

ಶಿವಮೊಗ್ಗ: ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲದ ಕಾರಣ ಬೇಡಿಕೆಗೆ ತಕ್ಕಷ್ಟು ರಕ್ತ ಸಿಗುವುದಿಲ್ಲ. ಹೀಗಾಗಿ ಯುವಜನರು ರಕ್ತದಾನದ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ಎಸ್‌ಆರ್‌ಎನ್‌ಎಂ ಕಾಲೇಜಿನ ಪ್ರಾಚಾರ್ಯ ಡಾ. ಕೆ.ಎಲ್.ಅರವಿಂದ ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನದ ಅಂಗವಾಗಿ ಎಸ್‌ಆರ್‌ಎನ್‌ಎಂ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಹಾಗೂ ರೆಡ್‌ಕ್ರಾಸ್ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ರಕ್ಷಿಸಬಹುದು ಎಂದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನದಿಂದ ಹೃದಯಾಘಾತ ಸಂಭವ ಕಡಿಮೆಯಾಗುತ್ತದೆ. ದೇಹದ ಕೊಬ್ಬಿನ ಅಂಶ ಹೊರಹೋಗುವುದರಿಂದ ಸದಾ ಲವಲವಿಕೆಯಿಂದ ಇರಬಹುದು ಎಂದು ಹೇಳಿದರು.
ರಕ್ತದಾನಿ ಧರಣೇಂದ್ರ ದಿನಕರ್, ಎನ್‌ಎಸ್‌ಎಸ್ ಘಟಕದ ಲಕ್ಷ್ಮಣ, ಕೆ.ಮಂಜುನಾಥ, ಯುವ ರೆಡ್‌ಕ್ರಾಸ್ ಘಟಕದ ಡಾ. ಕೆ.ಎಸ್.ನಾಗರಾಜ, ಉಪನ್ಯಾಸಕರಾದ ಡಾ. ಎಸ್.ಮುಕುಂದ, ಡಾ. ಟಿ.ಆರ್.ಪ್ರಶಿತ್ ಕೇಕುಡ, ಶಿವಮೊಗ್ಗ ರೆಡ್‌ಕ್ರಾಸ್ ನಿರ್ದೇಶಕ ಆರ್.ಗಿರೀಶ್, ಉಮಾ ಸೋಮಶೇಖರ್, ನಂದಿತಾ ಇತರರಿದ್ದರು.