ಹುಣಸೂರು : ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಿ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ನಿಮ್ಮ ಅಕ್ಕ-ಪಕ್ಕದ ಗ್ರಾಮದ ಜನರಿಗೂ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಸಲಹೆ ನೀಡಿದರು.
ನಗರದ ಚಿಕ್ಕ ಹುಣಸೂರು ಆದರ್ಶ ವಿದ್ಯಾಲಯದಲ್ಲಿ ಪಂಚಾಯತ್ ರಾಜ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಂಥಾಲಯಗಳಿಗೆ ಗೋಡೆಗಳಿಲ್ಲ. ಜ್ಞಾನದಾಹಿಗೆ ಯಾವುದೇ ಗಡಿಯಿಲ್ಲ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದರೊಂದಿಗೆ ವಿದ್ಯಾರ್ಥಿಗಳು ಇತರರಿಗೂ ಪ್ರೇರಣೆ ನೀಡುವಂತಾಗಲು ಮೂರು ದಿನಗಳ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಕ್ಷರ ಜ್ಞಾನದಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಪ್ರಶ್ನಿಸುವ ಮನೋಭಾವ ಬರುವುದು ಸಾಕ್ಷರ ಸಮಾಜದಿಂದ ಮಾತ್ರ ಎನ್ನುವುದನ್ನು ಅರಿಯಬೇಕು. ಗ್ರಾಮೀಣ ಭಾಗದ ಜನರು ಹೆಚ್ಚು ಗ್ರಂಥಾಲಯಗಳ ಬಳಕೆ ಮಾಡಿಕೊಳ್ಳುವ ಮೂಲಕ ಸಾಕ್ಷರತೆಯೊಂದಿಗೆ ಸುಶಿಕ್ಷಿತರೂ ಆಗಬೇಕೆನ್ನುವುದೇ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತರಬೇತಿ ಹೊಂದಿದ ಶಿಕ್ಷಕರಿಂದ ಕಾರ್ಯಾಗಾರ ನಡೆಸಲಾಗುವುದು. ಆತಿಥ್ಯ ವಹಿಸಿರುವ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಣಸೂರು ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಆದರ್ಶ ವಿದ್ಯಾಲಯದಿಂದ 80 ವಿದ್ಯಾರ್ಥಿಗಳು ಹಾಗೂ ಆತಿಥೇಯ ಗ್ರಾಮ ಪಂಚಾಯಿತಿಯಾಗಿರುವ ಗುರುಪುರ ಗ್ರಾಪಂ ವ್ಯಾಪ್ತಿ ಯಿಂದ 20 ವಿದ್ಯಾರ್ಥಿಗಳನ್ನು ಆಯ್ದುಕೊಂಡು ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಳು ತಯಾರಿಸಿರುವ ಕಲಿಕೋಪಕರಣಗಳು ಮತ್ತು ಬೋಧನೋಪಕರಣಗಳ ವಸ್ತು ಪ್ರದರ್ಶನವು ಶುಕ್ರವಾರ ನಡೆಯಲಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀಧರ್, ಆದರ್ಶ ಶಾಲೆಯ ಮುಖ್ಯಶಿಕ್ಷಕ ಚಂಧ್ರಮೋಹನ್ ಸೇರಿದಂತೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.