ಶಿಕ್ಷಕರು ಬೋಧನಾ ಕೌಶಲ ವೃದ್ಧಿಸಿಕೊಳ್ಳಲಿ

akram psha
Published on

ಕೋಲಾರ: ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಶಿಕ್ಷಕರು ಬೋಧನಾ ಕೌಶಲ ವೃದ್ಧಿಸಿಕೊಂಡು, ಶಾಲಾ ಹಂತದಲ್ಲೇ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು. ವಿಶೇಷ ತರಗತಿಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸಿದರು.

ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕಳೆದ ಸಾಲಿಗಿಂತ ಫಲಿತಾಂಶ ಕುಸಿತವಾಗಲು ಕಾರಣ ಹುಡುಕಿ, ಅದನ್ನು ಸರಿಪಡಿಸಿಕೊಳ್ಳಲು ಮಾಡಬೇಕಾದ ಕೆಲಸಗಳ ಬಗ್ಗೆ ಕ್ರಿಯಾಯೋಜನೆಯನ್ನು ಶಾಲಾ ಹಂತದಲ್ಲೇ ತಯಾರಿಸಿಕೊಳ್ಳಿ ಎಂದು ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸಿದರು. ಅಧಿಕಾರಿಗಳು ಸಹ ಮಿಂಚಿನ ಸಂಚಾರ ನಡೆಸಿ ಶಾಲೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತು ದೃಢಪಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯ ಫಲಿತಾಂಶ ಉತ್ತಮಪಡಿಸುವ ಕಾರ್ಯದಲ್ಲಿ ಶಿಕ್ಷಕರಲ್ಲಿ ಬದ್ಧತೆ ಮೂಡಬೇಕು. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತಿಸಿ, ಅದರಂತೆ ನಿಮ್ಮ ಬೋಧನಾ ವಿಧಾನದಲ್ಲಿ ಬದಲಾವಣೆ ತಂದುಕೊಳ್ಳಿ, ಮುಖ್ಯಶಿಕ್ಷಕರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.
ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಮಕ್ಕಳ ಕಲಿಕೆಗೆ ಸಹಕಾರಿಯಾಗಲು ಸಂಪನ್ಮೂಲ ಪುಸ್ತಕಗಳು, ಮಾದರಿ ಪ್ರಶ್ನೆಪತ್ರಿಕೆಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಡಯಟ್​ ಪ್ರಾಂಶುಪಾಲರಾದ ಕೆ.ಎನ್​.ಜಯಣ್ಣ ಮತ್ತು ಡಯಟ್​ ಹಿರಿಯ ಉಪನ್ಯಾಸಕ ರಾಘವೇಂದ್ರ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳಾದ ವೀಣಾ, ಸಗೀರಾ ಅಂಜುಂ, ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಮುನಿಲಕ್ಷ$್ಮಯ್ಯ, ಮುನಿವೆಂಕಟರಾಮಾಚಾರಿ, ಚಂದ್ರಕಲಾ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್​.ಅಶೋಕ್​, ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಮುಖ್ಯಶಿಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ತಾಹೇರಾ ನುಸ್ರತ್​, ಚಂದ್ರಪ್ಪ ಸೇರಿದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.

ಶಾಲಾ ಆಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳಿ
ಕಾರ್ಯಕ್ರಮದಲ್ಲಿ ಕೆಲ ಶಾಲೆಗಳಿಗೆ ಇ&-ಖಾತೆ ದಾಖಲೆಗಳನ್ನು ವಿತರಿಸಿದ ಜಿಲ್ಲಾಧಿಕಾರಿಗಳು, ಶಾಲೆಗೆ ಸಂಬಂಧಿಸಿದ ಆಸ್ತಿ ಶಾಲೆಯದ್ದೇ ಅಲ್ಲವೇ ಎಂಬುದನ್ನು ಎಲ್ಲ ಮುಖ್ಯಶಿಕ್ಷಕರು ಖಚಿತಪಡಿಸಿಕೊಂಡು, ಇ -ಖಾತೆ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಂತರ ವಿನಾಕಾರಣ ವಿವಾದಗಳಿಗೆ ಅವಕಾಶ ನೀಡಬಾರದು. ಈಗಾಗಲೇ ಜಿಲ್ಲೆಯ ಶಾಲೆಗಳ ಇ&-ಖಾತೆ ಮಾಡಿಕೊಡಲು ಪಿಡಿಒಗಳಿಗೆ ಸೂಚಿಸಲಾಗಿದೆ. ಅದರಂತೆ ಕ್ರಮವಹಿಸಲಾಗಿದೆ. ಉಳಿದ ಶಾಲೆಗಳ ಮುಖ್ಯಶಿಕ್ಷಕರು ಜವಾಬ್ದಾರಿ ವಹಿಸಿ ಇ&-ಖಾತೆ ಮಾಡಿಸಿ, ಅದರ ಪ್ರತಿಯನ್ನು ಶಾಲೆಯ ಗೋಡೆಗೆ ನೇತು ಹಾಕಿ ಎಂದು ಸೂಚಿಸಿದರು. ಪ್ರಸ್ತುತ ಸಾಲಿನಲ್ಲಿ ಕಳಪೆ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಅಂತಹ ಶಾಲೆಗಳ ಬಗ್ಗೆ ಹೆಚ್ಚಿನ ಗಮನಹರಿಸಲು ಡಿಡಿಪಿಐಗೆ ಸೂಚಿಸಿದರು.

112 ಸಹಾಯವಾಣಿ ಬಳಸುವುದನ್ನು ಕಲಿಸಿ
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ಮಾತನಾಡಿ, ದೌರ್ಜನ್ಯ, ಲೈಂಕಿಕ ಕಿರುಕುಳ ಮತ್ತಿತರ ಸಮಸ್ಯೆಗಳು ಎದುರಾದಾಗ 112 ಸಹಾಯವಾಣಿ ಬಳಸುವ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿ, ಈ ಸಂಖ್ಯೆಯನ್ನು ಶಾಲೆಯಲ್ಲಿ ಹಲವು ಕಡೆ ಬರೆಸಿ. ಜತೆಗೆ ಬಾಲಕಾರ್ಮಿಕ, ಬಾಲ್ಯವಿವಾಹ ಮತ್ತಿತರ ಪಿಡುಗುಗಳ ನಿವಾರಣೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ, ನೈತಿಕ ಮೌಲ್ಯ ಬೆಳೆಸುವ ಮೂಲಕ ಅವರಲ್ಲಿ ಅಪರಾಧ ಮುಕ್ತ ಭಾವನೆ ಗಟ್ಟಿಗೊಳಿಸಬೇಕು ಎಂದು ಎಸ್ಪಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net