ಸಂಪಾದಕೀಯ: ಶಿಕ್ಷಣದ ಗುಣಮಟ್ಟ ಹೆಚ್ಚಲಿ

photo-2-68a366558073a
Published on

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಪ್ರಮಾಣ ಕಳೆದ ಮೂರು ವರ್ಷಗಳಲ್ಲಿ 4.76 ಲಕ್ಷ ಕುಸಿತ ಕಂಡಿದೆ. ಮತ್ತೊಂದು ಕಡೆ ಖಾಸಗಿ ಶಾಲೆಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಸೋಮವಾದ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖಾಸಗಿ ಶಾಲೆಗಳಿಗೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ದಾಖಲಾತಿ 7.62 ಲಕ್ಷ ಕಡಿಮೆ ಇದೆ ಎಂಬ ಮಾಹಿತಿ ನೀಡಿದ್ದಾರೆ. ಸರ್ಕಾರಿ ಶಾಲೆಗಳ ದುಸ್ಥಿತಿಯ ವಿಷಯ ವಿಧಾನ ಪರಿಷತ್​ನಲ್ಲೂ ಪ್ರತಿಧ್ವನಿಸಿದೆ. ‘ಸರ್ಕಾರಿ ಶಾಲೆಗಳಲ್ಲಿ 36 ಸಾವಿರ ಕೊಠಡಿಗಳ ಕೊರತೆ ಇದ್ದು, ಇದರ ಹೊಣೆ ಯಾರು ಹೊರಬೇಕು? ಕೊಠಡಿಗಳ ಕೊರತೆ ಮಾತ್ರವಲ್ಲದೆ, ಶಾಲಾ ಕಟ್ಟಡಗಳು ಶಿಥಿಲವಾಗಿ ವಿದ್ಯಾರ್ಥಿಗಳು ಜೀವಭಯದಲ್ಲಿ ಅಧ್ಯಯನ ನಡೆಸಬೇಕಾದ ಸ್ಥಿತಿ ಇದೆ’ ಎಂದು ವಿರೋಧ ಪಕ್ಷಗಳ ಸದಸ್ಯರು ಗಮನ ಸೆಳೆದಾಗ, ಆಡಳಿತ ಪಕ್ಷದ ಸದಸ್ಯರೂ ಇದಕ್ಕೆ ದನಿಗೂಡಿಸಿದ್ದು, ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.

ಮೂಲಸೌಕರ್ಯಗಳ ಸ್ಥಿತಿ ಹೀಗಾದರೆ, ಶಿಕ್ಷಣದ ಗುಣಮಟ್ಟವಂತೂ ದಯನೀಯ. ಶಿಕ್ಷಕರನ್ನು ಅನ್ಯ ಕಾರ್ಯಗಳಿಗೆ ಪದೇಪದೆ ನಿಯೋಜಿಸುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಎಷ್ಟೋ ಕಡೆಗಳಲ್ಲಿ ಪ್ರೌಢ ಶಾಲೆಯ ಮಕ್ಕಳಿಗೆ ಕನ್ನಡ ಪದಗಳ ಓದು-ಬರಹ ಬರುವುದಿಲ್ಲ. ಗಣಿತ, ವಿಜ್ಞಾನವಂತೂ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಭಾಗದಲ್ಲಿ ಶಿಕ್ಷಕರ ಕೊರತೆ ದೊಡ್ಡಪ್ರಮಾಣದಲ್ಲಿದೆ. ರಾಜ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 46,776 ಶಾಲೆಗಳಿವೆ. ಅಂದರೆ, ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವ ಶಕ್ತಿ ಈ ಶಾಲೆಗಳಿಗೆ ಇದೆ. ಆದರೆ, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಸೇರಿದಂತೆ ಸಮಸ್ಯೆಗಳಿಂದಲೇ ಈ ಶಾಲೆಗಳು ನಲುಗುತ್ತಿರುವಾಗ ಶಿಕ್ಷಣದ ಗುಣಮಟ್ಟ ಸುಧಾರಿಸುವುದು ಹೇಗೆ? ಅದಕ್ಕಾಗಿ, ಬಡ ಪಾಲಕರು ಸಹ ಸಾಲಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂಥ ಸ್ಥಿತಿ ಸೃಷ್ಟಿಯಾಗಿದೆ.

ಖಾಸಗಿ ರಂಗದವರು ಕೂಡ ಸಿಎಸ್​ಆರ್ ಅಡಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಅಲ್ಲದೆ, 21,841 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ದತ್ತು ನೀಡಲಾಗಿದೆ ಎಂದು ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ವಿಸ್ತರಣೆಯ ಜತೆಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಮತ್ತು ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳನ್ನು ಸಿದ್ಧಪಡಿಸದಿದ್ದಲ್ಲಿ ಮುಂದಿನ ದಿನಗಳು ಕಷ್ಟಕರ. ಸರ್ಕಾರಿ ಶಾಲೆಗಳನ್ನು ಜ್ಞಾನ ಪ್ರಸರಣದ ಸಶಕ್ತ ಕೇಂದ್ರಗಳನ್ನಾಗಿಸಬೇಕು. ಈ ಕುರಿತು ಪ್ರಬಲ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಲ್ಲಿ ಸರ್ಕಾರಿ ಶಾಲೆಗಳತ್ತ ಮಕ್ಕಳು ಖುಷಿಯಿಂದ ಬರುವುದರಲ್ಲಿ ಅನುಮಾನವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net