

ಶಿವಮೊಗ್ಗ: ಕೆಲವು ಇಲಾಖೆಗಳಲ್ಲಿ ಉತ್ತಮ ಪ್ರಗತಿಯಾಗಿದೆ. ಇನ್ನು ಕೆಲವು ಇಲಾಖೆಗಳ ಕಾರ್ಯವೈಖರಿಗೆ ವೇಗ ಸಿಗಬೇಕಿದೆ. ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ತಿಳಿಸಿದರು.
ಶನಿವಾರ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮಾರ್ಚ್ ಅಂತ್ಯದೊಳಗೆ ಎಲ್ಲ ಇಲಾಖೆಗಳಲ್ಲೂ ಶೇ.100 ಪ್ರಗತಿಯಾಗಬೇಕು. ಬಿಡುಗಡೆಯಾಗಿರುವ ಅನುದಾನ ಆರ್ಥಿಕ ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಮರಳುವುದನ್ನು ತಪ್ಪಿಸಬೇಕು. ಅನುದಾನದ ಸದ್ಬಳಕೆಯಾಗಬೇಕು ಎಂದು ಹೇಳಿದರು.
ಸರ್ಕಾರದ ಯೋಜನೆಗಳು, ಬಿಡುಗಡೆಯಾದ ಅನುದಾನ ಅರ್ಹರಿಗೆ ಸಿಗುವಂತಾಗಬೇಕು. ಮುಖ್ಯವಾಗಿ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಮಾನದಂಡ ಪಾಲನೆಯಾಗಬೇಕು. ಅರ್ಹರನ್ನು ಆಯ್ಕೆ ಮಾಡಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಬೇಕು ಎಂದರು.
ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನಿಗಾವಹಿಸಬೇಕು. ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಠಿಕಾಂಶಯುಕ್ತ ಆಹಾರ ಸಿಗುವಂತೆ ನೋಡಿಕೊಳ್ಳಬೇಕು. ಹಾಸ್ಟೆಲ್‌ಗಳಲ್ಲಿ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ನೀಡಬೇಕು. ಹಾಸ್ಟೆಲ್ ಕಟ್ಟಡದಲ್ಲಿ ಸ್ಥಳಾವಕಾಶ ಸಿಗದೆ ಇದ್ದರೆ ಬಾಡಿಗೆ ಕಟ್ಟಡವನ್ನು ಗುರುತಿಸಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್ ಉಪಸ್ಥಿತರಿದ್ದರು.