ಪತ್ತೆ ಹಚ್ಚಿ, ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕಿದೆ. ತಪ್ಪಿತಸ್ಥರಿಂದಲೇ ನಷ್ಟದ ಪ್ರಮಾಣವನ್ನು ವಸೂಲಿ ಮಾಡುವ ಉತ್ತರಪ್ರದೇಶ ಮಾದರಿಯ ಕಾನೂನನ್ನು ರಾಜ್ಯದಲ್ಲೂ ಜಾರಿಗೆ ತರಬೇಕೆಂಬ ಆಗ್ರಹ ಸೂಕ್ತವಾಗಿಯೇ ಇದೆ. ಇದನ್ನೂ ಓದಿ: ಭಾರತದಲ್ಲಿ ರೈಲು ಓಡಿಸೋಕೆ ವಿದೇಶಿ ಕಂಪನಿಗಳಿಂದಲೂ ಆಸಕ್ತಿ; 23 ಸಂಸ್ಥೆಗಳಿಂದ ಬಿಡ್
‘ರಾಷ್ಟ್ರೀಯ ಮಾನವ ಹಕ್ಕು ಆಯೋಗ ರೂಪಿಸಿರುವ ಮಾರ್ಗಸೂಚಿಗಳಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಘಟನೆಯ ತನಿಖೆ ನಡೆಸಲಾಗುವುದು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅದೇನಿದ್ದರೂ, ಇಂಥ ಘಟನೆಗಳು ಮರುಕಳಿಸದಂತೆ ಮತ್ತು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ, ವ್ಯವಸ್ಥೆಯ ಜವಾಬ್ದಾರಿ.