ಆರ್ಥಿಕತೆಗೆ ಒತ್ತು, ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಸಲಹೆ

edit 4
Published on

ಮಾರ್ಚ್ ತಿಂಗಳ ಆರಂಭದಲ್ಲಿ ಕರೊನಾ ಸೋಂಕಿನ ವಿಷಯದಲ್ಲಿ ಭಾರತ ಮತ್ತು ಇತರೆ ದೇಶಗಳ ಸ್ಥಿತಿ ಬಹುತೇಕ ಒಂದೇ ಬಗೆಯಾಗಿತ್ತು. ಆದರೆ, ಭಾರತ ತಡ ಮಾಡದೆ ಕ್ಷಿಪ್ರ ಕ್ರಮಗಳನ್ನು ಕೈಗೊಂಡಿತು. ಮಾರ್ಚ್ 22ಕ್ಕೆ ಜನತಾ ಕರ್ಫ್ಯೂ, ಮಾರ್ಚ್ 25ರಿಂದ ಏಪ್ರಿಲ್ 14 ದಿಗ್ಬಂಧನದ ಮೊದಲ ಹಂತ. ಆ ಬಳಿಕ ಏಪ್ರಿಲ್ 15ರಿಂದ ಮೇ 3ರವರೆಗೆ ದಿಗ್ಬಂಧನದ ಎರಡನೇ ಹಂತ ಜಾರಿಯಲ್ಲಿದ್ದು, ಸೋಂಕು ಪ್ರಸರಣದ ವೇಗವನ್ನು ತಗ್ಗಿಸುವಲ್ಲಿ ಯಶಸ್ಸು ಸಿಕ್ಕಿದೆ. ಅಷ್ಟೇ ಅಲ್ಲ, ಈ ಕ್ರಮಗಳಿಂದ ಸಾವಿರಾರು ಜೀವಗಳು ಉಳಿದಿವೆ ಎಂಬುದು ಬಹುದೊಡ್ಡ ಸಮಾಧಾನದ ಸಂಗತಿ. ಹಾಗಂತ, ಸೋಂಕಿನ ಹಾವಳಿ ಸಂಪೂರ್ಣವಾಗಿ ನಿಂತಿಲ್ಲ. ಕೆಲ ರಾಜ್ಯಗಳಲ್ಲಂತೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದು, ಕಳೆದ 38 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳ ಜತೆಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ದಾರೆ.

ಸೋಮವಾರ ನಡೆದ ಮುಖ್ಯಮಂತ್ರಿಗಳ ಜತೆಗಿನ ಸಂವಾದದಲ್ಲಿ ಈಗಿನ ಸ್ಥಿತಿಯನ್ನು ಅವಲೋಕಿಸುವ ಜತೆಗೆ ಮುಂದೇನು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಗೋವಾ, ಒಡಿಶಾ, ಮೇಘಾಲಯ ರಾಜ್ಯಗಳು ಮೇ 3ರ ಬಳಿಕವೂ ಲಾಕ್​ಡೌನ್ ವಿಸ್ತರಿಸುವ ಸಲಹೆ ನೀಡಿವೆ. ಎಲ್ಲರ ಸಲಹೆಗಳನ್ನು ಆಲಿಸಿದ ಪ್ರಧಾನಿ, ‘ಸೋಂಕಿನ ಅಪಾಯ ಈಗಲೂ ಇರುವುದು ನಿಜ. ಆದರೆ, ಸೋಂಕು ನಿಯಂತ್ರಣದ ಜತೆಗೆ ಅರ್ಥವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿಯೂ ಪ್ರಮುಖವಾಗಿ ಗಮನ ಹರಿಸಬೇಕಾಗಿದೆ’ ಎಂದಿದ್ದಾರೆ. ರಾಜ್ಯ ಸರ್ಕಾರಗಳು ಕೂಡ ಪ್ರಧಾನಿಯ ಈ ಮಾತಿಗೆ ಸಹಮತ ವ್ಯಕ್ತಪಡಿಸಿವೆ. ಸೋಂಕು ಪ್ರಕರಣ ಹೆಚ್ಚಿಲ್ಲದ ‘ಹಸಿರು ವಲಯ’ದ ಜಿಲ್ಲೆಗಳಲ್ಲಿ ಕ್ರಮೇಣವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಕಾಣಬೇಕು. ದಿನಗೂಲಿಗಳು, ಕಾರ್ವಿುಕರ ಸಮಸ್ಯೆಗಳತ್ತ ಗಮನ ನೀಡಬೇಕು. ರೆಡ್ ಝೋನ್ ಪ್ರದೇಶಗಳಲ್ಲಿ ಕೇಂದ್ರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ, ಲಾಕ್​ಡೌನ್ ಬಿಗಿಗೊಳಿಸಬೇಕು ಎಂಬ ಪ್ರಮುಖ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳನ್ನು ಇರಿಸಿರುವುದು ಸರಿಯೇ. ಮೇ 3ಕ್ಕೆ ದಿಗ್ಬಂಧನ ಕೊನೆಗೊಳ್ಳುವ ಲಕ್ಷಣಗಳಂತೂ ಇಲ್ಲ. ಕೆಂಪು ವಲಯ ಜಿಲ್ಲೆಗಳಲ್ಲಿ ಇದು ಮತ್ತಷ್ಟು ಬಿಗಿ ಆಗಲಿದೆ. ಮತ್ತೊಂದೆಡೆ, ಕರೊನಾದಿಂದ ಮುಕ್ತವಾದ ಪಟ್ಟಿಗೂ ಹೊಸ ಜಿಲ್ಲೆಗಳು ಸೇರ್ಪಡೆ ಆಗುತ್ತಿವೆ. ಕನಿಷ್ಠ ಪಕ್ಷ ಅಲ್ಲಾದರೂ, ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಬೇಕು ಎಂದು ಆರ್ಥಿಕ ತಜ್ಞರೂ ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಹಲವು ರಂಗಗಳು ಭಾರಿ ಸಂಕಷ್ಟದಲ್ಲಿ ಇದ್ದು, ಮುಂದಿನ ದಿನಗಳ ಅನಿಶ್ಚಿತತೆ ಬಗ್ಗೆ ಆತಂಕಗೊಂಡಿವೆ. ಕರೊನಾ ವಿರುದ್ಧ ಹೋರಾಟ ಮತ್ತು ಆರ್ಥಿಕತೆಯ ರಕ್ಷಣೆ-ಇವೆರಡನ್ನೂ ಸಮತೋಲಿತವಾಗಿ ತೆಗೆದುಕೊಂಡು ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮುಂಗಾರು ಹಂಗಾಮು ಕೂಡ ಆರಂಭಗೊಳ್ಳಲಿದ್ದು, ಆ ನಿಟ್ಟಿನಲ್ಲಿಯೂ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಒಟ್ಟಾರೆ, ಈಗಿನ ಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಮನ್ವಯದಿಂದ ಸಾಗುತ್ತ, ವರ್ತಮಾನದ ಸಮಸ್ಯೆಗಳನ್ನು ಪರಿಹರಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net