

ಅರಸೀಕೆರೆ ಗ್ರಾಮಾಂತರ: ಗೋವುಗಳ ಸಂಖ್ಯೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ದೇಸಿ ಹಸುಗಳ ಸಂರಕ್ಷಣೆ ಪ್ರತಿಯೊಬ್ಬ ಭಾರತೀಯನ ರಾಷ್ಟ್ರೀಯ ಪ್ರಜ್ಞೆ ಆಗಬೇಕು. ಗೋ ಸಂಪತ್ತು ರಾಷ್ಟ್ರ ಸಂಪತ್ತು ಆಗಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಅರಸೀಕೆರೆ ಮತ್ತು ಕಡೂರು ತಾಲೂಕಿನ ಯಳನಾಡು ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಲೂಕಿನ ಗೀಜಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಮದ ಗೋಶಾಲೆಯಲ್ಲಿ ಭಾರತೀಯ ಗೋ ಪರಿವಾರ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಗೋಮಾತೆ ಮನುಷ್ಯನ ಎರಡನೇ ತಾಯಿ ಇದ್ದಂತೆ. ಗೋವಿನ ಹಾಲು ಅಮೃತ. ತಾಯಿಯ ಹಾಲು ಮಗುವಿಗೆ ಎಷ್ಟು ಶ್ರೇಷ್ಠವೋ ಅದೇ ರೀತಿ ಹಸುವಿನ ಹಾಲು ಕುಡಿದರೆ ಮನುಷ್ಯನನ್ನು ಕೊನೆಯವರೆಗೂ ಕಾಯುತ್ತದೆ. ಈ ನಿಟ್ಟಿನಲ್ಲಿ ಮನೆಗೊಂದು ಮರ ಬೆಳೆಸುವ ಜಾಗೃತಿ ಮೂಡಿಸುವ ಜತೆಗೆ ಮನೆಗೊಂದು ದೇಸಿ ಹಸುವನ್ನು ಸಾಕುವ ರಾಷ್ಟ್ರೀಯ ಪ್ರಜ್ಞೆ ಮೂಡಿಸುವುದೂ ಬಹು ಮುಖ್ಯವಾಗಿದೆ ಎಂದರು.
ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಮದ ಗೋಶಾಲೆಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಗೋ ಪೂಜೆ ನೆರವೇರಿಸಲಾಯಿತು. ರಾಜ್ಯದ ವಿವಿಧ ಭಾಗಗಳಲ್ಲಿ ಗೋ ಸಂಪತ್ತುಗಳ ರಕ್ಷಣೆಯಲ್ಲಿ ತೊಡಗಿರುವ ಕೆಲವರನ್ನು ಹಾಗೂ ತಾಲೂಕಿನಲ್ಲಿ ಹೆಚ್ಚೆಚ್ಚು ಗೋವುಗಳನ್ನು ಸಾಕಿರುವ ರೈತರು ಮತ್ತು ತಾಲೂಕಿನ ಕೆಲವು ಪ್ರಗತಿಪರ ರೈತ ಕುಟುಂಬಗಳು ಮತ್ತು ಪ್ರಾಣಿ ಪ್ರಿಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ಶ್ರೀಕೃಷ್ಣ-ರಾಧೆ ವೇಷಧಾರಿ ಚಿಣ್ಣರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಎಲ್ಲರ ಗಮನ ಸೆಳೆದರು.
ಭಾರತೀಯ ಗೋ ಪರಿವಾರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುಕರಾಜ್ ಪಾಟೀಲ್, ಕಸ್ತೂರಬಾ ಗೋ ಪರಿವಾರದ ಅಧ್ಯಕ್ಷ ಜೈರಾಮ್, ಪರಸ್ ಜೈನ್, ರಾಜು, ಪದಾಧಿಕಾರಿಗಳು, ಪ್ರಾಣಿ ಪ್ರಿಯರು, ಸಾರ್ವಜನಿಕರು ಇದ್ದರು.