ಜನರಲ್ಲಿ ರಾಮಭಾವ ಮೂಡಿಸುವ ಕಾರ್ಯ ನಡೆಯಲಿ

HUN-DEC-16-1(AKSHATE FROM AYODHYA)
Published on

ಹುಣಸೂರು: ಅಯೋಧ್ಯೆಯ ಶ್ರೀರಾಮಮಂದಿರದ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ರಾಮಭಾವವನ್ನು ಜನರಲ್ಲಿ ಮೂಡಿಸುವ ಕಾರ್ಯ ನಡೆಯಲಿ ಎಂದು ಮೈಸೂರಿನ ಮಾತಾ ಅಮೃತಮಯಿ ಚೈತನ್ಯ ಸ್ವಾಮೀಜಿ ಸಲಹೆ ನೀಡಿದರು.


ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶನಿವಾರ ಆಯೋಜಿಸಿದ್ದ ಅಯೋಧ್ಯೆ ಶ್ರೀರಾಮಮಂದಿರದ ಅಕ್ಷತೆಯನ್ನು ಭಕ್ತರಿಗೆ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಶ್ರೀರಾಮಚಂದ್ರನ ಆದರ್ಶಗುಣಗಳನ್ನು ಅಳವಡಿಸಿಕೊಳ್ಳುವ ಮತ್ತು ಶ್ರೀರಾಮಸ್ಮರಣೆ ಇಂದಿನ ಅಗತ್ಯವಾಗಿದೆ. ಶ್ರೀರಾಮಮಂದಿರದ ಅಕ್ಷತೆ ಶ್ರೀರಾಮಸ್ಮರಣೆಯ ಸೇತುವೆಯಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ ಮಾಡುತ್ತಿದೆ. ಭಾರತೀಯ ಆಚಾರ, ವಿಚಾರ ಮತ್ತು ಸಂಸ್ಕೃತಿಗೆ ವಿದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇಂದಿನ ಮಕ್ಕಳು ಮತ್ತು ಯುವ ಸಮೂಹ ರಾಮ ಜಪ ಕಲಿಯುವತ್ತ ಗಮನಹರಿಸಬೇಕು ಎಂದರು.


ಆರ್‌ಎಸ್‌ಎಸ್ ಕಾರ್ಯವಾಹಕ ವೆಂಕಟರಮಣ ರಾಮನ್ ಮಾತನಾಡಿ, ರಾಮಮಂದಿರ ನಿರ್ಮಾಣವಾಗಬೇಕೆಂದು ಸಾವಿರಾರು ಜನರ ಕನಸಾಗಿತ್ತು, ಆ ಸಂಕಲ್ಪದ ಮುಂದಿನ ಭಾಗವಾಗಿ ಸುಂದರ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಶ್ರೀರಾಮಮಂದಿರವು ನಮ್ಮೆಲ್ಲರ ಅಸ್ಮಿತೆ ಮತ್ತು ಹೆಮ್ಮೆಯಾಗಿದೆ ಎಂದರು.


ಮೈಸೂರು ವಿಭಾಗದ ಮಾತೃಶಕ್ತಿಯ ಭಾರತಿ ವಿಶ್ವ ಹಿಂದು ಪರಿಷತ್ತಿನ ಮಂಜುನಾಥ್, ಸೇವಾ ಪ್ರಮುಖ್ ಕುಂಟೇಗೌಡ, ವಿಶ್ವ ಹಿಂದು ಪರಿಷತ್‌ನ ವಿ.ಎನ್.ದಾಸ್ ಸೇರಿದಂತೆ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ತಿ.ನರಸೀಪುರ ಮತ್ತಿತರರು ತಾಲೂಕುನಿಂದ ಪದಾಧಿಕಾರಿಗಳು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net