

ಕೋಲಾರ: ಕಲಾವಿದರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಸ್ಥಾಪನೆಯಾದ ಆದಿಮ ಸಂಸ್ಥೆಯ ಪ್ರಯತ್ನಗಳು ಮತ್ತಷ್ಟು ಸಾಕಾರಗೊಳ್ಳಲಿ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.
ತಾಲೂಕಿನ ತೆರಹಳ್ಳಿ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಡಾ.ಸಿದ್ದಲಿಂಗಯ್ಯ ಅವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ನೆಲಸಂಸ್ಕೃತಿ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಂಗಭೂಮಿಯು ಕಲಾವಿದರನ್ನು, ಕಲಾವಿದರಾಗುವ ಮಕ್ಕಳನ್ನು ಪೋಷಣೆ ಮಾಡುತ್ತದೆ. ಇಂತಹ ರೂಢಿಗಳನ್ನು ರೂಢಿಸಿಕೊಂಡಾಗ ನಮ್ಮ ಸಿಟ್ಟು ಸೆಡು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಆದಿಮಕ್ಕೆ ಈ ಹಿಂದೆ ಬಂದಿದ್ದಾಗ ಒಂದು ದಿನಕ್ಕೆ ಒಂದು ರೂಪಾಯಿ, ಅಡುಗೆ ಮಾಡುವ ಮೊದಲು ಒಂದು ಹಿಡಿ ಅಕ್ಕಿ ತನ್ನಿ ಎಂದು ಕೋಟಗಾನಹಳ್ಳಿ ರಾಮಯ್ಯ ಹೇಳಿದ್ದರು. ಅವರ ಯೋಚನೆ ಚೆನ್ನಾಗಿದೆ. ಹಾಗೆಯೇ ಮುಂದುವರೆಸಿ ಎಂದು ಹೇಳಿದ್ದೆ ಎಂದು ನೆನಪಿಸಿಕೊಂಡರು.
ತಂದೆ, ತಾಯಿಯಿಂದ ಮಕ್ಕಳು ದಾನ ಮಾಡುವುದನ್ನು ಕಲಿಯುತ್ತಾರೆ. ಅವರ ಶಕ್ತಿಮೀರಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವ ಬೆಳೆಯುತ್ತದೆ. ಈ ಕಾರಣಕ್ಕೇ ಆದಿಮವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಬೀಜ ಬಿತ್ತಿದರೆ ಅದು ಹೆಮ್ಮರವಾಗಿ ಬೆಳೆಯುತ್ತದೆ. ಆದ್ದರಿಂದ ಈ ಜಾಗವನ್ನು ಉಳಿಸುವುದು, ಬೆಳೆಸುವುದು ನಿಮಗೆ ಬಿಟ್ಟಿದ್ದು ಎಂದು ಕಿವಿಮಾತು ಹೇಳಿದರು.
ಆದಿಮದ ಹ.ಮಾ.ರಾಮಚಂದ್ರ ಮಾತನಾಡಿ, ಕೋಲಾರ ಆಜೀವಿಕ, ಅಚಲ, ತತ್ವ ಪದಕಾರರ ನೆಲ. ಈ ನೆಲದಲ್ಲಿ ಇತ್ತೀಚಿನ ವಿದ್ಯಮಾನಗಳು ಗಮನಿಸಿದಾಗ ಮನುಷ್ಯ ವಾಸ್ತವಗಳ ಮರೆಯುತ್ತಿದ್ದಾನೆ. ಆದಿಮ-2005 ರಿಂದ ನೆಲಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ನಾಟಕಗಳು, ಜಾನಪದ ಕಲಾ ಪ್ರಕಾರಗಳು ಪ್ರದರ್ಶಿಸಿಕೊಂಡು ಬಂದಿದೆ. ೨೦೯ ಹುಣ್ಣಿಮೆ ಹಾಡು, ಜತೆಗೆ ಮಕ್ಕಳ ಬೇಸಿಗೆ ಶಿಬಿರ ಚುಕ್ಕಿಮೇಳ, ಈ ವರ್ಷದಿಂದ ರಂಗಶಿಕ್ಷಣ ಕೇಂದ್ರ ಆರಂಭವಾಗಿದೆ ಎಂದು ತಿಳಿಸಿದರು.
ಜೆ.ಪಿ.ವಿಚಾರ ವೇದಿಕೆ ಸಂಚಾಲಕ ಆರ್.ದಯಾನಂದ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್,
ಚಂದ್ರು ನಿರ್ದೇಶನದಲ್ಲಿ ಶ್ರೀಕೃಷ್ಣ ಆಲನಹಳ್ಳಿ ಕಾದಂಬರಿ ಆಧಾರಿತ ನಾಟಕ ಪರಸಂಗದ ಗೆಂಡೆತಿಮ್ಮ ರೂಪಾಂತರ ತಂಡದಿಂದ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ನೀಲಕಂಠೇಗೌಡ, ಉಪನ್ಯಾಸಕ ಜೆ.ಜಿ.ನಾಗರಾಜ್, ಶಿಕ್ಷಕ ನಾರಾಯಣಸ್ವಾಮಿ, ಮಂಜು ಕಡತೂರು, ಕಾಳಿದಾಸ್, ಡಿ.ಆರ್.ರಾಜಪ್ಪ, ವೆಂಕಟಸ್ವಾಮಿ, ಕೊಂಡರಾಜನಹಳ್ಳಿ ಮಂಜುಳಾ ಹಾಜರಿದ್ದರು.