ಸಂಚಾರ ಸುಗಮವಾಗಲಿ; ರಸ್ತೆ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು

road
Published on

ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿಯೇ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮೇಲಿಂದ ಮೇಲೆ ಛಾಟಿ ಬೀಸಿಕೊಳ್ಳುತ್ತಿರುವುದು ಹಾಗೂ ಪಾಲಿಕೆ ಮುಖ್ಯ ಆಯುಕ್ತರು, ಮುಖ್ಯ ಇಂಜಿನಿಯರ್ ಸೇರಿ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಲು ಸರ್ಕಾರಕ್ಕೆ ನಿರ್ದೇಶಿಸುವುದಾಗಿ ನ್ಯಾಯಾಂಗದಿಂದ ಎಚ್ಚರಿಕೆಗೂ ಒಳಗಾಗಿರುವುದು ಕಾರ್ಯಾಂಗಕ್ಕೆ ಶೋಭೆ ತರುವ ಸಂಗತಿಯಲ್ಲ.

ಬೆಂಗಳೂರು ವ್ಯಾಪ್ತಿಯಲ್ಲಿ 397 ಕಿ.ಮೀ ರಸ್ತೆ ದುರಸ್ತಿಗೆ ಕಾರ್ಯಾದೇಶ ಆಗಿದ್ದು, ಉಳಿದ 576 ಕಿ.ಮೀ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಆದರೆ, ಈಗ ಮುಂಗಾರು ಆರಂಭವಾಗಿರುವುದರಿಂದ ಮಳೆಯ ನಡುವೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೊಳ್ಳುವುದು ಕಷ್ಟಕರ. ಒಂದು ವೇಳೆ ತ್ವರಿತ ಗತಿಯಲ್ಲಿ ಕಾಮಗಾರಿ ಕೈಗೊಂಡರೂ ಗುಣಮಟ್ಟ ಕಾಪಾಡಿಕೊಳ್ಳುವುದು ಸುಲಭವಲ್ಲ. ಹಾಗಂತ, ಮಳೆಗಾಲದ ನಂತರ ಕಾಮಗಾರಿ ಕೈಗೊಂಡರೆ, ನೀರಿನಲ್ಲಿ ತೆಗ್ಗುಗಳು ಗೋಚರಿಸದೆ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವಘಡಗಳಾಗಿ ಸಾವು- ನೋವು ಉಂಟಾದರೆ ಹೊಣೆ ಯಾರು ಎಂಬ ಪ್ರಶ್ನೆ ಕೂಡ ಉದ್ಭವಿಸುತ್ತದೆ. ನಿಯಮಿತ ಕಾಮಗಾರಿಗಳನ್ನು ಸರಿಯಾದ ಸಮಯದಲ್ಲಿ ಮಾಡಿದರೆ ಇಂಥ ಇಕ್ಕಟ್ಟಿನಿಂದ ಪಾರಾಗಬಹುದು. ಬಿಬಿಎಂಪಿಗೆ ಹಣಕಾಸಿನ ಸಮಸ್ಯೆ ಇರಬಹುದಾದರೂ ಸರ್ಕಾರದ ಮಟ್ಟದಲ್ಲಿ ಅದನ್ನು ಬಗೆಹರಿಸಿಕೊಳ್ಳಬೇಕೆ ವಿನಾ ಕಾಮಗಾರಿ ಮೇಲೆ ಪರಿಣಾಮ ಆಗಬಾರದು.

ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಕೂಡ ಬಹುತೇಕ ರಸ್ತೆಗಳ ಪರಿಸ್ಥಿತಿ ಬಹಳ ಉತ್ತಮವಾಗೇನು ಇಲ್ಲ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗಳು ಈಗ ವೇಗವಾಗಿ ಸಾಗುತ್ತಿವೆಯೆಂಬುದು ನಿಜ. ಆದರೆ, ನಿರ್ವಣಗೊಂಡ ನಂತರ ಕೆಲವೆಡೆ ನಿರಂತರ ನಿರ್ವಹಣೆ ಸೂಕ್ತ ರೀತಿಯಲ್ಲಿ ಜರುಗುತ್ತಿಲ್ಲ. ದೊಡ್ಡ ರಸ್ತೆಗಳಲ್ಲಿ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುವುದು ಸಹಜವಾಗಿದ್ದು, ಇಂತಹ ರಸ್ತೆಗಳು ಹಾಳಾಗಿದ್ದರೆ ಅಪಘಾತದ ಅಪಾಯ ಜಾಸ್ತಿ. ರಾಜ್ಯ ಲೋಕೋಪಯೋಗಿ ಹಾಗೂ ಕೇಂದ್ರ ಸರ್ಕಾರದ ಭೂ ಹೆದ್ದಾರಿ ಸಚಿವಾಲಯಗಳು ಇದನ್ನೆಲ್ಲ ಸೂಕ್ತವಾಗಿ ನಿರ್ವಹಿಸುವ ಹೊಣೆಗಾರಿಕೆ ನಿಭಾಯಿಸಬೇಕಿದೆ.

ಇನ್ನು, ರಸ್ತೆ ಸುರಕ್ಷೆ ಕ್ರಮಗಳನ್ನು ಕೈಗೊಂಡರೆ ಭಾರತದಲ್ಲಿ ಪ್ರತಿ ವರ್ಷ 30 ಸಾವಿರ ಜೀವಗಳನ್ನು ಉಳಿಸಬಹುದು ಎಂದು ಲ್ಯಾನ್ಸೆಟ್ ಜರ್ನಲ್​ನಲ್ಲಿ ಪ್ರಕಟಗೊಂಡ ಅಧ್ಯಯನ ವರದಿಯೊಂದು ತಿಳಿಸಿರುವುದು ಗಮನಾರ್ಹ. ವೇಗದ ಚಾಲನೆ, ಕುಡಿದು ವಾಹನ ಓಡಿಸುವುದು, ಹೆಲ್ಮೆಟ್ ಧರಿಸದಿರುವುದು ಹಾಗೂ ಸೀಟ್ ಬೆಲ್ಟ್ ಹಾಕದಿರುವುದು- ಇವು ನಾಲ್ಕು ಅಪಾಯಕಾರಿ ಅಂಶಗಳಾಗಿವೆ ಎಂದು ವರದಿ ಹೇಳಿದೆ. ಭಾರತದಲ್ಲಿ ಒಂದು ವರ್ಷದಲ್ಲಿ ಸುಮಾರು 4.5 ಲಕ್ಷ ಅಪಘಾತಗಳು ಸಂಭವಿಸಿ, ಅಂದಾಜು 1.5 ಲಕ್ಷ ಜನ ಸಾವನ್ನಪು್ಪತ್ತಾರೆ. ರಸ್ತೆ ಅಪಘಾತದಲ್ಲಿ ಸಾವನ್ನಪು್ಪವವರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಲ್ಯಾನ್ಸೆಟ್ ಜರ್ನಲ್ ವರದಿ ಸೂಚಿಸಿರುವ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಅಪಘಾತಗಳಿಂದಾಗುವ ಸಾವು-ನೋವು ಗಳನ್ನು ತಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಸಹ ಪ್ರಮುಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net