

ಬೆಳಗಾವಿ: ವಕ್ಪ್ ಆಸ್ತಿ ಒತ್ತುವರಿ ವಿಚಾರವಾಗಿ ನನ್ನ ಮೇಲಿನ 150 ಕೋಟಿ ರೂ. ಆಮಿಷ ಆರೋಪವನ್ನು ಸಿಬಿಐ ತನಿಖೆಗೆ ಕೊಡಿ, ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧ ಮುಡಾ ನಿವೇಶನ ಹಂಚಿಕೆ ಹಗರಣವನ್ನೂ ಸಿಬಿಐ ತನಿಖೆಗೆ ಕೊಡಲಿ, ವಕ್ಪ್ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ವಕ್ಪ್ ಮಂಡಳಿ ನೋಟಿಸ್ ವಿಚಾರವಾಗಿ ಶುಕ್ರವಾರ ನಡೆದ ಅಲ್ಪಾವಧಿ ಚರ್ಚೆ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿಜಯೇಂದ್ರ ವಿರುದ್ಧ 150 ಕೋಟಿ ರೂ. ಆಮಿಷ ಆರೋಪ ಹೊರಿಸಿದ್ದರು. ಇದಕ್ಕೆ ಸೋಮವಾರ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಸಚಿವರ ವಿರುದ್ಧ ಹರಿಹಾಯ್ದರಲ್ಲದೆ, ತನಿಖೆ ನಡೆಸುವಂತೆ ಸವಾಲು ಹಾಕಿದರು. ವಿಜಯೇಂದ್ರ ಸದನದಲ್ಲಿ ಇಲ್ಲದೇ ಇರುವಾಗ ಸಚಿವರು 150 ಕೋಟಿ ರೂ. ಆಮಿಷ ಆರೋಪ ಮಾಡಿದ್ದಾರೆ. ಈ ವಿಷಯ ಪ್ರಸ್ತಾಪಿಸುವ ಮುನ್ನ ಸಚಿವರು ಈ ಬಗ್ಗೆ ಸೂಚನಾಪತ್ರ ಕೊಟ್ಟಿದ್ದರೇ ಎಂದು ಮೊದಲು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ನಾನು ಆರೋಪ ಮಾಡಿದ್ದಲ್ಲ ಅದು, ಪತ್ರಿಕೆಗಳಲ್ಲಿ ಬಂದಿದ್ದನ್ನು ಹೇಳಿದ್ದು ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
ಬಳಿಕ ವಿಜಯೇಂದ್ರ ಮಾತನಾಡಿ, ನನ್ನ ಅನುಪಸ್ಥಿತಿಯಲ್ಲಿ ಸಚಿವರಿಂದ ಗುರುತರ ಆರೋಪ ಕೇಳಿಬಂದಿದೆ. ಅದನ್ನು ಮುಖ್ಯಮಂತ್ರಿಗಳೂ ಪುನರುಚ್ಛರಿಸಿದ್ದಾರೆ. ವಕ್ಪ್ ಆಸ್ತಿ ಕಬಳಿಕೆ ಬಗ್ಗೆ ಅಂದಿನ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ವರದಿ ಕೊಟ್ಟಿದ್ದರು. ಅದರಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧವೇ ಆರೋಪಗಳಿದ್ದವು. 2016ರಲ್ಲಿ ಉಪಲೋಕಾಯುಕ್ತ ನ್ಯಾ.ಆನಂದ್ ವಿಚಾರಣೆ ನಡೆಸಿ ಸಲ್ಲಿಸಿದ್ದ ವರದಿಯನ್ನು ಅಂದಿನ ಸಿದ್ದರಾಮಯ್ಯ ಸರ್ಕಾರ ತಿರಸ್ಕರಿಸಿತ್ತು. ನನ್ನ ವಿರುದ್ಧ ಪ್ರಿಯಾಂಕ್ ಖರ್ಗೆ ಹೊರಿಸಿದ ಆರೋಪದ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಸಿಎಂ ಹೇಳಿದ್ದಾರೆ. ಆಗಲಿ, ನಾನು ಸಿದ್ಧನಿದ್ದೇನೆ. ಸಿದ್ದರಾಮಯ್ಯರಿಗೆ ಸಿಬಿಐ ಬಗ್ಗೆ ವಿಶ್ವಾಸ ಬಂದಂತಿದೆ. ನನ್ನ ಮೇಲಿನ ಪ್ರಕರಣವನ್ನೂ ಸಿಬಿಐ ತನಿಖೆಗೆ ಕೊಡಲಿ, ಉಪಲೋಕಾಯುಕ್ತರ ವರದಿಯನ್ನೂ ಸದನದಲ್ಲಿ ಮಂಡಿಸಿ, ಚರ್ಚೆಯಾಗಲಿ ಎಂದು ನೇರ ಸವಾಲು ಹಾಕಿದರು.
ಇದರಿಂದ ಆಡಳಿತ ಪಕ್ಷದ ಸದಸ್ಯರಿಗೆ ಕಸಿವಿಸಿ ಉಂಟಾಯಿತಲ್ಲದೆ, ಮುಂದೆ ಮಾತನಾಡಲು ಅಡ್ಡಿಪಡಿಸಲಾರಂಭಿಸಿದರು. ವಿಜಯೇಂದ್ರ ಮಾತು ಮುಂದುವರಿಸಿ, ಸಿದ್ದರಾಮಯ್ಯ ಬಗ್ಗೆ ನನಗೆ ಅನುಕಂಪ ಇದೆ. ಅವರ ಹಾಗೂ ಅವರ ಕುಟುಂಬ ವಿರುದ್ಧ ಮುಡಾ ಆರೋಪ ಬಂದಿದೆ. ಕೋವಿಡ್ ಪ್ರಕರಣ ಇಟ್ಟುಕೊಂಡು ಮಾಜಿ ಸಿಎಂ ಯಡಿಯೂರಪ್ಪರನ್ನು ಸಿಲುಕಿಸಬೇಕು ಎಂದಿದ್ದಾರೆ. ದ್ವೇಷದ ರಾಜಕಾರಣ ಮಾಡಲಿ ಎದುರಿಸುತ್ತೇವೆ ಎನ್ನುತಿದ್ದಂತೆ ಸಚಿವ ಕೃಷ್ಣಬೈರೇಗೌಡ, ರಾಜಕೀಯ ಭಾಷಣ ಬೇಡ ಎಂದರು. ಈ ವೇಳೆ ಆಡಳಿತಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ಶುರುವಾಯಿತು. ಮುಂದುವರಿದು ಬರೀ ಹಿಟ್ ಆಂಡ್ ರನ್ ಮಾಡುವುಲ್ಲ. ನನ್ನ ವಿರುದ್ಧ ಮಾಡಿದ ಆರೋಪಕ್ಕೆ ಏನು ಸಾಕ್ಷಿ ಇದೆ? ಸಚಿವರಾದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ವಿಜಯೇಂದ್ರ ಹೇಳುತ್ತಿದ್ದಂತೆ, ಕೃಷ್ಣಬೈರೇಗೌಡ ತಾಳ್ಮೆ ಕಳೆದುಕೊಂಡು ಅದಾನಿಯ 2500 ಕೊಟಿ ರೂ. ಭ್ರಷ್ಟಾಚಾರ ಕಾಣುತ್ತಿಲ್ಲವೇ?
ಈಗ ಸೀಳುನಾಯಿಗಳು ಏನು ಮಾಡುತ್ತಿವೆ ಎಂದರು. ಇಷ್ಟರ ನಡುವೆ ಕೆರಳಿದ್ದ ಪ್ರಿಯಾಂಕ್ ಖರ್ಗೆ, ನನ್ನ ಹೆಸರು ಉಲ್ಲೇಖಿಸಿದ ಪ್ರತಿಪಕ್ಷ ಸದಸ್ಯರು ಬೇಜವಾಬ್ದಾರಿ ಎಂದೆಲ್ಲ ಹೇಳಿದ್ದಾರೆ. ನಾನೂ ಮಾತನಾಡಬೇಕು ಸ್ಪಷ್ಟನೆ ಕೊಡಬೇಕೆಂದರು. ಎದುರಾಗಿ ಸಚಿವರು ಕ್ಷಮೆ ಕೇಳಿ ನಂತರ ಏನಾದರೂ ಮಾತನಾಡಲಿ ಎಂದು ವಿಜಯೇಂದ್ರ ಆಗ್ರಹಿಸಿದರಲ್ಲದೇ, ನಿಮ್ಮ ಪಾಪದ ಕೊಡ ತುಂಬುತ್ತಿದೆ ಎಂದರು. ಸ್ಪೀಕರ್ ಯು.ಟಿ.ಖಾದರ್ ಅವರು ಪ್ರಿಯಾಂಕ್ ಉದ್ದೇಶಿಸಿ, ಸ್ವಪ್ರತಿಷ್ಠೆ, ಇಗೋ ಬಿಟ್ಟುಬಿಡಿ. ಪೇಪರ್ ಕಟಿಂಗ್ ತೋರಿಸಿ ಚರ್ಚೆ ಮಾಡಬೇಡಿ ಎಂದು ಬುದ್ಧಿ ಹೇಳಿದರು.
ಅನ್ವರ್ ಮಾಣಿಪ್ಪಾಡಿ ಹೇಳಿಕೆ ವಿಡಿಯೋಗಳು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವುದನ್ನು ನಾನು ಗಮನಿಸಿದ್ದೇನೆ. ಅನೇಕ ವಿಚಾರಗಳು ಅವರ ಬಾಯಲ್ಲೇ ಬಂದಿವೆ. ತಮ್ಮ ವಿಚಾರವನ್ನು ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದು ತಿಳಿಸಿರುವುದಾಗಿ ಹೇಳಿದ್ದರು. ಈ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಈ ದಾಖಲೆಗಳನ್ನು ಬಿಡುಗಡೆ ಮಾಡಲಿ. | ಡಿ.ಕೆ.ಶಿವಕುಮಾರ್ ಡಿಸಿಎಂ ವಿಜಯೇಂದ್ರ ಸದನದಲ್ಲಿ ಇಲ್ಲದೇ ಇರುವಾಗ ಸಚಿವ ಪ್ರಿಯಾಂಕ್ ಖರ್ಗೆ 150 ಕೋಟಿ ರೂ. ಆಮಿಷ ಆರೋಪ ಮಾಡಿದ್ದಾರೆ. ಈ ವಿಷಯ ಪ್ರಸ್ತಾಪಿಸುವ ಮುನ್ನ ಸಚಿವರು ಸ್ಪೀಕರ್ ಕಚೇರಿಯಲ್ಲಿ ಈ ಬಗ್ಗೆ ಸೂಚನಾಪತ್ರ ಕೊಟ್ಟಿದ್ದರೇ? | ಆರ್. ಅಶೋಕ್ ಪ್ರತಿಪಕ್ಷ ನಾಯಕ ವಕ್ಪ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದು ಕಾಂಗ್ರೆಸ್ ನಾಯಕರಲ್ಲ, ಅವರದೇ ಪಕ್ಷದ ವಕ್ತಾರರು ಹಾಗೂ ಅವರ ಸರ್ಕಾರ ನೇಮಕ ಮಾಡಿದ್ದ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ. ವಕ್ಪ್ ವಿಚಾರದಲ್ಲಿ ಮಾತನಾಡುವ ಬಿಜೆಪಿ ಇದುವರೆಗೂ ಯಾವುದೇ ದಾಖಲೆಯನ್ನು ನೀಡಿಲ್ಲ. | ಪ್ರಿಯಾಂಕ್ ಖರ್ಗೆ ಸಚಿವ ಸಿಎಂ ಮೇಲೆ ಅನ್ವರ್ ಮಾಣಿಪ್ಪಾಡಿ 150 ಕೋಟಿ ರೂ. ಆಮಿಷದ ಆರೋಪ ಮಾಡಿದ್ದು, ಮುಡಾ ಹಗರಣ ಮರೆಮಾಚಲು ಆರೋಪವನ್ನು ವಿಜಯೇಂದ್ರ ಮೇಲೆ ಹಾಕುತ್ತಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. | ಕೆ.ಎಸ್. ಈಶ್ವರಪ್ಪ ಮಾಜಿ ಡಿಸಿಎಂ https://www.vijayavani.net/syria-rebels-reveals-bashar-assad-photos