

ಸೊರಬ: ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆ ಮಾಡಿರುವ ಸಾಧಕರು, ಆರ್ಥಿಕ ಸ್ಥಿತಿವಂತರು ನೆರವು ನೀಡಿದರೆ ಸರ್ಕಾರಿ ಶಾಲೆಗಳ ಭವಿಷ್ಯ ಬದಲಿಸಬಹುದು. ಇದಕ್ಕಾಗಿ ಕುಬಟೂರು ಗ್ರಾಮದ ಸರ್ಕಾರಿ ಶಾಲೆಯಿಂದ ಮುನ್ನುಡಿ ಬರೆಯಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ಶುಕ್ರವಾರ ತಾಲೂಕಿನ ಕುಬಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 10 ಲಕ್ಷ ರೂ. ಮೌಲ್ಯದ ಪರಿಕರ ದೇಣಿಗೆ ನೀಡಿ ಮಾತನಾಡಿ, ರಾಜ್ಯದಲ್ಲಿ ಕೋಟ್ಯಂತರ ರೂ. ದೇಣಿಗೆ ಬರುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅಕ್ಷರ ಕಲಿಸಿದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಸರ್ಕಾರದ ಜತೆ ಎಲ್ಲರೂ ಕೈಜೋಡಿಸಬೇಕು. ಇದರಿಂದ ಸರ್ಕಾರಿ ಶಾಲೆಗಳ ಸುಧಾರಣೆ ಕಾಣಲು ಸಾಧ್ಯ. ಮುಂದಿನ ಒಂದು ವರ್ಷದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ 1 ಸಾವಿರ ಕೋಟಿ ರೂ. ದೇಣಿಗೆ ಹರಿದು ಬರುವ ನಿರೀಕ್ಷೆ ಇದೆ ಎಂದರು.
ಎಲ್ಲ ಶಾಲೆಗಳಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಕ್ಕಳಿಗೆ ಕನ್ನಡ ಕಲಿಸಬೇಕು. ಶಿಕ್ಷಕರು ಸಹ ಕನ್ನಡ ಭಾಷೆಯಲ್ಲಿ ಪಕ್ವವಾಗಬೇಕು. ಗ್ರಾಮಾಂತರ ಭಾಗ ಸೇರಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಂಜೆ ತರಗತಿ ನಡೆಸಲು ಶಿಕ್ಷಕರು ಮುಂದಾಗಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹಕ್ಕು ಪಾಲಕರಿಗಿಲ್ಲ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ಸುನೀತಾ ಮಾತನಾಡಿ, ಕುಬಟೂರು ಸರ್ಕಾರಿ ಶಾಲೆಗೆ ಶತಮಾನದ ಇತಿಹಾಸವಿದೆ. ಸ್ವಾತಂತ್ರೃದ ಬಳಿಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಗ್ರಾಮವನ್ನು ಅಗ್ರಸ್ಥಾನಕ್ಕೆ ಏರಿಸಿದರು ಎಂದರು.
ನೂತನ ಶಾಲಾ ರಂಗಮಂದಿರವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಪತ್ನಿ ಅನಿತಾ ಮಧು ಬಂಗಾರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ, ಸೂರ್ಯ, ಬಿಇಒ ಪುಷ್ಪಾ, ಶಿಕ್ಷಕರಾದ ಸುನೀತಾ, ಶೈಲಾ, ಎಂ.ಡಿ.ಶೇಖರ್, ದಯಾನಂದ ಕಲ್ಲೇರ್, ಸದಾನಂದ ಗೌಡ, ನಾಗರಾಜ ಗೌಡ, ಶಿವ, ಪ್ರೇಮ್‌ಕುಮಾರ್, ಎಚ್.ಗಣಪತಿ, ನಾಗರಾಜ ಇತರರಿದ್ದರು.