ವಿದ್ಯಾರ್ಥಿಗಳು ಹಕ್ಕುಗಳ ಜತೆ ಕರ್ತವ್ಯ ಪಾಲಿಸಲಿ

klr kanunu
ಕೋಲಾರದ ಕೋರ್ಟ್ ವೃತ್ತದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಚಾಲನೆ ನೀಡಿದರು.
Published on

ಕೋಲಾರ: ಮನುಷ್ಯನ ಜೀವನಕ್ಕೆ ಆಹಾರ, ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದೆ. ದೈನಂದಿನ ಬದುಕಿಗೆ ಕನಿಷ್ಠ ಕಾನೂನಿನ ಅರಿವು ಅಗತ್ಯವಿದೆ. ಪಾಲಕರ ಆಶಯ ಈಡೇರಿಕೆ ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತು ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯ ಪಾಲನೆಯೂ ಮುಖ್ಯ ಎಂಬುದನ್ನು ವಿದ್ಯಾರ್ಥಿನಿಯರು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ತಿಳಿಸಿದರು.

ನಗರದ ಕೋರ್ಟ್ ವೃತ್ತದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಮಾಜಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯ ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಡಿಯೇ ಬದುಕಬೇಕಾಗಿದೆ. ಕಾನೂನು ಪಾಲಿಸುವವರನ್ನು ಕಾನೂನು ರಕ್ಷಿಸುತ್ತದೆ. ಇತ್ತೀಚೆಗೆ ಭ್ರೂಣಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆಯಂತಹ ಅಪರಾಧಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ನೀವು ಧ್ವನಿಯೆತ್ತಬೇಕು. ಪೊಲೀಸರಿಗೆ ಮಾಹಿತಿ ನೀಡಬೇಕು. ಸಮಾಜಕ್ಕೆ ಹಾಗೂ ಯುವಪೀಳಿಗೆಗೆ ಕಂಟಕವಾಗಿರುವ ಮಾದಕ ವ್ಯಸನದಿಂದ ದೂರ ಮಾಡಲು ವಿದ್ಯಾರ್ಥಿಗಳಿಗೆ ಅರಿವು ನೀಡುವ ಕೆಲಸ ಮಾಡುತ್ತಿದ್ದು, ಕಾಲೇಜಿನ ಆವರಣದಲ್ಲಿ ಅಥವಾ ಎಲ್ಲೇ ಆಗಲಿ ಮಾದಕ ವಸ್ತುಗಳ ಸಾಗಾಟ, ಮಾರಾಟ ಕಂಡುಬAದರೆ ಪೊಲೀಸರಿಗೆ ದೂರು ನೀಡಿ ಎಂದರು.

ಗಲ್‌ಪೇಟೆ ಪಿಎಸ್‌ಐ ವಿದ್ಯಾಶ್ರೀ ಮಾತನಾಡಿ, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಽಸಲಾಗಿದೆ. ಶಾಲಾ ಕಾಲೇಜುಗಳಿಂದ 200 ಮೀ. ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸದರಿ ಕಾಯ್ದೆಯಡಿ ನಿಷೇಽಸಲಾಗಿದ್ದು, ಪ್ರತಿ ಶಾಲೆ, ಕಾಲೇಜು ಬಳಿ ನಿಷೇಧದ ಕುರಿತು ನಾಮಫಲಕ ಹಾಕುವುದು ಕಡ್ಡಾಯ. ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ಜೀವನದಲ್ಲಿ ಅಗತ್ಯ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ಬಾಲ್ಯವಿವಾಹ ಸಮಾಜಕ್ಕೆ ಕಂಟಕವಾಗಿದೆ. ಇದರ ಸಂಪೂರ್ಣ ತಡೆಗೆ ವಿದ್ಯಾರ್ಥಿ ಸಮುದಾಯದ ಸಹಕಾರ ಅಗತ್ಯವಿದೆ. ನಿಮ್ಮ ಸುತ್ತಮುತ್ತ ಬಾಲ್ಯವಿವಾಹ ಆಗುತ್ತಿದ್ದರೆ ನೀವು ಕೂಡಲೇ 1098 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಭ್ರೂಣ ಲಿಂಗ ಪತ್ತೆ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಇದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ ಎಂದರು.

ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಕುರಿತು ಅರಿವು ನೀಡಿದ್ದು, ಲಿಂಗಪತ್ತೆ ನಿಷೇಧ ಕಾಯ್ದೆ, ಬಾಲ್ಯವಿವಾಹ ನಿಷೇಧ, ಹೆಣ್ಣು ಭ್ರೂಣ ಹತ್ಯೆ ಕಾಯ್ದೆ, ಬಾಲಕಾರ್ಮಿಕ ನಿಷೇಧ ಹಾಗೂ ಮೋಟಾರ್ ವಾಹನ ಕಾಯ್ದೆಗಳ ಕುರಿತು ಅರಿವು ಮೂಡಿಸಲಾಯಿತು. ಎನ್‌ಎಎಲ್‌ಎಸ್‌ಎ ಸಹಾಯವಾಣಿ 15400 ಕುರಿತು ಮಾಹಿತಿ ನೀಡಲಾಯಿತು. ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net