

ಶಿವಮೊಗ್ಗ: ಪುಸ್ತಕಗಳು ಮತ್ತು ದಿನಪತ್ರಿಕೆಗಳ ಅಧ್ಯಯನದಲ್ಲಿ ಯುವ ಸಮೂಹ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಿಂದ ಗುರುವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ಸಂಘ, ಕ್ರೀಡಾ ವೇದಿಕೆ, ಭಾರತ ಸೇವಾದಳ, ಎನ್‌ಎಸ್‌ಎಸ್ ಘಟಕ, ರೋವರ್, ರೇಂಜರ್ಸ್, ರೆಡ್‌ಕ್ರಾಸ್ ಕ್ಲಬ್ ಉದ್ಘಾಟಿಸಿ ಮಾತನಾಡಿ, ಜ್ಞಾನದ ನಿರಂತರ ಜ್ಯೋತಿ ಮನಗಳಲ್ಲಿ ಬೆಳಗಲಿ. ಶಿಕ್ಷಕ ಸಹ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಧುನಿಕ ಕಾಲಘಟ್ಟದಲ್ಲಿ ಜೀವನ ಮೌಲ್ಯ ಕಳೆದುಕೊಂಡಿದ್ದೇವೆ. ಅಜ್ಜಿ ಮನೆ ಸಂಭ್ರಮ ಪಡೆಯದೆ, ಬೇಸಿಗೆ ಶಿಬಿರಕ್ಕೆ ಸೀಮಿತ ಆಗಿದ್ದೇವೆ. ಬಾಹ್ಯ ಸೌಂದರ್ಯಕ್ಕಿಂತ ಮಾಡುವ ಕೆಲಸ ಮತ್ತು ವ್ಯಕ್ತಿತ್ವದ ಮೂಲಕ ಆಂತರ್ಯದ ಸೌಂದರ್ಯ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಿವಿಧ ವಿದ್ಯಾರ್ಥಿ ವೇದಿಕೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಅರ್ಹತೆ ಇದ್ದಲ್ಲಿ ಒಳ್ಳೆ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅದೃಷ್ಟದಿಂದ ಬಂದಿದ್ದು ಅಹಂಕಾರ ನೀಡಿದರೆ, ಕಷ್ಟಪಟ್ಟು ಸಂಪಾದಿಸಿದ್ದು ಆತ್ಮತೃಪ್ತಿ ನೀಡುತ್ತದೆ. ಪ್ರತಿಭೆ ಮತ್ತು ರೂಪ ದೇವರ ಕೊಡುಗೆ. ಕೀರ್ತಿ ಮನುಷ್ಯನ ಸೃಷ್ಟಿ. ಅದರೆ ವ್ಯಕ್ತಿತ್ವ ಮತ್ತು ಅಹಂಕಾರ ನಮ್ಮ ಸೃಷ್ಟಿ. ದೃಷ್ಟಿ ಚೆನ್ನಾಗಿದ್ದರೆ ಸೃಷ್ಟಿಯೂ ಚೆನ್ನಾಗಿರುತ್ತದೆ ಎಂದರು.
ದ್ವಿತೀಯ ಪಿಯು ಪರೀಕ್ಷೆಯಲ್ಲಿ 572 ಅಂಕ ಪಡೆದ ವಿದ್ಯಾರ್ಥಿ ಇ.ಜಿ.ಸಮರ್ಥ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಕೆ.ಅಂಜನಮೂರ್ತಿ, ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಎನ್‌ಇಎಸ್ ನಿರ್ದೇಶಕ ಎಚ್.ಸಿ.ಶಿವಕುಮಾರ್ ಇತರರಿದ್ದರು.